ಪರಿಹಾರಕ್ಕಾಗಿ ಹಾರಂಗಿ ಸಂತ್ರಸ್ತರ ಪ್ರಲಾಪ

ಹಾರಂಗಿ ಜಲಾಶಯ
ಹಾರಂಗಿ ಜಲಾಶಯ
Published on
ಮಡಿಕೇರಿ:
ಹಾರಂಗಿ ನೀರಾವರಿ ಯೋಜನೆಗಾಗಿ ಭೂಮಿ ಕಳೆದಕೊಂಡವರ ಪುನರ್ವಸತಿ ವಿಷಯ ಮತ್ತೆ ತೂಗುಯ್ಯಾಲೆಯಲ್ಲಿದೆ. ಅರಣ್ಯ ಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಬದಲಾಯಿಸಲು ಕೇಂದ್ರ ಸರ್ಕಾರದ ಪೂರ್ವಾನುಮೋದನೆ ಕಡ್ಡಾಯವಾಗಿದ್ದು, ರಾಜ್ಯ ಸರ್ಕಾರ ಈಗ ಪ್ರಸ್ತಾವನೆಯ ಸಿದ್ಧತೆ ನಡೆಸುತ್ತಿದೆ. ಹಾಗಾಗಿ ಸದ್ಯಕ್ಕಂತೂ ಪರಿಹಾರ ಮರೀಚಿಕೆಯಾಗಿ ಉಳಿಯುವ ಸಾಧ್ಯತೆಯೇ ಹೆಚ್ಚಾಗಿದ್ದು, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸಂತ್ರಸ್ತರ ಪರವಾಗಿ ಸದನದಲ್ಲಿ ಧ್ವನಿಯೆತ್ತುವ ಮೂಲಕ ಗಮನ ಸೆಳೆದಿದ್ದಾರೆ.
1978ರ ಅವಧಿಯಲ್ಲಿ ಹಾರಂಗಿ ಜಲಾಶಯ ನಿರ್ಮಾಣ ಕಾರ್ಯ ಆರಂಭವಾದಾಗ ಹಿನ್ನೀರು ಪ್ರದೇಶದಲ್ಲಿ ಅಪಾರ ಪ್ರಮಾಣದ ಆಸ್ತಿ - ಪಾಸ್ತಿ, ಮನೆ, ಮಠ ಕಳೆದುಕೊಂಡು ನಿರಾಶ್ರಿತರಾದವರಿಗೆ ಹಾರಂಗಿ ಜಲಾಶಯದ ಎಡಬದಿಯಲ್ಲಿ 1,057 ಎಕರೆ ಅರಣ್ಯ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲು ಸರ್ಕಾರ ಯೋಜಿಸಿತ್ತು. ಅದರಂತೆಯೇ ಜಲಾಶಯಕ್ಕಾಗಿ ತಮ್ಮ ಸರ್ವಸ್ವ ತ್ಯಾಗ ಮಾಡಿದ ಪ್ರತಿ ಕುಟುಂಬಕ್ಕೆ ಅರಣ್ಯ ಕಾಯಿದೆ 1963 ರ ಸೆಕ್ಷನ್ 28 ರಡಿ ತಲಾ 4 ಎಕರೆ ಕೃಷಿ ಭೂಮಿ, ವಾಸಕ್ಕೆ ಮನೆದಳ, ಪೂರಕವಾದ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿತ್ತು.
1978ರಿಂದಲೂ ಕಂದಾಯ ಗ್ರಾಮಕ್ಕಾಗಿ ದಶಕಗಳ ಕಾಲ ನಿರಂತರ ಹೋರಾಟ ನಡೆಸಿದ ಫಲವಾಗಿ 2017ರ ಮೇ 17ಕ್ಕೆ ಯಡವನಾಡನ್ನು ಕಂದಾಯ ಗ್ರಾಮವಾಗಿ ಸರ್ಕಾರ ಘೋಷಣೆ ಮಾಡಿತ್ತು. ಇದಕ್ಕೂ ಮೊದಲು 2015ರಲ್ಲಿ ಸರ್ಕಾರ ಮಾಡಿದ ಡಿನೋಟಿಫಿಕೇಷನ್ ಪ್ರಶ್ನಿಸಿ ಕೆಲವು ಪರಿಸರವಾದಿಗಳು ಉಚ್ಚನ್ಯಾಯಾಲಯದಲ್ಲಿ ರಿಟ್ ಪಿಟೀಷನ್ ಸಲ್ಲಿಸಿದ ಪರಿಣಾಮ ನ್ಯಾಯಾಲಯ 2021ರ ಏಪ್ರಿಲ್ 14ರಂದು ಡಿನೋಟಿಫಿಕೇಷನ್ ರದ್ದು ಮಾಡಿ ಆದೇಶ ನೀಡಿತ್ತು. ಈ ಆದೇಶ ಪಾಲನೆಗಾಗಿ ಸರ್ಕಾರ ಹಾಲಿ ಘೋಷಣೆಯಾಗಿರುವ ಕಂದಾಯ ಗ್ರಾಮವನ್ನು ರದ್ದು ಮಾಡಿದೆ.
