ಗಣಗೂರು ಜನರಿಗೆ ಗುಂಡಿ ಗಂಡಾಂತರ

 ಸೋಮವಾರಪೇಟೆ ತಾಲೂಕಿನ ಗಣಗೂರು ಗ್ರಾಮದೊಳಗಿನ ಸಂಪರ್ಕ ರಸ್ತೆ ಕೆಸರುಮಯವಾಗಿರುವುದು.
ಸೋಮವಾರಪೇಟೆ ತಾಲೂಕಿನ ಗಣಗೂರು ಗ್ರಾಮದೊಳಗಿನ ಸಂಪರ್ಕ ರಸ್ತೆ ಕೆಸರುಮಯವಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಗತಿಪರ ಕೃಷಿಕರ ಗ್ರಾಮಕ್ಕೆ ಬೇಕಿದೆ ಸೌಕರ್ಯ
  • ಕಾಡಾನೆ ಹಾವಳಿ ತಪ್ಪಿಸಲು ಮನವಿ
ಸೋಮವಾರಪೇಟೆ: ತಾಲೂಕಿನ ಪ್ರಗತಿಪರ ಕೃಷಿಕರ ಗ್ರಾಮವೆಂದೇ ಹೆಸರುವಾಸಿಯಾಗಿರುವ ಗಣಗೂರು ಗ್ರಾಮದ ಜನರ ರಸ್ತೆ ಕೂಗು ಅರಣ್ಯರೋದನವಾಗಿದೆ.
ಒಂದೆಡೆ ಹಾಳಾದ ರಸ್ತೆ, ಮತ್ತೊಂದೆಡೆ ಕಾಡಾನೆಗಳ ಹಾವಳಿ ಸಮಸ್ಯೆಗಳು ಗ್ರಾಮಸ್ಥರ ಬದುಕನ್ನೇ ಹೈರಾಣಾಗಿಸಿವೆ. ಹಲವು ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತಂದಿದ್ದರೂ ಶಾಶ್ವತ ಪರಿಹಾರ ಇನ್ನೂ ದೊರೆತಿಲ್ಲ ಎಂಬುದು ಗ್ರಾಮಸ್ಥರ ಅಳಲು.
ಯಡೂಂಡೆ ಗ್ರಾಮ ರಸ್ತೆಯಿಂದ ಗಣಗೂರು ಗ್ರಾಮದವರೆಗೆ ಸುಮಾರು ಒಂದು ಕಿಲೋಮೀಟರ್ ಉದ್ದದ ಮುಖ್ಯ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿದೆ. ಏಳು ವರ್ಷಗಳ ಹಿಂದೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದ್ದರೂ, ಗುಣಮಟ್ಟದ ಡಾಂಬರೀಕರಣ ಮಾಡದ ಕಾರಣ ರಸ್ತೆ ಕೆಲವೇ ವರ್ಷಗಳಲ್ಲಿ ಹಾಳಾಗಿದೆ. ಈಗ ರಸ್ತೆಯಲ್ಲಿನ ಗುಂಡಿಗಳನ್ನು ತಪ್ಪಿಸಿಕೊಂಡು ವಾಹನ ಚಲಾಯಿಸುವುದೇ ಚಾಲಕರಿಗೆ ದೊಡ್ಡ ಸವಾಲಾಗಿದೆ.
