ಶ್ರೀರಾಮಕೃಷ್ಣ ಶಾರದಾಶ್ರಮದಲ್ಲಿ ಗುರುಪೂರ್ಣಿಮೆ ಆಚರಣೆ

ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆಧ್ಯಾತ್ಮಿಕ ಶಿಬಿರ ಭಕ್ತಿಭಾವದಿಂದ ನೆರವೇರಿದವು.
ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆಧ್ಯಾತ್ಮಿಕ ಶಿಬಿರ ಭಕ್ತಿಭಾವದಿಂದ ನೆರವೇರಿದವು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀರಾಮಕೃಷ್ಣ ಶಾರದಾಶ್ರಮದಲ್ಲಿ ಗುರುಪೂರ್ಣಿಮೆ ಆಚರಣೆ
ಪೊನ್ನಂಪೇಟೆ: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆಧ್ಯಾತ್ಮಿಕ ಶಿಬಿರ ಭಕ್ತಿಭಾವದಿಂದ ನೆರವೇರಿತು.
ಬೆಳಿಗ್ಗೆ ಮಂಗಳಾರತಿ, ವೇದಘೋಷ ಹಾಗೂ ಭಜನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಶ್ರೀ ರಾಮಕೃಷ್ಣ ಪೂಜೆ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಬಾಳೆಲೆಯ ಕಾವೇರಿ ಕಲಾಸಮಿತಿಯವರಿಂದ ಭಜನೆ, ಆಧ್ಯಾತ್ಮಿಕ ಪ್ರವಚನ ಹಾಗೂ ವಿಶೇಷ ದೀಪಪೂಜೆ ನಡೆಯಿತು.
ಮಧ್ಯಾಹ್ನ ಮಹಾ ಆರತಿ, ಪ್ರಸಾದ ವಿತರಣೆ ನಡೆದವು. ಬಳಿಕ ಸ್ವಾಮಿ ವಿವೇಕಾನಂದರ ಜೀವನಾಧಾರಿತ ಸೂತ್ರ ಮತ್ತು ಸಲಾಕೆ ಗೊಂಬೆಯಾಟ ಪ್ರದರ್ಶನ ಭಕ್ತರನ್ನು ಆಕರ್ಷಿಸಿತು. ಸಂಜೆ ಡಾ.ಕೆ.ಕೆ.ಶಿವಪ್ಪ ಮತ್ತು ತಂಡದಿಂದ ವಿಶೇಷ ಭಜನಾ ಕಾರ್ಯಕ್ರಮ ಜರುಗಿತು. ಬಳಿಕ ಮಹಾ ಆರತಿಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.
ಈ ಸಂದರ್ಭ ಆಶ್ರಮದ ಅಧ್ಯಕ್ಷ ಸ್ವಾಮಿ ಪರಹಿತಾನಂದಜಿ ಮಹಾರಾಜ್ ಅವರು ಆಧ್ಯಾತ್ಮಿಕ ಪ್ರವಚನ ನೀಡಿ, ಸ್ವಾಮಿ ವಿವೇಕಾನಂದರ ಆದರ್ಶಗಳು ರಾಷ್ಟ್ರ ನಿರ್ಮಾಣಕ್ಕೆ ಪ್ರೇರಕವಾಗಿವೆ. ಭಾರತದ ಆಧ್ಯಾತ್ಮಿಕ ಪರಂಪರೆ, ಸನ್ಯಾಸಿಗಳ ತ್ಯಾಗಮಯ ಜೀವನ, ಸೇವಾ ಮನೋಭಾವ ಹಾಗೂ ಆತ್ಮಸಾಧನೆಯ ಮಹತ್ವವನ್ನು ಯುವಜನತೆ ಅರಿತುಕೊಳ್ಳಬೇಕು ಎಂದು ಹೇಳಿದರು.
ಚಿತ್ರಗಳು ಮತ್ತು ಪ್ರತಿಮೆಗಳು ಜಡ ವಸ್ತುಗಳಾಗಿದ್ದರೂ, ಅವು ಪ್ರತಿನಿಧಿಸುವ ಮಹನೀಯರು ಮತ್ತು ಆದರ್ಶಗಳಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಮಾಜದಲ್ಲಿ ಸಂಸ್ಕಾರ, ನೈತಿಕತೆ ಮತ್ತು ಪರಸ್ಪರ ಗೌರವದ ಮನೋಭಾವ ಬೆಳೆಯಬೇಕು ಎಂದು ಕರೆ ನೀಡಿದರು.
ಯತ್ಭಾವಂ ತತ್ಭವತಿ ಎಂಬ ತತ್ವವನ್ನು ಉಲ್ಲೇಖಿಸಿದ ಅವರು, ವ್ಯಕ್ತಿಯ ಭಾವನೆ ಮತ್ತು ನಂಬಿಕೆಗಳು ಅವನ ವ್ಯಕ್ತಿತ್ವವನ್ನು ರೂಪಿಸುತ್ತವೆ. ಭಾರತೀಯ ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಯುವಜನತೆ ಪ್ರಮುಖ ಪಾತ್ರವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದ ಸ್ವಾಮಿಗಳು, ಆಶ್ರಮದ ಅಭಿವೃದ್ಧಿಗೆ ನಗದು ಹಾಗೂ ವಸ್ತುರೂಪದ ದೇಣಿಗೆಗಳನ್ನು ಸ್ವಾಗತಿಸಲಾಗುತ್ತಿದೆ. ಆದಾಯ ತೆರಿಗೆ ಕಾಯ್ದೆಯ ೮೦ಜಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯವೂ ಲಭ್ಯವಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಆಶ್ರಮದ ಭಕ್ತರು, ಸಾರ್ವಜನಿಕರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net