ಶ್ರವಣ ಪ್ರತಿಯೊಬ್ಬರ ಮಹತ್ವದ ಅಂಗ

ಜಾಗೃತಿ ಜಾಥಾಗೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಎ.ಜೆ.ಲೋಕೇಶ್ ಅವರು ಚಾಲನೆ ನೀಡಿದರು. ಡಾ.ನಂಜುಂಡಯ್ಯ, ಡಾ.ಅಭಿನಂದನ್, ಡಾ.ಪೂಜಾ ಇತರರಿದ್ದರು.
ಜಾಗೃತಿ ಜಾಥಾಗೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಎ.ಜೆ.ಲೋಕೇಶ್ ಅವರು ಚಾಲನೆ ನೀಡಿದರು. ಡಾ.ನಂಜುಂಡಯ್ಯ, ಡಾ.ಅಭಿನಂದನ್, ಡಾ.ಪೂಜಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರವಣ ಪ್ರತಿಯೊಬ್ಬರ ಮಹತ್ವದ ಅಂಗ
  • ವಿಶ್ವ ಶ್ರವಣ ದಿನಾಚರಣೆಯಲ್ಲಿ ತಜ್ಞ ವೈದ್ಯರ ಅಭಿಮತ
ಮಡಿಕೇರಿ: ಶ್ರವಣ ಪ್ರತಿಯೊಬ್ಬರ ಮಹತ್ವದ ಅಂಗ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಹೇಳಿದರು.
ನಗರದ ರಾಜಾಸೀಟು ಉದ್ಯಾನವನ ಆವರಣದಲ್ಲಿ ವಿಶ್ವ ಶ್ರವಣ ದಿನ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೬ ವರ್ಷದೊಳಗಿನ ಮಕ್ಕಳಲ್ಲಿ ಶ್ರವಣದೋಷ ಉಂಟಾದಲ್ಲಿ ಅಗತ್ಯ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಬಹುದಾಗಿದೆ. ಸುಮಾರು ೮ ಲಕ್ಷ ರೂ. ವೆಚ್ಚವಾಗಲಿದ್ದು, ಸರ್ಕಾರವೇ ಭರಿಸಲಿದೆ. ಈಗಾಗಲೇ ಜಿಲ್ಲೆಯಲ್ಲಿ ಒಂದು ಮಗುವಿಗೆ ಸರ್ಜರಿಯಾಗಿದ್ದು, ಇನ್ನೊಂದು ಮಗುವನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ ಮಾತನಾಡಿ, ಶ್ರವಣ ಬಗ್ಗೆ ತಿಳಿದವರೇ ತಪ್ಪು ಮಾಡುತ್ತಿದ್ದಾರೆ. ಹುಟ್ಟಿದ ಎಲ್ಲಾ ಮಕ್ಕಳಿಗೂ ಶ್ರವಣ ಪರೀಕ್ಷೆ ಮಾಡಬೇಕು. ಶ್ರವಣ ದೋಷ ಉಂಟಾದಲ್ಲಿ ಇಡೀ ಕುಟುಂಬವೇ ಪರಿತಪಿಸಬೇಕಾಗುತ್ತದೆ. ಇದರಿಂದ ಸಮಾಜಕ್ಕೂ ನಷ್ಟ, ಆದ್ದರಿಂದ ಶ್ರವಣ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಡಾ.ಎ.ಜೆ.ಲೋಕೇಶ್ ಮಾತನಾಡಿ, ಕಿವಿ ಸಂಬಂಧಿತ ತೊಂದರೆಗಳಿಗೆ ಶೀಘ್ರ ಚಿಕಿತ್ಸೆ ಪಡೆಯುವ ಅಗತ್ಯತೆ ಹಾಗೂ ಹೆಚ್ಚು ಶಬ್ದದ ಮಟ್ಟದಲ್ಲಿ ಇಯರ್ ಪೋನ್ ಬಳಕೆಯನ್ನು ತಪ್ಪಿಸುವ ಕುರಿತು ಸಲಹೆ ನೀಡಿದರು.
