ಆರಂಭಿಕ ಹಂತದಲ್ಲೇ ರೋಗ ಪತ್ತೆಯಾಗಲಿ

ಡಾ. ಅನುಷಾ ಸಲಹೆ
test
ಸುಂಟಿಕೊಪ್ಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ತಪಾಸಣೆ ಉಚಿತ ಶಿಬಿರದಲ್ಲಿ ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ತಜ್ಞೆ ಡಾ. ಅನುಷಾ ಮಾತನಾಡಿದರು. ನಮ್ಮ ಸುಂಟಿಕೊಪ್ಪ ಬಳಗದ ಅನಿಲ್ ಕುಮಾರ್, ಸುಹೇಲ್ ಇತರರು ಇದ್ದರು.health
Published on: 

ಸುಂಟಿಕೊಪ್ಪದಲ್ಲಿ ಕ್ಯಾನ್ಸರ್ ತಪಾಸಣೆ ಶಿಬಿರ

ಸುಂಟಿಕೊಪ್ಪ: ಆರೋಗ್ಯ ಪಾಲನೆಗೆ ಗಮನ ಹರಿಸಬೇಕು ಎಂದು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ತಜ್ಞೆ ಡಾ. ಅನುಷಾ ಹೇಳಿದರು. ಪಟ್ಟಣದಲ್ಲಿ ಕೊಡಗು ಮೆಡ್ ಸಿಟಿ, ನಮ್ಮ ಸುಂಟಿಕೊಪ್ಪ ಬಳಗ, ಕೆಎಂಸಿ ಆಸ್ಪತ್ರೆ ಹಾಗೂ ಮೈಸೂರಿನ ಭಾರತ್ ಹಾಸ್ಪಿಟಲ್ ಆ್ಯಂಡ್ ಇನ್‌ಸ್ಟಿಟ್ಯೂಟ್ ಆಫ್ ಅಂಕಾಲಜಿ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬಾಯಿ ಕ್ಯಾನ್ಸರ್, ಶ್ವಾಸಕೋಶ, ಗರ್ಭಕಂಠ, ಸ್ತನ, ಹೊಟ್ಟೆ ಹಾಗೂ ರಕ್ತ ಸಂಬಂಧಿತ ಕ್ಯಾನ್ಸರ್ ಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ವಾಸಿ ಮಾಡಬಹುದು. ಈ ನಿಟ್ಟಿನಲ್ಲಿ ತಪಾಸಣೆ ಶಿಬಿರಗಳು ನೆರವಾಗಲಿವೆ ಎಂದರು. ಧೂಮಪಾನ, ತಂಬಾಕು, ಅಡಿಕೆಯನ್ನು ಮಿತಿ ಮೀರಿ ಸೇವಿಸುವುದು, ಮದ್ಯಪಾನ ಅಭ್ಯಾಸಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಜಾಗೃತಿ ವಹಿಸುವುದು ಅಗತ್ಯ ಎಂದರು.

ಜೀವನಶೈಲಿ ಸುಧಾರಣೆಗೊಳ್ಳಲಿ: ಯಾವುದೇ ರೋಗ ಬಾರದಂತೆ ಸುಖಮಯ ಜೀವನ ನಡೆಸಲು ಜೀವನಶೈಲಿ ಬಹಳ ಮುಖ್ಯ. ಮನೆ ಆಹಾರವನ್ನೇ ಸೇವಿಸಿ, ದಿನಚರಿಯನ್ನು ಪಾಲಿಸಬೇಕು. ಹೊರಗಿನ, ರಸ್ತೆಬದಿಯ ಆಹಾರಗಳಲ್ಲಿ ಕೃತಕ ಬಣ್ಣ ಬೆರೆಸಲಾಗಿರುತ್ತದೆ. ತಂಪು ಪಾನೀಯಗಳಲ್ಲಿ ಕಲುಷಿತ ನೀರು ಬಳಕೆ ಸಾಧ್ಯತೆ ಇರುತ್ತದೆ. ಹಾಗಾಗಿ

ಮನೆಯಲ್ಲೇ ಶುದ್ಧವಾಗಿ ತಯಾರಿಸಿದ ಪೌಷ್ಟಿಕ ಆಹಾರ ಸೇವನೆ ಮಾಡಿ ಎಂದು ಅವರು ಸಲಹೆ ನೀಡಿದರು. ಪ್ರತಿದಿನ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಮಾಡುವುದರಿಂದ ಚೈತನ್ಯ ಲಭಿಸುತ್ತದೆ. ಈ ಅಭ್ಯಾಸಗಳನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.

ವೈದ್ಯರನ್ನು ಸಂಪರ್ಕಿಸಿ: ದೀರ್ಘಕಾಲದ ಕೆಮ್ಮು ಅಥವಾ ಧ್ವನಿಯಲ್ಲಿ ಬದಲಾವಣೆ, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ದೇಹದಲ್ಲಿ ಗುಣವಾಗದ ಗಾಯಗಳು, ಸ್ತನ ಅಥವಾ ದೇಹದ ಯಾವುದೇ ಭಾಗದಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುವುದು, ನುಂಗಲು ತೊಂದರೆ, ಅಜೀರ್ಣತೆ ಮತ್ತು ದೀರ್ಘಕಾಲದ ಆಯಾಸ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಿ. ಇದು ಕ್ಯಾನ್ಸರ್ ಲಕ್ಷಣವೂ ಆಗಿರಬಹುದು ಎಂದು ಡಾ. ಅನುಷಾ ಸಲಹೆ ನೀಡಿದರು.

ಕ್ಯಾನ್ಸರ್ ಎಂದರೆ ಯಾರೂ ಭಯ ಪಡುವುದು ಬೇಡ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ನಿಗದಿತ ಔಷಧಗಳ ಬಳಕೆ ಮಾಡಿ ಆರೋಗ್ಯಕರ ಜೀವನ ರೂಪಿಸಿಕೊಳ್ಳಬೇಕೆಂದು ಡಾ. ಅನುಷಾ ಹೇಳಿದರು. ನಮ್ಮ ಸುಂಟಿಕೊಪ್ಪ ಬಳಗದ ಅನಿಲ್ ಕುಮಾರ್, ಸುಹೈಲ್ ಇತರರು ಇದ್ದರು. 50ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net