ಕುವೆಂಪು ವಿಶ್ವಮಾನವ ಸಂದೇಶ ಸಾರ್ವಕಾಲಿಕ

ಕೊಡಗು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕುವೆಂಪು ಜನ್ಮೋತ್ಸವವನ್ನು ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಉದ್ಘಾಟಿಸಿದರು. ಎಂ.ಕೆ. ದಿನೇಶ್,  ಎಂ. ಡಿ. ರಂಗಸ್ವಾಮಿ,  ಪ್ರಕಾಶ್,  ಬಿ.ಎಸ್. ಲೋಕೇಶ್ ಸಾಗರ್, ಕೆ.ಕೆ.ನಾಗರಾಜ ಶೆಟ್ಟಿ,  ಭಾರದ್ವಾಜ ಕೆ. ಆನಂದತೀರ್ಥ ಇದ್ದರು.
ಕೊಡಗು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕುವೆಂಪು ಜನ್ಮೋತ್ಸವವನ್ನು ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಉದ್ಘಾಟಿಸಿದರು. ಎಂ.ಕೆ. ದಿನೇಶ್, ಎಂ. ಡಿ. ರಂಗಸ್ವಾಮಿ, ಪ್ರಕಾಶ್, ಬಿ.ಎಸ್. ಲೋಕೇಶ್ ಸಾಗರ್, ಕೆ.ಕೆ.ನಾಗರಾಜ ಶೆಟ್ಟಿ, ಭಾರದ್ವಾಜ ಕೆ. ಆನಂದತೀರ್ಥ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ
ಕುಶಾಲನಗರ: ಜಗದ ಕವಿ, ಯುಗದ ಕವಿ, ದಾರ್ಶನಿಕ ಕವಿ ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣಿಕೆಯನ್ನು, ವೈಚಾರಿಕತೆಯನ್ನೂ ಬಿತ್ತಿದ ಮಹಾನ್‌ಚೇತನ. ಅಪ್ಪಟ ಅಧ್ಯಾತ್ಮ ಜೀವಿಯಾಗಿದ್ದ ಕುವೆಂಪು ಅವರು ರೂಪಿಸಿದ ವಿಶ್ವಮಾನವ ಸಂದೇಶ ಸಾರ್ವಕಾಲಿಕ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಪಟ್ಟರು.
ಕೊಡಗು ವಿಶ್ವವಿದ್ಯಾಲಯದ ಜ್ಞಾನಕಾವೇರಿ ಆವರಣದ ಹಾರಂಗಿ ಸಭಾಂಗಣದಲ್ಲಿ ಕನ್ನಡಸಿರಿ ಸ್ನೇಹ ಬಳಗ ಹಾಗೂ ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಮಾನವ ಕುವೆಂಪು ಜನ್ಮೋತ್ಸವ ಮತ್ತು ಸಮಗ್ರ ಸಾಹಿತ್ಯದ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಜನಿಸಿ, ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಉದ್ದೇಶದಿಂದ ಹುಟ್ಟಿಕೊಂಡ ವಿಶ್ವಮಾನವ ಸಂದೇಶದ ಪರಿಕಲ್ಪನೆಯು ಜಾತಿ, ಮತ, ಧರ್ಮಗಳನ್ನು ಮೀರಿದ್ದಾಗಿದೆ. ಈ ವಿಚಾರಗಳನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ. ದಿನೇಶ್ ಮಾತನಾಡಿ, ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಮತ್ತು ’ಕನ್ನಡಸಿರಿ ಸ್ನೇಹ ಬಳಗ’ದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕುಶಾಲನಗರದ ರೋಟರಿ ಪೂರ್ವಾಧ್ಯಕ್ಷ ಎಂ.ಡಿ.ರಂಗಸ್ವಾಮಿ, ಕುಶಾಲನಗರ ಪುರಸಭೆ ಮಾಜಿ ಸದಸ್ಯ ಪ್ರಕಾಶ್, ಕನ್ನಡ ಸಿರಿ ಸ್ನೇಹ ಬಳಗದ ಪ್ರಮುಖರಾದ ಕೆ.ಕೆ.ನಾಗರಾಜಶೆಟ್ಟಿ, ನಿವೃತ್ತ ಶಿಕ್ಷಕರಾದ ಉ.ರಾ.ನಾಗೇಶ್, ಖಾನ್ ಮಾಸ್ಟರ್, ಹೆಬ್ಬಾಲೆ ನಿವೃತ್ತ ಶಿಕ್ಷಕ ಎಚ್.ಎಸ್. ಲೋಕೇಶ್, ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಡಾ.ಜಮೀರ್ ಅಹಮದ್ ಇತರರು ಇದ್ದರು.
ಗೋಷ್ಠಿ-ಕಾರ್ಯಕ್ರಮದ ಮೊದಲ ಗೋಷ್ಠಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯ ಕುರಿತು ಕಣಿವೆಯ ಸಾಹಿತಿ ಭಾರದ್ವಾಜ ಕೆ. ಆನಂದತೀರ್ಥ ಉಪನ್ಯಾಸದಲ್ಲಿ ಮಾತನಾಡಿ, ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ, ಅಂತಹ ದೃಷ್ಟಿ ಒಂದು ಜಾತಿ, ಮತ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು ಎಂದು ಹೇಳಿದರು.
ರಸಪ್ರಶ್ನೆ ಸ್ಪರ್ಧೆ: ವಿಶ್ವಮಾನವ ಕುವೆಂಪು ಅವರ ಜನ್ಮೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರದ ನಿವೃತ್ತ ಶಿಕ್ಷಕ ಉ.ರಾ. ನಾಗೇಶ್ ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net