ಇಂದಿನಿಂದ ಹೈ ಪ್ಲೇಯರ್ಸ್ ಬೊಳ್ಳಿ ಕಪ್ ಹಾಕಿ ಟೂರ್ನಿ

ಹಾಕಿ ಟೂರ್ನಿ (ಸಾಂದರ್ಭಿಕ ಚಿತ್ರ)
ಹಾಕಿ ಟೂರ್ನಿ (ಸಾಂದರ್ಭಿಕ ಚಿತ್ರ)
Published on
ವಿರಾಜಪೇಟೆ: ತಾಲೂಕಿನ ಬಿಟ್ಟಂಗಾಲ ಪಂಚಾಯಿತಿಗೆ ಒಳಪಡುವ ಬೇರಳಿ ನಾಡಿನ ವಿ.ಬಾಡಗ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಡಿ.21ರಿಂದ ಐದು ದಿನಗಳ ಕಾಲ ಬಿಟ್ಟಂಗಾಲ, ಹಾತೂರು, ಬಿ.ಶೆಟ್ಟಿಗೇರಿ ಪಂಚಾಯಿತಿ, ಬೇರಳಿ ನಾಡ್, ಕುತ್ತ್ ನಾಡ್, ಬೊಟ್ಟಿಯತ್ ನಾಡ್, ಮೂರು ಪಂಚಾಯಿತಿ ಮೂರು ನಾಡಿನಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬಗಳ ನಡುವಿನ ನಾಲ್ಕನೇ ವರ್ಷದ ಹೈ ಪ್ಲೇಯರ್ಸ್ ಬೊಳ್ಳಿ ಕಪ್ ಆರಂಭವಾಗಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಹೈ ಪ್ಲೇಯರ್ಸ್ ಹಾಕಿ ಅಡ್ವೈಸರಿ ಕಮಿಟಿ ಅಧ್ಯಕ್ಷ ಮಳವಡ ಗಿರೀಶ್ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ಹಾಕಿ ತಂಡದ ಮಾಜಿ ಆಟಗಾರ ಒಲಿಂಪಿಯನ್ ಬಾಳೆಯಡ ಕಾಳಯ್ಯ ಸುಬ್ರಮಣಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಆಪ್ತ ಸಲಹೆಗಾರ ಎ.ಎಸ್.ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಂಎಲ್ಸಿ ಮಂಡೆಪಂಡ ಸುಜಾ ಕುಶಾಲಪ್ಪ, ಭಾರತೀಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಂಡ ಲವ ಕುಮಾರ್, ಟ್ರೋಫಿ ದಾನಿಗಳು, ವಿರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ಅಮ್ಮಣಿ ಚಂಡ ರವಿ ಉತ್ತಪ್ಪ, ಶಾಲಾ ಮುಖ್ಯಶಿಕ್ಷಕಿಯಾದ ಗೀತಾಂಜಲಿ, ಹೈ ಪ್ಲೇಯರ್ಸ್ ಕ್ಲಬ್ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿರಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ ನಂತರ ಅಪ್ಪಂಡೇರಂಡ ಹಾಗೂ ಮುರುವಂಡ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ನಂತರ 11.30ಕ್ಕೆ ತೀತಿಮಾಡ ಹಾಗೂ ಕಂಜಿತಂಡ, ಮಧ್ಯಾಹ್ನ 2.30ಕ್ಕೆ ಕುಪ್ಪಂಡ ಹಾಗೂ ಕೋಲತಂಡ, ಕೊನೆಯ ಪಂದ್ಯ ಕೇಳಪಂಡ ಹಾಗೂ ಅಮ್ಮಣಿಚಂಡ ನಡುವೆ ನಡೆಯಲಿದೆ. ಫೈನಲ್ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭ ಡಿ.25ರಂದು ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net