ಸರ್ವ ಧರ್ಮೀಯರ ಬೀಡು ಗುಡುಗಳಲೆ ಗ್ರಾಮ

ಬಸವೇಶ್ವರ ದೇವಾಲಯ
ಬಸವೇಶ್ವರ ದೇವಾಲಯ
Published on
ಶನಿವಾರಸಂತೆ: ನಗರಗಳ ಗದ್ದಲದಿಂದ ದೂರವಿರುವ ಗುಡುಗಳಲೆ ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ಬದುಕನ್ನು ಪರಿಚಯಿಸುವ ಸುಂದರ ಗ್ರಾಮವಾಗಿದೆ.
ಕೊಡಗಿನ ಹಸಿರು ಹೊದಿಕೆಯ ಮಧ್ಯೆ ನೆಲೆಸಿರುವ ಗುಡುಗಳಲೆ ಗ್ರಾಮ ಪ್ರಕೃತಿಯ ನಿಶಬ್ಧ ಸೌಂದರ್ಯವನ್ನು ಹೊತ್ತಿರುವ ಸುಂದರ ಹಳ್ಳಿ. ಕಾಫಿ ತೋಟಗಳು, ಅಡಿಕೆ ಬೆಳೆ, ಮಳೆಯ ತಂಪು ಗಾಳಿ ಮತ್ತು ಬೆಟ್ಟಗುಡ್ಡಗಳ ನಡುವೆ ಗ್ರಾಮೀಣ ಬದುಕಿನ ಸೊಗಡು ಇಲ್ಲಿದೆ. 
ಗ್ರಾಮದ ಜನರ ಪ್ರಮುಖ ಜೀವನಾಧಾರ ಕೃಷಿ. ಕಾಫಿ ಹಾಗೂ ಮೆಣಸು ಬೆಳೆಗಳಿಗೆ ಇಲ್ಲಿ ವಿಶೇಷ ಮಹತ್ವವಿದ್ದು, ಮಳೆಯಾಧಾರಿತ ಕೃಷಿ ಬದುಕಿನ ಆಧಾರ. ಬೆಳಗಿನ ಹೊತ್ತಿನಲ್ಲಿ ಮಂಜು ಮುಸುಕಿದ ತೋಟಗಳು ಮತ್ತು ಪಕ್ಷಿಗಳ ಕಲರವ ಗ್ರಾಮಕ್ಕೆ ವಿಶೇಷ ಆಕರ್ಷಣೆ ನಿಡಿದೆ. 
 ಹಂಡ್ಲಿ ಗ್ರಾಮ ಪಂಚಾಯಿತಿಗೆ ಒಳಪಡುವ ಗುಡುಗಳಲೆ ಗ್ರಾಮಕ್ಕೆ ಶತಮಾನಗಳ ಹಿಂದೆ ಒಂದಷ್ಟು ಕುಟುಂಬಗಳು ಬಂದು ನೆಲೆ ಕಂಡುಕೊಂಡಿತು. ಕಾಲ ಉರುಳಿದಂತೆ ಇದೀಗ ದೊಡ್ಡ ಗ್ರಾಮವಾಗಿ ಬೆಳೆದಿದೆ. ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಗ್ರಾಮದಲ್ಲಿದ್ದು, ಕೃಷಿ ಚಟುವಟಿಕೆ ಮೇಲೆ ಜನರು ಹೆಚ್ಚು ಅವಲಂಬಿತರಾಗಿದ್ದಾರೆ. ಹಳೆಯ ಪದ್ಧತಿಯಂತೆ ಇಂದಿಗೂ ಮನೆ ಬಳಕೆಗೆ ಆಗುವಷ್ಟು ಸೊಪ್ಪು, ತರಕಾರಿಗಳನ್ನು ತಾವೇ ಬೆಳೆದುಕೊಳ್ಳುತ್ತಿದ್ದಾರೆ. ಎಲ್ಲ ಜಾತಿ, ಧರ್ಮದವರು ಒಗ್ಗೂಡಿ ಸಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ.
ಹಬ್ಬ-ಹರಿದಿನಗಳ ಸಂಭ್ರಮ: ಗ್ರಾಮದಲ್ಲಿ ಪರಂಪರೆ, ಹಬ್ಬ-ಹರಿದಿನಗಳ ಸಂಭ್ರಮ ಇನ್ನೂ ಜೀವಂತವಾಗಿದೆ. ದೇವಸ್ಥಾನ ಜಾತ್ರೆಗಳು, ಊರ ಹಬ್ಬಗಳು ಜನರನ್ನು ಒಂದಾಗಿ ಸೇರಿಸುವ ಸಾಂಸ್ಕೃತಿಕ ಬಾಂಧವ್ಯವನ್ನು ಕಟ್ಟಿಕೊಡುತ್ತವೆ. ಇತಿಹಾಸ ಪ್ರಸಿದ್ಧ ಗುಡುಗಳಲೆ ಜಯದೇವ ಜಾನುವಾರು ಜಾತ್ರೆ ಅದ್ದೂರಿಯಾಗಿ 15 ದಿನ ನಡೆಯುತ್ತದೆ. ಆ ದಿನ ಇಲ್ಲಿಯ ಬಸವೇಶ್ವರ ದೇವಾಲಯದಿಂದ ಅಡ್ಡ ಪಲ್ಲಕ್ಕಿಯೊಂದಿಗೆ ಮೆರವಣಿಗೆ ತರಳಾಗುತ್ತದೆ. ಜಯದೇವ ಜಾನುವಾರು ಜಾತ್ರಾ ಮೈದಾನಕ್ಕೆ ಹೊಂದಿಕೊಂಡಂತೆ ಕಾಳಿಕಾಂಬಾ ದೇವಾಲಯವಿದೆ. ಜಾತ್ರೆ ಸಂದರ್ಭದಲ್ಲಿ ಉದ್ಯೋಗಕ್ಕೆಂದು ದೂರದ ಊರುಗಳಿಗೆ ಹೋಗಿರುವವರು, ವಿವಾಹವಾಗಿ ಬೇರೆ ಊರುಗಳಲ್ಲಿ ನೆಲೆಸಿರುವ ಹೆಣ್ಣು ಮಕ್ಕಳು ತಪ್ಪದೇ ಆಗಮಿಸಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಈ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುವ ಜತೆಗೆ ಗ್ರಾಮದ ನಂಟನ್ನು ಗಟ್ಟಿಗೊಳಿಸುತ್ತಾರೆ.
