ಕಾವೇರಿ ತಟದಲ್ಲಿ ನೆಲೆನಿಂತ ಗುಹ್ಯ ಅಗಸ್ತ್ಯೇಶ್ವರ

 ಗುಹ್ಯ ಅಗಸ್ತ್ಯೇಶ್ವರ ದೇವಾಲಯ
ಗುಹ್ಯ ಅಗಸ್ತ್ಯೇಶ್ವರ ದೇವಾಲಯ
Published on

ಸಿದ್ದಾಪುರ:

ಹಿಂದು ಪುರಾಣಗಳಲ್ಲಿ ಸ್ಮರಿಸಲಾಗುವ ಸಪ್ತ ಪುಣ್ಯ ನದಿಗಳಲ್ಲಿ ಕಾವೇರಿಗೂ ವಿಶಿಷ್ಟ ಸ್ಥಾನವಿದೆ. ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಿಂದ ಗುಪ್ತಗಾಮಿನಿಯಾಗಿ ಹರಿಯುವ ಕಾವೇರಿ ಭಾಗಮಂಡಲದಲ್ಲಿ ತನ್ನ ಸ್ವರೂಪ ಪ್ರದರ್ಶಿಸಿ ಬಳಿಕ ಸಾಗುವ ದಾರಿಯುದ್ದಕ್ಕೂ ಅನೇಕ ಪವಿತ್ರ ಕ್ಷೇತ್ರಗಳನ್ನು ಸೃಷ್ಟಿಸಿದ್ದಾಳೆ. ಅಂತಹ ಪುಣ್ಯಕ್ಷೇತ್ರಗಳ ಪೈಕಿ ಸಿದ್ದಾಪುರದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಗುಹ್ಯ ಶ್ರೀ ಅಗಸ್ತ್ಯೇಶ್ವರ ದೇವಾಲಯವೂ ಒಂದು.

ದೇಗುಲದ ಐತಿಹ್ಯ:

ದೇವಾಲಯದ ಗರ್ಭಗುಡಿ ವೃತ್ತಾಕಾರದಲ್ಲಿದ್ದು, ವಿಶಿಷ್ಟ ವಾಸ್ತುಶೈಲಿ ಹೊಂದಿದೆ. ಗುಹ್ಯ ಅಗಸ್ತ್ಯೇಶ್ವರ ದೇವಾಲಯದ ಹಿನ್ನೆಲೆಯಲ್ಲೂ ಕಾವೇರಿಯ ಪೌರಾಣಿಕ ಕಥೆಯೇ ಪ್ರಮುಖವಾಗಿದೆ. ಅಗಸ್ತ್ಯ ಮಹರ್ಷಿಯು ಕಾವೇರಿಯನ್ನು ಕಮಂಡಲದಲ್ಲಿ ಬಂಧಿಸಿಟ್ಟಿದ್ದಾಗ ಅದು ಉರುಳಿ, ರಭಸದಿಂದ ಹರಿಯತೊಡಗಿತು. ನಂತರ ಕಾವೇರಿಯನ್ನು ತಡೆಯಲು ಅಗಸ್ತ್ಯ ಮಹರ್ಷಿ ಆಕೆಯ ಹಿಂದೆಯೇ ಧಾವಿಸಿದರು. ಮರಳಿನಿಂದ ಶಿವಲಿಂಗ ನಿರ್ಮಿಸಿ ಪೂಜಿಸಿದರೂ ಕಾವೇರಿ ತನ್ನ ಲೋಕಕಲ್ಯಾಣದ ಪಯಣ ಮುಂದುವರಿಸಿದಳು. ಗುಹ್ಯಕ್ಕೆ ಆಗಮಿಸಿದಾಗ ಅಗಸ್ತ್ಯರು ಸಪ್ತ ಮಹರ್ಷಿಗಳ ಮೊರೆ ಹೋದರು. ಪ್ರತ್ಯಕ್ಷರಾದ ಮಹರ್ಷಿಗಳು ಕಾವೇರಿಯನ್ನು ನಿಲ್ಲುವಂತೆ ಮನವಿ ಮಾಡಿದರು. ಅವರ ಕೋರಿಕೆಗೆ ಮನ್ನಣೆ ನೀಡಿದ ಕಾವೇರಿ ಕ್ಷಣಕಾಲ ಗುಹ್ಯದಲ್ಲಿ ನಿಂತಳು ಎಂಬ ನಂಬಿಕೆ ಇದೆ.

