ಇತಿಹಾಸ, ಪರಂಪರೆ, ಸಂಸ್ಕೃತಿ ಅರಿತುಕೊಳ್ಳಬೇಕು

ವಿಶ್ವ ಪಾರಂಪರ ಸಪ್ತಾಹ ಹಾಗೂ ಶಾಶ್ವತ ಛಾಯಾಚಿತ್ರ ಪ್ರದರ್ಶನ, ಗ್ಯಾಲರಿ ಸಹಿತ ವ್ಯಾಖ್ಯಾನ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಡವರ ಜಾನಪದ ನೃತ್ಯ ಗಮನ ಸೆಳೆಯಿತು.
ವಿಶ್ವ ಪಾರಂಪರ ಸಪ್ತಾಹ ಹಾಗೂ ಶಾಶ್ವತ ಛಾಯಾಚಿತ್ರ ಪ್ರದರ್ಶನ, ಗ್ಯಾಲರಿ ಸಹಿತ ವ್ಯಾಖ್ಯಾನ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಡವರ ಜಾನಪದ ನೃತ್ಯ ಗಮನ ಸೆಳೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಪಾರಂಪರ ಸಪ್ತಾಹ
  • ಮಡಿಕೇರಿ ಕೋಟೆ ಆವರಣದಲ್ಲಿ ಕಾರ್ಯಕ್ರಮ
  • ನ. 25 ರವರೆಗೆ ನಡೆಯುವ ವಿಶ್ವ ಪಾರಂಪರ ಸಪ್ತಾಹ
ಮಡಿಕೇರಿ:
ಕೊಡಗಿನ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಮೈಸೂರು, ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ನ. 25 ರವರೆಗೆ ನಡೆಯುವ ವಿಶ್ವ ಪಾರಂಪರ ಸಪ್ತಾಹ ಹಾಗೂ ಶಾಶ್ವತ ಛಾಯಾಚಿತ್ರ ಪ್ರದರ್ಶನ, ಗ್ಯಾಲರಿ ಸಹಿತ ವ್ಯಾಖ್ಯಾನ ಕೇಂದ್ರ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಕೊಡಗು ಜಿಲ್ಲೆಗೆ ತನ್ನದೇ ಆದ ಇತಿಹಾಸವಿದ್ದು, 1600 ವರ್ಷಗಳ ಹಿಂದೆಯೇ ಕೊಡಗನ್ನು ಹಲವರು ಆಡಳಿತ ಮಾಡಿದ್ದರು. ಕೊಡಗಿನ ಇತಿಹಾಸ, ಸಂಸ್ಕೃತಿ, ಪರಂಪರೆ ಕಲೆಗಳು ಶ್ರೀಮಂತಿಕೆ ಹೊಂದಿದ್ದು, ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಂತಾಗಬೇಕು. ಆ ನಿಟ್ಟಿನಲ್ಲಿ ಕೋಟೆಯಲ್ಲಿ ಇತಿಹಾಸದ ಪಾರಂಪರಿಕ ಛಾಯಾಚಿತ್ರ ಪ್ರದರ್ಶನ ಮತ್ತಿತರ ಕಲಾ ಚಟುವಟಿಕೆಗಳು ನಡೆಯುವಂತಾಗಬೇಕು. ನಗರದ ಕೋಟೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಒದಗಿಸಲಾಗುವುದು. ಕೋಟೆಯನ್ನು ಶಾಶ್ವತ ಪಾರಂಪರಿಕ ಕೇಂದ್ರವನ್ನಾಗಿ ಮಾಡುವಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು. ಕಲೆ, ಸಂಸ್ಕೃತಿ, ಸಾಹಿತ್ಯ. ಪರಂಪರೆ ಸಂಬAಧ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಕಾರ್ಯಕ್ರಮಗಳು ಸಹ ನಡೆಯುವಂತಾಗಬೇಕು. ಸಾರ್ವಜನಿಕರ ವೀಕ್ಷಣೆಗೂ ಅವಕಾಶವಾಗುವಂತಾಗಬೇಕು.
ಕೊಡಗು ಜಿಲ್ಲೆಗೆ ಅನನ್ಯ ಇತಿಹಾಸವಿದ್ದು, ರಾಜ್ಯದಲ್ಲಿ ಕದಂಬರು, ಹೊಯ್ಸಳರು, ವಿಜಯನಗರ ಹಾಗೂ ಮೈಸೂರು ರಾಜ ಅರಸರು ಹೀಗೆ ಹಲವರು ಆಡಳಿತ ಮಾಡಿದ್ದಾರೆ. ಕೊಡಗಿನ ರಾಜರು ಸಹ ಆಡಳಿತ ಮಾಡಿದ್ದಾರೆ. ಈ ಬಗ್ಗೆ ಇತಿಹಾಸವನ್ನು ಅಧ್ಯಯನ ಮಾಡುವಂತಾಗಬೇಕು.