ಗ್ರಾಮದೊಳಗಿನ ಸಂಪರ್ಕ ರಸ್ತೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಳೆಗಾಲದಲ್ಲಿ ರಸ್ತೆಗಳು ಕೆಸರುಮಯವಾಗಿ ವಾಹನ ಸಂಚಾರ ದುಸ್ತರವಾಗಿದೆ. ದ್ವಿಚಕ್ರ ವಾಹನ ಸವಾರರು ಆಗಾಗ ಜಾರಿ ಬೀಳುವ ಘಟನೆಗಳು ಸಾಮಾನ್ಯವಾಗಿವೆ. ಶಾಲಾ ಮಕ್ಕಳು, ವಯೋವೃದ್ಧರು ಹಾಗೂ ಗರ್ಭಿಣಿಯರು ತೊಂದರೆ ಅನುಭವಿಸುತ್ತಿದ್ದಾರೆ. ಜಾನುವಾರುಗಳನ್ನೂ ರಸ್ತೆ ಮೂಲಕ ಕರೆದೊಯ್ಯಲು ಭಯವಾಗುತ್ತದೆ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಒಮ್ಮೆ ಈ ರಸ್ತೆಯಲ್ಲಿ ನಾಲ್ಕು ಬಸ್‌ಗಳು ಸಂಚರಿಸುತ್ತಿದ್ದವು. ವಿದ್ಯಾರ್ಥಿಗಳು, ರೈತರು ಮತ್ತು ಸಾರ್ವಜನಿಕರು ಯಾವುದೇ ತೊಂದರೆಯಿಲ್ಲದೆ ಪಟ್ಟಣಗಳಿಗೆ ತೆರಳಿ ಕೆಲಸಗಳನ್ನು ಮುಗಿಸಿಕೊಳ್ಳುತ್ತಿದ್ದರು. ಆದರೆ, ರಸ್ತೆಯ ದುಸ್ಥಿತಿಯಿಂದಾಗಿ ಈಗ ಬೆಳಗ್ಗೆ ಒಂದೇ ಒಂದು ಖಾಸಗಿ ಬಸ್ ಮಾತ್ರ ಗ್ರಾಮಕ್ಕೆ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಉದ್ಯೋಗಸ್ಥರ ಸಂಚಾರ ಹಾಗೂ ಗ್ರಾಮಸ್ಥರ ದೈನಂದಿನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಬೆಳೆ ಸಾಗಣೆ ಕಷ್ಟ-ಆರ್ಥಿಕ ನಷ್ಟ: ಪ್ರಸ್ತುತ ಗಣಗೂರಲ್ಲಿ ಸುಮಾರು 190 ಕುಟುಂಬಗಳು ವಾಸಿಸುತ್ತಿದ್ದು, ಶೇ.95 ಕುಟುಂಬಗಳು ಕೃಷಿಯನ್ನೇ ಜೀವನೋಪಾಯವಾಗಿಸಿಕೊಂಡಿವೆ. ಸುಮಾರು 350 ಎಕರೆ ಪ್ರದೇಶದಲ್ಲಿ ಭತ್ತ, ಕಾಫಿ, ಕರಿಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಇದೇ ಮುಖ್ಯ ರಸ್ತೆ ಮತ್ತು ಸಂಪರ್ಕ ರಸ್ತೆಗಳನ್ನೇ ಅವಲಂಬಿಸಬೇಕಾಗಿದೆ. ಆದರೆ ರಸ್ತೆ ಹಾಳಾಗಿರುವುದರಿಂದ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದು, ಬೆಳೆ ಸಾಗಣೆಯೂ ವಿಳಂಬವಾಗುತ್ತಿದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ.
