ಈ ಸಂದರ್ಭ ಮಾತನಾಡಿದ ವೈದ್ಯಾಧಿಕಾರಿ ಡಾ.ಶಿವಪ್ಪ ಗೋಟ್ಯಾಳ, ಗರ್ಭಿಣಿಯರ ಆರೋಗ್ಯ ರಕ್ಷಣೆ, ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸುವುದು ಹಾಗೂ ಸುರಕ್ಷಿತ ಹೆರಿಗೆಗೆ ಅಗತ್ಯವಾದ ಆರೋಗ್ಯ ಸೇವೆಗಳನ್ನು ಒದಗಿಸುವುದು ಅಭಿಯಾನದ ಧ್ಯೇಯವಾಗಿದೆ ಎಂದರು. ಪ್ರತಿಯೊಬ್ಬ ಗರ್ಭಿಣಿಯೂ ನಿಯಮಿತವಾಗಿ ತಪಾಸಣೆಗಳನ್ನು ಮಾಡಿಸಿಕೊಳ್ಳುವ ಮೂಲಕ ಆರೋಗ್ಯಕರ ಗರ್ಭಧಾರಣೆ ಮತ್ತು ಸುರಕ್ಷಿತ ಹೆರಿಗೆ ಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭ ಗರ್ಭಿಣಿಯರಿಗೆ ರಕ್ತದೊತ್ತಡ, ತೂಕ, ಹಿಮೋಗ್ಲೋಬಿನ್ ಪರೀಕ್ಷೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ಅಗತ್ಯ ಔಷಧ ವಿತರಿಸುವುದರೊಂದಿಗೆ ಪೌಷ್ಟಿಕ ಆಹಾರ, ಆರೋಗ್ಯಕರ ಜೀವನಶೈಲಿ ಹಾಗೂ ಗರ್ಭಾವಸ್ಥೆಯಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡಲಾಯಿತು. ಹೆಚ್ಚಿನ ಅಪಾಯ ಹೊಂದಿರುವ ಗರ್ಭಿಣಿಯರನ್ನು ಗುರುತಿಸಿ ಅವರಿಗೆ ವಿಶೇಷ ಸಲಹೆ ಹಾಗೂ ಮುಂದಿನ ಚಿಕಿತ್ಸೆಗೆ ಅಗತ್ಯ ಮಾರ್ಗದರ್ಶನ ಒದಗಿಸಲಾಯಿತು. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.