ಗ್ರಾಮದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಒಳ್ಳೆಯ ಆಲೋಚನೆಯಿಂದ ಗ್ರಾಮದೊಳಗೆ ಅಂಗನವಾಡಿ ಕೇಂದ್ರ ಹಾಗೂ ಬಾಲಕರ ವಸತಿ ನಿಲಯ ಇದೆ. ಇತ್ತೀಚಿನ ದಿನಗಳಲ್ಲಿ ಈ ವಸತಿ ನಿಲಯಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿದೆ.
ಪ್ರಮುಖ ಸಮಸ್ಯೆ: ಹಂಡ್ಲಿ ಗ್ರಾಮ ಪಂಚಾಯಿತಿಗೆ ಸೇರುವ ಗುಡುಗಳಲೆ ಗ್ರಾಮ ಶನಿವಾರಸಂತೆ ಗ್ರಾಮ ಪಂಚಾಯಿತಿ ಹಾಗೂ ನಿಡ್ತ ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಂತಿದೆ. ಆದರೂ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ಮರಿಚಿಕೆಯಾಗಿದ್ದು, ಹತ್ತು ಹಲವು ಸಮಸ್ಯೆಗಳು ನಿರಂತರವಾಗಿ ಕಾಡುತ್ತಿದೆ. ಅದರಲ್ಲಿ ಪ್ರಮುಖ ಸಮಸ್ಯೆ ಅಂದರೆ ಒಳ ಚರಂಡಿ ಸರಿ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಗ್ರಾಮದ ರಸ್ತೆಗಳು ಇಂದಿಗೂ ಕಲ್ಲು ಮಣ್ಣುಗಳಿಂದ ಕೂಡಿದೆ. ಕಸದ ಸಮಸ್ಯೆಯು ದೊಡ್ಡದಾಗಿದ್ದು, ಗುಡುಗಳಲೆ ಜಯದೇವ ಜಾನುವಾರು ಜಾತ್ರಾ ಮೈದಾನದಲ್ಲಿ ಗ್ರಾಮದ ಎಲ್ಲ ಕಸಗಳನ್ನು ಸ್ಥಳೀಯ ಹಂಡ್ಲಿ ಗ್ರಾಮ ಪಂಚಾಯಿತಿ ತಂದು ಸುರಿಯುತ್ತಿರುವುದು ದುರಂತ. ಹೆಸರಿಗೆ ಬಸ್ ನಿಲ್ದಾಣ ಬಳಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ, ಅದರ ಸುತ್ತ ಸ್ವಚ್ಛತೆ ಇಲ್ಲದೇ ಸೊಳ್ಳೆಗಳ ವಾಸ ಸ್ಥಳವಾಗಿದೆ. ರಸ್ತೆಗಳು ಚಿಕ್ಕದಾಗಿರುವುದರಿಂದ ಪಾರ್ಕಿಂಗ್ ಸಮಸ್ಯೆಯು ಕಾಡುತ್ತಿದೆ. 
ಮತದಾನ ಕೇಂದ್ರಕ್ಕೆ ಆಗ್ರಹ:  ಮಳೆಗಾಲದಲ್ಲಿ ಈ ಭಾಗದ ಕೆಲ ರಸ್ತೆಗಳು ಕೆರೆಯಂತಾಗುತ್ತದೆ. ಹಲವು ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದು ಆಸ್ಪತ್ರೆ ಸೇರಿರುವ ಉದಾಹರಣೆ ಕೂಡ ಇದೆ. ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದ ಸುತ್ತ ಅನುಪಯುಕ್ತ ಗಿಡಗಂಟಿಗಳು ಬೆಳೆದು ವಿಷ ಜಂತುಗಳಿಗೆ ಆಶ್ರಯತಾಣವಾಗಿದೆ. ಜತೆಗೆ ಶೌಚಗೃಹ ಇಲ್ಲದೆ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ಗ್ರಾಮದಲ್ಲಿ ಮತದಾರರು ಹೆಚ್ಚಿದ್ದರೂ ಮತದಾನ ಮಾಡಲು ಸುಮಾರು 2 ಕಿ. ಮೀ. ದೂರದ ಹಂಡ್ಲಿ ಮಾತ ಕೇಂದ್ರಕ್ಕೆ ತೆರಳಿ ಮತದಾನ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಈ ಗುಡುಗಳಲೆ ಗ್ರಾಮದಲ್ಲಿ ಮತದಾನ ಕೇಂದ್ರ ಮಾಡಲಿ ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net