ದೇವಾಲಯದ ಬಳಿ ಇರುವ ಅಶ್ವತ್ಥ ಮರದ ಕೆಳಗೆ ಅಗಸ್ತ್ಯ ಮಹರ್ಷಿ ಮತ್ತು ಕಾವೇರಿಯ ನಡುವೆ ಸಂಧಾನ ಮಾತುಕತೆ ನಡೆಯಿತು. ಆದರೆ ಲೋಕಕಲ್ಯಾಣಕ್ಕಾಗಿ ತಾನು ಮುಂದೆ ಸಾಗಲೇಬೇಕೆಂದು ಕಾವೇರಿ ತಿಳಿಸಿ ಮುಂದಕ್ಕೆ ಹರಿದಳು. ಈ ಸ್ಥಳದಲ್ಲಿಯೇ ಅಗಸ್ತ್ಯ ಮಹರ್ಷಿ ಶಿವಲಿಂಗ ಪ್ರತಿಷ್ಠಾಪಿಸಿ ಪೂಜಿಸಿದರೆಂಬುದು ಕ್ಷೇತ್ರ ಪುರಾಣ. ಅದೇ ಇಂದಿನ ಶ್ರೀ ಅಗಸ್ತ್ಯೇಶ್ವರ ದೇವಾಲಯ ಎಂದು ಭಕ್ತರು ನಂಬಿಕೆ.
ಐದು ದಿನ ವಾರ್ಷಿಕ ಜಾತ್ರೆ:

ದೀಪಾವಳಿ ಸಂದರ್ಭದಲ್ಲಿ ದೇವಾಲಯದ ವಾರ್ಷಿಕ ಜಾತ್ರೆ ಐದು ದಿನಗಳ ಕಾಲ ನಡೆಯುತ್ತದೆ. ನರಕ ಚತುರ್ದಶಿಯಂದು ಅಗಸ್ತ್ಯೇಶ್ವರನಿಗೆ ವಿಶೇಷ ನೆರಪು ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಯಂದು ಕಾವೇರಿ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಅಮಾವಾಸ್ಯೆಯ ಜಳಕದೊಂದಿಗೆ ಉತ್ಸವ ಸಂಪನ್ನವಾಗುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ಕೇರಳ ತಮಿಳುನಾಡಿನಿಂದಲೂ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ.

ಪಿತೃಕಾರ್ಯಕ್ಕೂ ಪ್ರಸಿದ್ಧ:

ಗುಹ್ಯ ಅಗಸ್ತ್ಯೇಶ್ವರ ಕ್ಷೇತ್ರದ ಮತ್ತೊಂದು ಪ್ರಮುಖ ವಿಶೇಷವೆಂದರೆ ಪಿಂಡ ಪ್ರದಾನ ಹಾಗೂ ಪಿತೃ ತರ್ಪಣ ಸೇವೆ. ಆಷಾಢ ಅಮಾವಾಸ್ಯೆ ಮತ್ತು ದೀಪಾವಳಿಯ ಭೀಮನ ಅಮಾವಾಸ್ಯೆಯಂದು ವಿಶೇಷವಾಗಿ ಸಾವಿರಾರು ಭಕ್ತರು ಕಾವೇರಿ ತಟದಲ್ಲಿ ಪಿತೃಗಳಿಗೆ ತರ್ಪಣ ಸಲ್ಲಿಸುತ್ತಾರೆ.

ವರ್ಷದ ಪುಣ್ಯತಿಥಿ ಹಾಗೂ ಅಂತ್ಯಸಂಸ್ಕಾರದ ನಂತರವೂ ಪಿಂಡ ಪ್ರದಾನ ಸೇವೆ ಸಲ್ಲಿಸಲು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಕಾವೇರಿಯ ಪಾವಿತ್ರ್ಯ, ಅಗಸ್ತ್ಯ ಮಹರ್ಷಿಯ ಪೌರಾಣಿಕ ಹಿನ್ನೆಲೆ, ಶಿವನ ಆರಾಧನೆ ಹಾಗೂ ಪಿತೃಕಾರ್ಯಗಳ ಮಹತ್ವವನ್ನು ಒಂದೇ ಕಡೆ ಹೊಂದಿರುವ ಗುಹ್ಯ ಕ್ಷೇತ್ರ. ಹೀಗಾಗಿ ಕೊಡಗಿನ ಪ್ರಮುಖ ಧಾರ್ಮಿಕ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ತಲುಪುವ ಮಾರ್ಗ:

ಸಿದ್ದಾಪುರದಿಂದ ವಿರಾಜಪೇಟೆ ಮಾರ್ಗವಾಗಿ ಸುಮಾರು 2 ಕಿ.ಮೀ. ಕ್ರಮಿಸಿ ಬಲಕ್ಕೆ ತಿರುಗಿ 3 ಕಿ.ಮೀ. ಸಾಗಿದರೆ ಗುಹ್ಯ ಗ್ರಾಮ ತಲುಪಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net