ಸ್ಥಾನಿಕ ವೈದ್ಯಾಧಿಕಾರಿ ಡಾ.ಅಭಿನಂದನ್ ಮಾತನಾಡಿ, ಪ್ರತಿಯೊಬ್ಬರ ಸಮೂಹ ಸಂವಹನಕ್ಕೆ ಶ್ರವಣ ಅತೀ ಮುಖ್ಯ ಅಂಗವಾಗಿದೆ. ಆದ್ದರಿಂದ ಈ ಬಗ್ಗೆ ಉದಾಸೀನ ಮಾಡದೆ ತಜ್ಞ ವೈದ್ಯರಿಂದ ಪರೀಕ್ಷಿಸಿ ಕೊಳ್ಳಬೇಕು ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥರಾದ ಡಾ.ಶ್ವೇತಾ ಮಾತನಾಡಿ, ಶ್ರವಣ ಆರೋಗ್ಯವು ಸಮಗ್ರ ಆರೋಗ್ಯದ ಅವಿಭಾಜ್ಯ ಅಂಗವಾಗಿದ್ದು, ಶ್ರವಣ ದೋಷ ತಡೆಗಟ್ಟುವಿಕೆ, ಶೀಘ್ರ ತಪಾಸಣೆ ಹಾಗೂ ಸಮುದಾಯ ಜಾಗೃತಿಯ ಮೂಲಕ ಅದನ್ನು ಉತ್ತೇಜಿಸಬೇಕೆಂದು ತಿಳಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಪೂಜಾ ಮಾತನಾಡಿ, ಶ್ರವಣವು ಕೇವಲ ಒಂದು ಇಂದ್ರಿಯವಲ್ಲ. ಅದು ಮಗುವಿನ ಭವಿಷ್ಯದ ಬಾಗಿಲು ಎಂದ ಅವರು, ಮಗು ಸ್ಪಷ್ಟವಾಗಿ ಕೇಳಿಸಿಕೊಂಡಾಗ ಅದು ಆತ್ಮವಿಶ್ವಾಸದಿಂದ ಮಾತನಾಡುತ್ತದೆ. ಸ್ಪಷ್ಟವಾಗಿ ಕಲಿಯುತ್ತದೆ. ಹಾಗೆಯೇ ಸ್ವಪ್ನಗಳನ್ನು ದೊಡ್ಡದಾಗಿ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.
ಜಾಗೃತಿ ಅಭಿಯಾನದ ಭಾಗವಾಗಿ ಆಯೋಜಿಸಲಾದ ಪೋಸ್ಟರ್ ಹಾಗೂ ಮೀಮ್ಸ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮುದಾಯದಲ್ಲಿ ಕಿವಿ ಆರೈಕೆಗೆ ಆದ್ಯತೆ ನೀಡುವ ಬಗ್ಗೆ ಪರಿಣಾಮಕಾರಿಯಾಗಿ ಮಾಹಿತಿ ನೀಡಲಾಯಿತು.
ಶ್ರವಣ ಶಕ್ತಿ ದೋಷ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಸನತ್ ಕುಮಾರ್, ಡಾ.ಸಾತ್ಯಕಿ, ಡಾ.ನಳಿನ, ಡಾ.ಶರತ್ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಡಾ.ಮೆರಿನ್ ಇತರರಿದ್ದರು.
ಗಮನ ಸೆಳೆದ ಬೀದಿನಾಟಕ
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗ ವತಿಯಿಂದ ವಿಶ್ವ ಶ್ರವಣ ದಿನ ಪ್ರಯುಕ್ತ ಸಂಸ್ಥೆಯ ಎರಡನೇ ವರ್ಷದ ಪದವಿ ವೈದ್ಯಕೀಯ ವಿದ್ಯಾರ್ಥಿಗಳಿಂದ ನಗರದ ರಾಜಾಸೀಟು ಉದ್ಯಾನವನ ಆವರಣದಲ್ಲಿ ಶ್ರವಣದ ಮಹತ್ವ ಕುರಿತು ಬೀದಿನಾಟಕ ಮೂಲಕ ಜಾಗೃತಿ ಮತ್ತು ಜಾಥ ಕಾರ್ಯಕ್ರಮ ನಡೆಯಿತು. ತಜ್ಞ ವೈದ್ಯರನ್ನು ಭೇಟಿ ಮಾಡಿ, ಕಾಲ ಕಾಲಕ್ಕೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಬೀದಿನಾಟಕ ಪ್ರದರ್ಶನ ಮೂಲಕ ಜಾಗೃತಿ ಮೂಡಿಸಿದರು.
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಹೆಚ್ಚಿನದ್ದಾಗಿದೆ. ಆ ಹಿನ್ನೆಲೆಯಲ್ಲಿ ಕಿವಿಗೆ ಯಾವುದೇ ವಸ್ತುವನ್ನು ಬಳಸಬಾರದು. ಮಕ್ಕಳಲ್ಲಿ ಕಿವಿ ಸ್ಪಷ್ಟವಾಗಿ ಕೇಳುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಶ್ರವಣ ದೋಷ ಇದ್ದಲ್ಲಿ ಹತ್ತಿರದ ತಜ್ಞ ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಬೇಕು. ಸೂಕ್ಷ್ಮ ಭಾಗವಾದ ಕಿವಿಗೆ ಯಾವುದೇ ರೀತಿಯ ವಸ್ತುಗಳನ್ನು ಬಳಸಬಾರದು. ತಜ್ಞ ವೈದ್ಯರನ್ನೇ ಸಂಪರ್ಕಿಸಿ ಪರೀಕ್ಷಿಸಿಕೊಳ್ಳಬೇಕು ಎಂದು ವೈದ್ಯಕೀಯ ವಿದ್ಯಾರ್ಥಿಗಳ ತಂಡದವರು ಬೀದಿ ನಾಟಕ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಜಾಗೃತಿ ಜಾಥಾಗೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಎ.ಜೆ.ಲೋಕೇಶ್ ಅವರು ಚಾಲನೆ ನೀಡಿದರು. ಜಾಥವು ರಾಜಾಸೀಟು ರಸ್ತೆ ಮೂಲಕ ನಗರದ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮೂಲಕ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆ ತಲುಪಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net