ಕೊಡಗು ಮತ್ತು ಮೈಸೂರು ಜಿಲ್ಲೆಗೆ ಅವಿನಾಭಾವ ಸಂಬAಧವಿದ್ದು, ಮೈಸೂರು ದಸರಾ ಸಂದರ್ಭದಲ್ಲಿ ಮಡಿಕೇರಿಯಲ್ಲಿಯೂ ದಸರಾ ನಡೆಯುವುದು ವಿಶೇಷ. ಅದರಲ್ಲೂ ಮೈಸೂರಿನಲ್ಲಿ ಹಗಲಿನಲ್ಲಿ ದಸರಾ ನಡೆದ ನಂತರ ಮಡಿಕೇರಿಯಲ್ಲಿ ರಾತ್ರಿ ದಸರಾ ಆಚರಣೆ ಮೈಸೂರಿಗೆ ಕೊಡುವ ಗೌರವವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ಪಾರಂಪರಿಕ ಸ್ಥಳಗಳಲ್ಲಿ ಹಲವು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವಂತಾಗಬೇಕು. ಜಿಲ್ಲೆಯ ಪರಂಪರೆ, ಇತಿಹಾಸ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ನಗರದ ಕೋಟೆ ಬಹಳಷ್ಟು ಸುಧಾರಣೆಯಾಗಿದ್ದು, ಇನ್ನೂ ಸುಧಾರಣೆಯಾಗಬೇಕಿದೆ. ಕೋಟೆಯ ಒಳ ಆವರಣದಲ್ಲಿರುವ ಕಟ್ಟಡವನ್ನು ನಿಯಮಾನುಸಾರ ತೆರವುಗೊಳಿಸಲು ಕ್ರಮವಹಿಸಬೇಕು. ಪಾರಂಪರಿಕ ಕಟ್ಟಡದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವಂತಾಗಬೇಕು. ಕೋಟೆಯನ್ನು ಅಭಿವೃದ್ಧಿಪಡಿಸುವಲ್ಲಿ ಎಲ್ಲರ ಸಲಹೆ, ಸಹಕಾರ ಅತ್ಯಗತ್ಯ ಎಂದರು.
ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕ ಸುಜಿತ್ ನಯನ್ ಮಾತನಾಡಿ ಮಡಿಕೇರಿ ಕೋಟೆ ಪುನಶ್ಚೇತನ ಕಾಮಗಾರಿಗೆ ರಾಜ್ಯ ಸರ್ಕಾರದಿಂದ 10 ಕೋಟಿ ರೂ. ಬಿಡುಗಡೆಯಾಗಿದ್ದು, ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ, ಇದೊಂದು ಪಾರಂಪರಿಕ ಕಟ್ಟಡವಾಗಿ ಉಳಿಯಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಸಹಕಾರ ನೀಡಿದೆ. ಇಲ್ಲಿ ವಸ್ತು ಪ್ರದರ್ಶನ ಶಾಶ್ವತವಾಗಿ ಮುಂದುವರಿಯಲಿದೆ ಎಂದು ಹೇಳಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ರಾಣಿ ಮಾಚಯ್ಯ ಮಾತನಾಡಿದರು. ಪುರಾತತ್ವ ಇಲಾಖೆ ಅಧೀಕ್ಷಕ ಡಾ. ಆರ್.ಎನ್. ಕುಮಾರನ್, ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ. ರೇಖಾ, ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ಸದಸ್ಯರು ಇತರರು ಇದ್ದರು.
ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿ ನಡೆದ ವಿಶ್ವ ಪಾರಂಪರ ಸಪ್ತಾಹ ಹಾಗೂ ಶಾಶ್ವತ ಛಾಯಾಚಿತ್ರ ಪ್ರದರ್ಶನ, ಗ್ಯಾಲರಿ ಸಹಿತ ವ್ಯಾಖ್ಯಾನ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ಒಮದು ರೀತಿಯಲ್ಲಿ ಸಾಂಸ್ಕೃತಿಕ ಸಂಗಮದAತಿತ್ತು. ಮಡಿಕೇರಿ ಕೊಡವ ಸಮಾಜದ ತಂಡದವರಿAದ ಉಮ್ಮತ್ತಾಟ್ ಕಲಾಪ್ರದರ್ಶನ ಗಮನ ಸೆಳೆಯಿತು. ಕಚ್ಚಿದುಡಿ ಕೂಟದವರು ಬಾಳೋಪಾಟ್, ಬೊಳಕಾಟ್ ಹಾಗೂ ಕೋಲಾಟ ಕಲಾ ಪ್ರದರ್ಶನ ನೀಡಿದರು. ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಆಗಮಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಗಣ್ಯರನ್ನು ಕೊಡವ ಸಾಂಪ್ರದಾಯಕ ದಿರಿಸು ಧರಿಸಿದ ಪುರುಷರು ಮತ್ತು ಮಹಿಳೆಯರು ಸಭಾ ಕಾರ್ಯಕ್ರಮ ಏರ್ಪಾಡಾಗಿದ್ದ ಕೋಟೆ ಹಳೇ ವಿಧಾನಸಭಾಂಗಣಕ್ಕೆ ಕರೆತಂದರು. ಹಳೆಯ ನಾಣ್ಯ, ನೋಟುಗಳ ಪ್ರದರ್ಶನವೂ ಗಮನ ಸೆಳೆಯಿತು. ಪುರಾತನ, ಐತಿಹಾಸಿಕ ಹಾಗೂ ಸಮಕಾಲಿನ ನಾಣ್ಯ, ನೋಟುಗಳು ಇತಿಹಾಸದ ಪರಿಚಯ ಮಾಡಿಕೊಡುವಲ್ಲಿ ಸಫಲವಾಯಿತು. ಕೋಟೆ ಆವರಣದಲ್ಲಿ ಏರ್ಪಡಿಸಲಾಗಿರುವ ಛಾಯಾ ಚಿತ್ರ ಪ್ರದರ್ಶನ ಇತಿಹಾಸಕ್ತರನ್ನು ವಿಶೇಷವಾಗಿ ಸೆಳೆಯುತ್ತಿದೆ. ಕೊಡಗಿನ ಐತಿಹಾಸಿಕ ಸ್ಥಳಗಳ ಹಳೆಯ ಫೋಟೋಗಳು ಮೌನವಾಗಿ ಹಲವು ಕತೆಗಳನ್ನು ಇಲ್ಲಿ ಹೇಳುತ್ತಿವೆ.
"

ಅಸ್ಪರ್ಶೀಯ ಪ್ರಾಚೀನ ಸಂಪತ್ತುಗಳಾದ ಕಲೆ, ಸಂಸ್ಕೃತಿಯ ಜತೆಗೆ ಸ್ಪರ್ಶೀಯ ಸಂಪತ್ತುಗಳಾದ ಪಾರಂಪರಿಕ ಕಟ್ಟಗಳ ರಕ್ಷಣೆ ಅಗತ್ಯವಿದೆ. ಕೊಡಗಿನ ಇತಿಹಾಸದ ಬಗ್ಗೆ ಇನ್ನಷ್ಟೂ ವಿಸ್ತಾರವಾಗಿ ಸಂಶೋಧನೆ ಆಗಬೇಕು. ಇಲ್ಲಿನ ಐತಿಹಾಸಿಕ ಮಹತ್ವ ಈಗಿನ ತಲೆಮಾರಿಗೆ ತಿಳಿಸಬೇಕು. ಮಡಿಕೇರಿ ಕೋಟೆಯ ರಕ್ಷಣೆ ಇನ್ನೂ ಹೆಚ್ಚಿನ ರೀತಿಯಲ್ಲಿ ಆಗಬೇಕು. ಇಲ್ಲಿ ವಸ್ತು ಪ್ರದರ್ಶನ ಪ್ರತಿನಿತ್ಯ ಇರುವಂತಾಗಬೇಕು. ಈ ಬಗ್ಗೆ ಸಮಗ್ರ ಡಿಪಿಆರ್ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.

"

ಕೋಟ್ ಕೋಟೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಪ್ರವಾಸಿಗರಿಗೆ ಮಾಹಿತಿ ಕೊಡುವ ಕೆಲಸ ಆಗಬೇಕಿದೆ. ಮೊದಲಿಗೆ ಹೋಲಿಸಿದರೆ ಕೋಟೆಯ ಪರಿಸ್ಥಿತಿ ಉತ್ತಮವಾಗಿದೆ. ಇನ್ನೂ ಸುಧಾರಿಸಲಾಗುವುದು. ಪ್ರವಾಸಿಗರನ್ನು ಸೆಳೆಯುವ ಆಕರ್ಷಣೆ ಇರಬೇಕು. ಮುಂದಿನ ಪೀಳಿಗೆಗೆ ಸಂಸ್ಕೃತಿ ಹಸ್ತಾಂತರ ಆಗಬೇಕು. ಕೋಟೆ ಆವರಣದಲ್ಲಿ ಇರುವ ಹಳೇ ನ್ಯಾಯಾಲಯ ನೆಲಸಮ ಮಾಡಬೇಕು. ಹಳೆ ಷೆಡ್, ಉಪಕರಣಗಳನ್ನು ಸ್ಥಳಾಂತರ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೋಟೆಯ ಸಭಾಂಗಣ ಕೊಡುವ ವ್ಯವಸ್ಥೆ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net