ಅಂತರ್ಜಲ ಕುಸಿತ ಮನೆ ಮಾಡಿದ ಆತಂಕ

ಅಂತರ್ಜಲ ಸಮೃದ್ಧಿ ಆಗಿರುವ ಕಡೆಗಳಲ್ಲಿ ಭೂಮಿಯಿಂದ ಅದಾಗಿಯೇ ಹೊರಚೆಲ್ಲುವ ನೀರು. ಮಳೆಗಾಲದಲ್ಲಿ ಕುಶಾಲನಗರ ಸಮೀಪ ಕಂಡು ಬಂದ ದೃಶ್ಯ ಇದು
ಅಂತರ್ಜಲ ಸಮೃದ್ಧಿ ಆಗಿರುವ ಕಡೆಗಳಲ್ಲಿ ಭೂಮಿಯಿಂದ ಅದಾಗಿಯೇ ಹೊರಚೆಲ್ಲುವ ನೀರು. ಮಳೆಗಾಲದಲ್ಲಿ ಕುಶಾಲನಗರ ಸಮೀಪ ಕಂಡು ಬಂದ ದೃಶ್ಯ ಇದು
Published on
ಮಡಿಕೇರಿ:
ಪಶ್ಚಿಮಘಟ್ಟದ ಸೆರಗಿನಲ್ಲಿ ಇರುವ ಮಲೆನಾಡು ಜಿಲ್ಲೆ ಕೊಡಗಿನಂಥ ಗುಡ್ಡಗಾಡು ಪ್ರದೇಶದಲ್ಲಿ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಇಳಿಕೆ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದು ಸ್ಥಳೀಯ ಪರಿಸರದ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲದೆ ಮಾನವ ಸೇರಿದಂತೆ ಜೀವ ವೈವಿಧ್ಯತೆ ಮೇಲೂ ಪ್ರತಿಕೂಲತೆ ಉಂಟುಮಾಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
ಕೊಡಗಿನ ಪ್ರಮುಖ ಬೆಳೆಯಾದ ಕಾಫಿ ಮತ್ತು ಕರಿಮೆಣಸು ಉತ್ಪಾದನೆ ಮೇಲೆ ಅಂತರ್ಜಲ ಕುಸಿತದ ಪರಿಣಾಮ ಈಗಾಗಲೇ ಕಂಡುಬರುತ್ತಿದೆ. ಹಳ್ಳ-ಕೊಳ್ಳಗಳು, ನದಿಗಳು ಹಾಗೂ ಸಾಂಪ್ರದಾಯಿಕ ಬಾವಿಗಳು ಬೇಗನೆ ಬತ್ತಿಹೋಗುತ್ತವೆ. ಇದರಿಂದ ವನ್ಯಜೀವಿಗಳು ನೀರಿಗಾಗಿ ನಾಡಿಗೆ ಬರುವಂತಾಗಿ, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಬಹುದು. ಕುಡಿಯುವ ನೀರಿನ ಸಮಸ್ಯೆ, ಪರಿಸರ ಸಮತೋಲನದಲ್ಲಿ ಏರುಪೇರು ಕೂಡ ಉಂಟಾಗಬಹುದು.
ಅಂತರ್ಜಲ ಮಟ್ಟ ಕುಸಿತಕ್ಕೆ ನೀರಿನ ಅವೈಜ್ಞಾನಿಕ ಬಳಕೆ ಪ್ರಮುಖ ಕಾರಣವಾಗಿದ್ದು, ಭತ್ತದ ಬೇಸಾಯ ಕಡಿಮೆ ಆಗಿ ಕಾಂಕ್ರಿಟ್ ಕಾಡು ನಿರ್ಮಾಣ ಆಗುತ್ತಿರುವುದು ಮತ್ತೊಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
"

ಮಳೆ ನೀರನ್ನು ಸರಿಯಾಗಿ ಸಂಗ್ರಹಿಸುವುದು ಅತ್ಯಗತ್ಯ. ಮನೆಮಠಗಳಲ್ಲಿ ರೇನ್ ವಾಟರ್ ಹಾರ್ವೆಸ್ಟಿಂಗ್ ವ್ಯವಸ್ಥೆ ಕಡ್ಡಾಯಗೊಳಿಸಬೇಕು. ಅರಣ್ಯ ನಾಶವನ್ನು ತಡೆದು, ಮರ ನೆಡುವ ಅಭಿಯಾನ ಹೆಚ್ಚಿಸಬೇಕು. ಜಲಮೂಲಗಳ ಸಂರಕ್ಷಣೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೆ ಅಂತರ್ಜಲ ಮಟ್ಟ ಕಾಪಾಡಬಹುದು.

