ಕುಶಾಲನಗರದ ಬಸವೇಶ್ವರ ಬಡಾವಣೆ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ 0-6 ವರ್ಷದ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು. ಡಾ. ಭರತ್, ಡಾಕ್ಟರ್ ಮೇಲಪ್ಪ ಹುಲ್ಲೂರು, ಶೃತಿ, ಈಶ್ವರಿ, ವೆನಿಲ್ಲಾ, ನಾಗಮಣಿ ಗಂಗಾಧರ, ಶೋಭಾ ಇದ್ದರು.
ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳನ್ನು ಮುಂಚಿತವಾಗಿ ಪತ್ತೆ ಹಚ್ಚುವ ಮೂಲಕ ಭವಿಷ್ಯದ ಸಮಸ್ಯೆಗಳಿಂದ ಪಾರಾಗಬಹುದು ಎಂದು ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ. ಭರತ್ ಹೇಳಿದರು. ಇಲ್ಲಿನ ಬಸವೇಶ್ವರ ಬಡಾವಣೆ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಶನಿವಾರ ಏರ್ಪಡಿಸಿದ್ದ 0-6 ವರ್ಷದ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಟ್ಟಿನಿಂದ 18 ವರ್ಷದ ಮಕ್ಕಳಿಗೆ ಬರುವ ಆರೋಗ್ಯ ಸಮಸ್ಯೆಗಳನ್ನು ಮೊದಲೇ ಪತ್ತೆ ಹಚ್ಚಿ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಅಪೌಷ್ಠಿತೆ, ದೃಷ್ಟಿ, ಶ್ರವಣದೋಷ, ಜನ್ಮಜಾತದೋಷಗಳು ಮತ್ತು ಬೆಳವಣಿಗೆಯ ಕೊರತೆಗಳನ್ನು ನಿವಾರಿಸಬಹುದು ಎಂದರು.
ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಸೈಕಾಲಜಿಕಲ್ ಕೌನ್ಸಿಲರ್ ಶೃತಿ ಮಾತನಾಡಿ ಮೆದುಳು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ತಲೆನೋವು, ಫಿಟ್ಸ್, ಸ್ಟ್ರೋಕ್ ಮತ್ತು ಡಿಮ್ಯಾನ್ಸಿಯ ಬಗ್ಗೆ ವಿವರವಾಗಿ ಮಾತನಾಡಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಸಿಗುವ ಫಿಸಿಯೋಥೆರಪಿ, ಸ್ಪೀಚ್ ಥೆರಪಿ, ಸೈಕಾಲಾಜಿಕಲ್ ಕೌನ್ಸಿಲಿಂಗ್ ಹಾಗೂ ಟೆಲಿ ನ್ಯೂರೋ ಸೌಕರ್ಯವಿದ್ದು ಎಲ್ಲವೂ ಉಚಿತವಾಗಿ ಲಭ್ಯವಿದೆ ಎಂದು ಹೇಳಿದರು.
ಇದೇ ಸಂದರ್ಭ ಅನಿಮೀಯ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ರಕ್ತ ಪರೀಕ್ಷೆ ಮಾಡಿ ರಕ್ತ ಕಡಿಮೆ ಇರುವ ಮಕ್ಕಳಿಗೆ ಔಷಧಿಗಳನ್ನು ವಿತರಿಸಿ, ಪೌಷ್ಟಿಕ ಆಹಾರಗಳನ್ನು ಕೊಡುವುದರ ಬಗ್ಗೆ ಮಾಹಿತಿ ನೀಡಲಾಯಿತು.
ಡಾಕ್ಟರ್ ಮೇಲಪ್ಪ ಹುಲ್ಲೂರು, ಶುಶ್ರೂಷಕಿ ಈಶ್ವರಿ, ನೇತ್ರ ಸಹಾಯಕರಾದ ವೆನಿಲ್ಲಾ, ಅಂಗನವಾಡಿ ಕಾರ್ಯಕತೆ ನಾಗಮಣಿ ಗಂಗಾಧರ, ಆಶಾ ಕಾರ್ಯಕರ್ತೆ ಶೋಭಾ, ಸ್ಥಳೀಯ ಪೋಷಕರು ಇದ್ದರು.