ಸುಂಟಿಕೊಪ್ಪ: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರದೂರು-ಕಾಜೂರು ಉರುಸ್‌ಗೆ ಮಸ್ಜಿದುನ್ನೂರ್ ಮಸೀದಿಯ ಧರ್ಮಗುರು ಅಬ್ದುಲ್ ಹಕೀಂ ಅನ್ವಾರಿ ಶುಕ್ರವಾರ ಚಾಲನೆ ನೀಡಿದರು.
ಕಾಜೂರು ಉರುಸ್ ಮಕಾಂನಲ್ಲಿ ಧ್ವಜಾರೋಹಣ ನೆರವೇರಿಸಿದ ಅವರು, ಉರುಸ್ ಯಶಸ್ವಿಯಾಗಿ ನಡೆಯಲು ಪ್ರಾರ್ಥಿಸಿದರು. ಸ್ವಲಾತ್ ಕಮಿಟಿ ಅಧ್ಯಕ್ಷ ಸುಲೈಮಾನ್ ಸಖಾಫಿ ಮಾತನಾಡಿ, ಉರುಸ್‌ಗೆ ಶುಕ್ರವಾರ ಚಾಲನೆ ನೀಡಲಾಗಿದ್ದು, ಸೋಮವಾರ (ಏ.6) ಸಮಾರೋಪ ಸಮಾರಂಭ ನಡೆಯಲಿದೆ. ಎಲ್ಲರೂ ಉರುಸ್‌ನಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.
ಹರದೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಎ.ಮುಸ್ತಫಾ ಮಾತನಾಡಿ, ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಕಾಜೂರು ಮಕಾಂ ಉರುಸ್‌ಗೆ ಚಾಲನೆ ನೀಡಲಾಗಿದೆ. ಉರುಸ್‌ನಲ್ಲಿ ಕೊಡಗಿನ ಎಲ್ಲ ಕಡೆಗಳಿಂದಲೂ ಜನರು ಪಾಲ್ಗೊಳ್ಳುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಉರುಸ್ ಯಶಸ್ವಿಗೆ ಸಹಕರಿಸಬೇಕು ಎಂದರು.
ಮಸ್ಜಿದುನ್ನೂರು ಮುಸ್ಲಿಂ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ಲಾ, ಕಾರ್ಯದರ್ಶಿ ಅಜೀಜ್, ಖಜಾಂಜಿ ಜಕ್ರಿಯಾ, ಪ್ರಮುಖರಾದ ಯಾಕೂಬ್, ಉಮರ್ ಹಾಜಿ, ಸೈದು, ರಜಾಕ್, ಕಾದರ್, ಸಿದ್ದೀಕ್, ಕೆ.ಬಿ.ಶಂಶುದ್ದೀನ್ ಇತರರು ಇದ್ದರು.