ಈ ಬೆನ್ನಲ್ಲೇ ಸೋಮವಾರಪೇಟೆ ತಹಸೀಲ್ದಾರ್‌ಗೆ ಪತ್ರ ಬರೆದಿರುವ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾರಂಗಿ ಜಲಾಶಯದ ಎಡ ಹಾಗೂ ಬಲ ಬದಿಯ ಯಡವನಾಡು ಹಾಗೂ ಅತ್ತೂರು ಗ್ರಾಮಗಳ ಮೀಸಲು ಅರಣ್ಯದ ಅಧಿಸೂಚಿತ ವಿಸ್ತೀರ್ಣ 6870.92 ಎಕರೆ ಇದ್ದು ಈ ಜಾಗ ಮೀಸಲು ಅರಣ್ಯವಾಗಿ ಮುಂದುವರೆದಿರುವುದರಿAದ ಈ ಪ್ರದೇಶದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಒತ್ತುವರಿದಾರರಿಗೆ ಮತ್ತು ಇತರೆ ಮಂಜೂರಾತಿ ಕೋರುವ ಅರ್ಜಿದಾರರಿಗೆ ಯಾವುದೇ ಭೂ ಮಂಜೂರಾತಿಗೆ ಅವಕಾಶ ಇರುವುದಿಲ್ಲ. ಹಾಗೂ ಈ ಎರಡೂ ಗ್ರಾಮಗಳ ಖಾಸಗಿ ಜಾಗವನ್ನು ಭೂ ಪರಿವರ್ತನೆ ಮಾಡಬಾರದು ಎಂದು ನಿರ್ದೇಶನ ನೀಡಿದ್ದಾರೆ.
ಒಮ್ಮೆ ಕಂದಾಯ ಗ್ರಾಮ ಎಂದು ಘೋಷಣೆ ಆಗಿ ಮತ್ತೆ ಮೀಸಲು ಅರಣ್ಯ ಎಂದು ಸರ್ಕಾರ ಪ್ರಕಟಿಸಿರುವುದರಿಂದ ಯಡವನಾಡು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮಸ್ಥರ ಸಂಕಷ್ಟಕ್ಕೆ ಧ್ವನಿಯಾಗಿರುವ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹಾಲಿ ಅಧಿವೇಶನದಲ್ಲಿ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಡಾ. ಮಂತರ್ ಗೌಡ ಅವರ ಗಮನ ಸೆಳೆಯುವ ಸೂಚನೆಗೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಅರಣ್ಯ ಸಂರಕ್ಷಣಾ ಕಾಯ್ದೆ 1980ರ ನಿಯಮಾವಳಿಗಳ ಪ್ರಕಾರ, ಈಗ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಬದಲಾಯಿಸಲು ಕೇಂದ್ರ ಸರ್ಕಾರದ ಪೂರ್ವಾನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ, ಸಂತ್ರಸ್ತರಿಗೆ ಕಂದಾಯ ಗ್ರಾಮದ ಹಕ್ಕು ಒದಗಿಸಲು ಅರಣ್ಯ ಇಲಾಖೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ ಪ್ರಸ್ತಾವನೆ ಪುನಃ ಸಿದ್ಧಪಡಿಸುತ್ತಿದ್ದು, ಈ ಕಡತ ಅರಣ್ಯ ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಹಾರಂಗಿ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಜಮೀನು ಕಳೆದುಕೊಂಡ ಸಂತ್ರಸ್ತರ ಪುನರ್ವಸತಿಗಾಗಿ 1972ರಲ್ಲೇ ಕಂದಾಯ ಇಲಾಖೆಗೆ ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ 900 ಎಕರೆ ಹಾಗೂ ಅತ್ತೂರು ಮೀಸಲು ಅರಣ್ಯ ಪ್ರದೇಶದಲ್ಲಿ 3,000 ಎಕರೆ ಭೂಮಿಯನ್ನು ಷರತ್ತುಗಳಿಗೊಳಪಟ್ಟು ಹಸ್ತಾಂತರಿಸಲಾಗಿತ್ತು. ಈ ಹಸ್ತಾಂತರ ಪ್ರಕ್ರಿಯೆ 1980ರ ಕೇಂದ್ರ ಅರಣ್ಯ (ಸಂರಕ್ಷಣಾ) ಕಾಯ್ದೆ ಜಾರಿಗೆ ಬರುವುದಕ್ಕಿಂತ ಮುಂಚೆಯೇ ಆಗಿದ್ದರಿಂದ ಭೂಮಿಯನ್ನು ಡಿ-ನೋಟಿಫೈ ಮಾಡುವುದು ಕೇವಲ ಔಪಚಾರಿಕ ಪ್ರಕ್ರಿಯೆಯಾಗಿತ್ತು.