"

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಅಧಿಕವಾಗಿ ಸುರಿಯುತ್ತಿದೆ. ಅದರೆ ಸರಿಯಾದ ರೀತಿಯಲ್ಲಿ ಬಳಕೆಗೆ ಸಿಗುತ್ತಿಲ್ಲ. ಮೊದಲೆಲ್ಲಾ ಕೆರೆ ಕಟ್ಟೆಗಳು ಮತ್ತು ಭತ್ತದ ಕೃಷಿ ನಡೆಸುವ ಗದ್ದೆಗಳಲ್ಲಿ 6 ತಿಂಗಳು ನೀರಿನ ತೇವಾಂಶ ಹಾಗೇ ಉಳಿಯುತ್ತಿತು. ಇದರಿಂದ ಭೂಮಿಯಲ್ಲಿ ಅಂರ್ತಜಲ ಪ್ರಮಾಣ ಹೆಚ್ಚು ಕಾಣುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಗದ್ದೆ ಕೆಲಸ ನಿರ್ವಹಿಸಲು ಕಾರ್ಮಿಕರ ಕೊರತೆ, ವನ್ಯ ಪ್ರಾಣಿಗಳ ಹಾವಳಿಯಿಂದಾಗಿ ಗದ್ದೆಯನ್ನು ಬಿಟ್ಟು ತೋಟಗಳತ್ತ ಮುಖ ಮಾಡಿರುವುದೇ ಈ ಅವಾಂತರ ಸೃಷ್ಟಿಗೊಳ್ಳಲು ಕಾರಣ

"

ಮೇಲಿನಿಂದ ಎಷ್ಟು ನೀರು ಸುರಿದರೂ ಅದನ್ನು ಸಂಪೂರ್ಣವಾಗಿ ಹೀರಿಕೊಳ್ಳುವ ಶಕ್ತಿ ನಮ್ಮ ಭೂಮಿ ಹೊಂದಿದೆ. ಆದರೆ ಭೂಮಿಯ ಮೇಲ್ಪದರದಲ್ಲಿ ನೀರಿನ ಅಂಶ ಇಂಗಿದಷ್ಟು ಅಂತರ್ಜಲ ಮಟ್ಟ ಕುಸಿಯುತ್ತದೆ. ಇತ್ತೀಚೆಗೆ ರೈತರು ವಾಣಿಜ್ಯ ಬೆಳೆಯತ್ತ ಮುಖ ಮಾಡಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಕೃಷಿ ಭೂಮಿಗಳನ್ನು ತೋಟಗಾರಿಕೆಗೆ ಬಳಸಿಕೊಂಡು ಭೂಮಿಯ ಮೇಲ್ಪದರವನ್ನು ಸಾಧ್ಯವಾದಷ್ಟು ಒಣಗಿಸುತ್ತಿರುವುದು ಅಂತರ್ಜಲ ಮಟ್ಟ ಕುಸಿತಕ್ಕೆ ನೇರ ಕಾರಣವಾಗಿದೆ. ಮಳೆಗಾಲದಲ್ಲಿ ಪ್ರತಿಯೊಬ್ಬರೂ ಇಂಗು ಗುಂಡಿಗಳನ್ನು ಮಾಡಿಕೊಂಡು ಮಳೆ ನೀರನ್ನು ಸಂರಕ್ಷಣೆ ಮಾಡಿಕೊಳ್ಳುವುದು ಕೊಂಚಮಟ್ಟಿಗೆ ಅಂತರ್ಜಲ ಸಂರಕ್ಷಣೆಗೆ ಸಹಾಯವಾಗುವುದು.

"

ಕೊಡಗಿನಂಥ ಮಲೆನಾಡು ಪ್ರದೇಶದಲ್ಲಿ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಇಳಕೆ ಆಗುತ್ತಿರುವುದು ಆತಂಕದ ವಿಷಯ. ಜಲಮೂಲಗಳಿಂದ ಸಮೃದ್ಧವಾಗಿರುವ, ಅನೇಕ ನದಿಗಳಿಗೆ ಜನ್ಮ ನೀಡುವ ಪಶ್ಚಿಮಘಟ್ಟದಲ್ಲಿನ ಈ ವಿದ್ಯಮಾನ ಭವಿಷ್ಯದ ದೃಷ್ಟಿಯಿಂದ ಕಳವಳಕಾರಿಯೂ ಹೌದು. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಲು ಇದು ಸಕಾಲ. ಈಗಲೂ ಜಾಗೃತಿ ವಹಿಸದಿದ್ದರೆ ಮುಂದೆ ಹನಿ ಹನಿ ನೀರಿಗೂ ಪರಿತಪಿಸುವ ಕಾಲ ಬರಬಹುದು.

"

ಬೀಳುವ ಮಳೆಯ ಪ್ರಮಾಣ ಹಾಗೂ ಹಂಚಿಕೆಯಲ್ಲಿ ವರ್ಷದಿಂದ ವರ್ಷಕ್ಕೆ ವ್ಯತ್ಯಾಸವಾಗುತ್ತಿರುವುದಲ್ಲದೆ ಅಂತರ್ಜಲ ಬಳಕೆ ಪ್ರಮಾಣ ಜಾಸ್ತಿಯಾಗುತ್ತಿರುವುದರಿಂದ ಅಂತರ್ಜಲ ಮಟ್ಟದ ಪ್ರಮಾಣ ಇಳಕೆಯಾಗುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರೂ ಹಿಂಗಾರಿನಲ್ಲಿ ಬಿದ್ದ ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ಮತ್ತು ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ಫೆಬ್ರವರಿ 2025ಕ್ಕೆ ಹೋಲಿಸಿದರೆ ಫೆಬ್ರವರಿ 2026ಕ್ಕೆ ಅಂತರ್ಜಲ ಮಟ್ಟ ಕುಸಿತ ಆಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ಜಿನುಗು ಕೆರೆ, ಅಣೆಕಟ್ಟು ಪಿಕಪ್, ಬಂದಾರ, ಚೆಕ್ ಡ್ಯಾಂಗಳು ಅಂತರ್ಜಲ ಮಟ್ಟ ಹೆಚ್ಚಳವಾಗಿಸುವಲ್ಲಿ ಸಹಕಾರಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net