ತಪ್ಪದ ಗಜಸೇನೆ ಹಾವಳಿ: ಗ್ರಾಮದ ಮತ್ತೊಂದು ಪ್ರಮುಖ ಸಮಸ್ಯೆ ಕಾಡಾನೆಗಳ ಹಾವಳಿ. ಮಾಲಂಬಿ, ಬಾಣಾವಾರ ಹಾಗೂ ನಿಡ್ತ ಮೀಸಲು ಅರಣ್ಯದ ಸಮೀಪದಲ್ಲಿರುವ ಗಣಗೂರು ಗ್ರಾಮಕ್ಕೆ ಕಾಡಾನೆಗಳು ಆಗಾಗ ಲಗ್ಗೆ ಇಡುತ್ತಿವೆ. ರೈತರು ಬೆಳೆಸುವ ಭತ್ತ, ಕಾಫಿ, ಬಾಳೆ ಹಾಗೂ ಇತರ ಬೆಳೆಗಳು ಕಾಡಾನೆಗಳಿಗೆ ಆಹಾರವಾಗುತ್ತಿವೆ. ತಿಂಗಳ ಪರಿಶ್ರಮವನ್ನು ಒಂದೇ ರಾತ್ರಿ ಕಾಡಾನೆಗಳು ನಾಶಪಡಿಸುತ್ತಿರುವುದರಿಂದ ರೈತರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ಕಾಡಾನೆಗಳ ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆ ಕೆಲವೆಡೆ ಸೋಲಾರ್ ತಂತಿಬೇಲಿ ಅಳವಡಿಸಿದೆ. ಕೆಲವು ಪ್ರದೇಶಗಳಲ್ಲಿ ಆನೆ ಕಂದಕಗಳನ್ನೂ ನಿರ್ಮಿಸಲಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಸೋಲಾರ್ ಬೇಲಿಗಳು ಕಾರ್ಯನಿರ್ವಹಿಸುತ್ತಿಲ್ಲ. ಹಲವೆಡೆ ಕಂದಕಗಳು ಮಣ್ಣು ಕುಸಿತದಿಂದ ಮುಚ್ಚಿಕೊಂಡಿದ್ದು, ಅವುಗಳಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಬೇಲಿ ಇಲ್ಲದ ಪ್ರದೇಶಗಳ ಮೂಲಕ ಕಾಡಾನೆಗಳು ಗ್ರಾಮಕ್ಕೆ ನುಗ್ಗಿ ಕೃಷಿ ಭೂಮಿಯಲ್ಲಿ ಹಾಗೂ ಕೆಲವೊಮ್ಮೆ ಗ್ರಾಮದಲ್ಲೇ ಸಂಚರಿಸುತ್ತಿವೆ.
ನಾಲ್ಕು ದಶಕಗಳ ಹಿಂದೆ ಕಾಡಾನೆಗಳ ಹಾವಳಿ ಇದ್ದರೂ ಕೃಷಿಯನ್ನು ಯಾರೂ ಕೈಬಿಟ್ಟಿರಲಿಲ್ಲ. ಆನೆಗಳು ತಿಂದ ನಂತರ ಉಳಿದ ಬೆಳೆಯನ್ನಾದರೂ ರೈತರು ಕೊಯ್ದು ಬದುಕು ಸಾಗಿಸುತ್ತಿದ್ದರು. ಆದರೆ ಈಗ ಬೆಳೆ ನಷ್ಟದ ಪ್ರಮಾಣ ಹೆಚ್ಚಾಗಿದ್ದರೂ ಕೃಷಿಯ ಮೇಲಿನ ನಂಬಿಕೆಯನ್ನು ಗ್ರಾಮಸ್ಥರು ಕಳೆದುಕೊಂಡಿಲ್ಲ. ಕೃಷಿಯೇ ಬದುಕಿನ ಆಧಾರ ಎಂಬ ದೃಢ ನಂಬಿಕೆಯಿಂದ ಇಂದಿಗೂ ಭೂಮಿಯನ್ನು ಪಾಳು ಬಿಡದೆ ಬೆಳೆ ಬೆಳೆಯುತ್ತಿದ್ದಾರೆ
ಗಣಗೂರಿನಂತಹ ಕೃಷಿ ಪ್ರಧಾನ ಗ್ರಾಮಗಳಿಗೆ ರಸ್ತೆ, ಸಾರಿಗೆ ಹಾಗೂ ವನ್ಯಜೀವಿ ನಿಯಂತ್ರಣ ವ್ಯವಸ್ಥೆಗಳು ಅತ್ಯಗತ್ಯ. ಗುಣಮಟ್ಟದ ರಸ್ತೆ ನಿರ್ಮಾಣ, ಸಂಪರ್ಕ ರಸ್ತೆಗಳ ದುರಸ್ತಿ, ನಿಯಮಿತ ಬಸ್ ಸೇವೆ, ಸೋಲಾರ್ ತಂತಿಬೇಲಿಗಳ ನಿರ್ವಹಣೆ, ಆನೆ ಕಂದಕಗಳ ದುರಸ್ತಿ ಹಾಗೂ ಕಾಡಾನೆ ನಿಯಂತ್ರಣಕ್ಕೆ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸಿದರೆ ಮಾತ್ರ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಅಭಿವೃದ್ಧಿಯ ಮಾತುಗಳು ಕಾಗದದಲ್ಲೇ ಉಳಿಯದೆ, ನೆಲಮಟ್ಟದಲ್ಲಿ ಕಾರ್ಯರೂಪಕ್ಕೆ ಬರಬೇಕೆಂಬುದು ಗಣಗೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net