1978ರ ಏ. 27ಕ್ಕಿಂತ ಮುಂಚಿತವಾಗಿ ಮೀಸಲು ಅರಣ್ಯದಲ್ಲಿ ನಡೆದಿರುವ ಅನಧಿಕೃತ ಒತ್ತುವರಿ ಸಕ್ರಮಗೊಳಿಸಲು ರಾಜ್ಯ ವಿಧಾನಮಂಡಲದ ಅನುಮತಿ ಅಗತ್ಯವಿಲ್ಲವೆಂದು ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 28ಕ್ಕೆ 1974 ಮತ್ತು 1978ರಲ್ಲಿ ತಿದ್ದುಪಡಿ ತರಲಾಗಿತ್ತು. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ನಿಯಮಾವಳಿಗಳ ಪ್ರಕಾರ 1980ರ ಕಾಯ್ದೆ ಜಾರಿಗೆ ಮುನ್ನವೇ ಯೋಜನೆಗೆ ಆದೇಶ ಹೊರಡಿಸಿದ್ದರೆ ಅಂತಹ ಭೂಮಿಗೆ ಕೇಂದ್ರದ ಅನುಮೋದನೆ ಅಗತ್ಯವಿಲ್ಲವೆಂದು ಪರಿಗಣಿಸಿ, ರಾಜ್ಯ ಅರಣ್ಯ ಇಲಾಖೆ ಯಡವನಾಡು ಮೀಸಲು ಅರಣ್ಯದ 1054.87 ಎಕರೆ ಹಾಗೂ ಅತ್ತೂರು ಮೀಸಲು ಅರಣ್ಯದ 737.39 ಎಕರೆ ಭೂಮಿಯನ್ನು ಡಿ-ನೋಟಿಫೈ (ಅರಣ್ಯೀಕರಣದಿಂದ ವಿನಾಯಿತಿ) ಮಾಡಿ ಅಧಿಸೂಚನೆ ಹೊರಡಿಸಿತ್ತು.
ರಾಜ್ಯ ಸರ್ಕಾರ ಹೊರಡಿಸಿದ್ದ ಈ ಡಿ-ನೋಟಿಫಿಕೇಷನ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ 2021ರ ಮಾರ್ಚ್ 4ರಂದು ತೀರ್ಪು ನೀಡಿ, ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಕಲಂ 2ರ ಅಡಿಯಲ್ಲಿ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯದೆ ರಾಜ್ಯ ಸರ್ಕಾರ ಕರ್ನಾಟಕ ಅರಣ್ಯ ಕಾಯ್ದೆ ಕಲಂ 28ರಡಿ ಅಧಿಕಾರ ಚಲಾಯಿಸಿರುವುದು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಿದೆ. ಹಾಗಾಗಿ ಹಾರಂಗಿ ಪುನರ್ವಸತಿ ಪ್ರದೇಶವೂ ಸೇರಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಒಟ್ಟು 56 ಡಿ-ನೋಟಿಫಿಕೇಷನ್‌ಗಳನ್ನು ಹೈಕೋರ್ಟ್ ತಕ್ಷಣದಿಂದಲೇ ರದ್ದುಗೊಳಿಸಲಾಗಿದೆ.
ಹೈಕೋರ್ಟ್ ಆದೇಶದಿಂದಾಗಿ ಯಡವನಾಡು ಮತ್ತು ಅತ್ತೂರು ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ರಚಿಸಲು ಹೊರಡಿಸಲಾಗಿದ್ದ ಅಧಿಸೂಚನೆ ರದ್ದಾಗಿದೆ. ಈ ಜಮೀನುಗಳು ಪ್ರಸ್ತುತ ಕಾನೂನಾತ್ಮಕವಾಗಿ ಮತ್ತೆ ಮೀಸಲು ಅರಣ್ಯವಾಗಿಯೇ ಮುಂದುವರಿದಿವೆ. ಈ ಹಿನ್ನೆಲೆಯಲ್ಲಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರ ಕಾರ್ಯೋನ್ಮುಖವಾಗಿರುವ ಮಾಹಿತಿಯನ್ನು ಡಾ. ಜಿ. ಪರಮೇಶ್ವರ್ ನೀಡಿದ್ದಾರೆ. ಕೇಂದ್ರದ ಅಂತಿಮ ಅನುಮತಿ ದೊರೆತ ನಂತರವಷ್ಟೇ ಕಂದಾಯ ಗ್ರಾಮ ಘೋಷಣೆ ಮತ್ತು ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ ಪ್ರಕ್ರಿಯೆ ಸಾಧ್ಯವಾಗಲಿದೆ.
"

ಕೊಡಗು ಜಿಲ್ಲೆ ಕುಶಾಲನಗರ ತಾಲೂಕು ಹಾರಂಗಿ ಅಣೆಕಟ್ಟು ಯೋಜನೆಯಿಂದ ಭೂಮಿ ಕಳೆದುಕೊಂಡು ಸಂತ್ರಸ್ತರಾದವರು ಕಳೆದ 54 ವರ್ಷಗಳಿಂದ ಅತ್ತೂರು, ಯಡವನಾಡು ಹಾಗೂ ಕಾಟೇಕೊಪ್ಪಲು ಗ್ರಾಮದಲ್ಲಿ ಪುನರ್ವಸತಿ ಪಡೆದು ವಾಸಿಸುತ್ತಿದ್ದಾರೆ. ಈ ಸಂತ್ರಸ್ತರ ಹಿತ ದೃಷ್ಟಿಯಿಂದ ಉಚ್ಛ ನ್ಯಾಯಾಲಯದ ಆದೇಶದಂತೆ ರದ್ದಾಗಿರುವ ಕಂದಾಯ ಗ್ರಾಮದ ಅಧಿಸೂಚನೆಯನ್ನು ಪುನರ್ ಪರಿಶೀಲಿಸಿ ಅತ್ತೂರು, ಯಡವನಾಡು ಹಾಗೂ ಕಾಟೇಕೊಪ್ಪಲು ಗ್ರಾಮವನ್ನು ಕಂದಾಯ ಗ್ರಾಮವೆಂದು ಘೋಷಿಸುವುದರ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಆಶಾದಾಯಕ ಉತ್ತರ ಸಿಕ್ಕಿದೆ.

— ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

"

ಅರಣ್ಯ ಸಂರಕ್ಷಣಾ ಕಾಯ್ದೆ 1980ರ ನಿಯಮಾವಳಿಗಳ ಪ್ರಕಾರ, ಈಗ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಬದಲಾಯಿಸಲು ಕೇಂದ್ರ ಸರ್ಕಾರದ ಪೂರ್ವಾನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ, ಸಂತ್ರಸ್ತರಿಗೆ ಕಂದಾಯ ಗ್ರಾಮದ ಹಕ್ಕು ಒದಗಿಸಲು ಅರಣ್ಯ ಇಲಾಖೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ ಪ್ರಸ್ತಾವನೆ ಪುನಃ ಸಿದ್ಧಪಡಿಸುತ್ತಿದ್ದು, ಈ ಕಡತ ಅರಣ್ಯ ಇಲಾಖೆಯ ಪರಿಶೀಲನೆಯಲ್ಲಿದೆ.

— ಡಾ. ಜಿ. ಪರಮೇಶ್ವರ್, ಉಪಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net