ಇತಿಹಾಸ, ಪರಂಪರೆ ಪ್ರತೀಕ ಕಿರಗೂರು

  ಶನಿಶ್ವರ ದೇವಾಲಯದ ಹೊರ ನೋಟ
ಶನಿಶ್ವರ ದೇವಾಲಯದ ಹೊರ ನೋಟ
Published on
ಪಿ. ವಿ. ಅಂತೋಣಿ ಸಿದ್ದಾಪುರ
ಇತಿಹಾಸ, ಪರಂಪರೆಯೊಂದಿಗೆ ಧರ್ಮ, ಕೃಷಿ, ಶಿಕ್ಷಣರಂಗಗಳಿಗೆ ತನ್ನದೇ ಆದ ಕೊಡುಗೆ ನೀಡಿರುವ ಗ್ರಾಮವೇ ಕಿರಗೂರು. ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಮತ್ತು ಆಚರಣೆಗಳು ಗ್ರಾಮದ ವಿಶೇಷತೆಗೆ ಇಂಬು ನೀಡಿವೆ.
ಇಲ್ಲಿನ ದೇಗುಲ ಮತ್ತು ಮನೆಗಳಲ್ಲಿ ನಡೆಯುವ ಹಬ್ಬ- ಹರಿದಿನ, ಉತ್ಸವಗಳು ಸ್ಥಳೀಯರ ಶ್ರದ್ಧೆ ಮತ್ತು ನಂಬಿಕೆಯ ಪ್ರತೀಕವಾಗಿವೆ. ಪಾರಂಪರಿಕ ಬದುಕಿನ ಪ್ರತೀಕವಾಗಿರುವುದು ವಿಶೇಷವಾಗಿದೆ. ಪೊನ್ನಂಪೇಟೆಯಿಂದ ಬಾಳೆಲೆ ಮಾರ್ಗದಲ್ಲಿ 5 ಕಿ.ಮೀ. ಸಾಗಿದರೆ ಕಿರಗೂರು ಗ್ರಾಮ ತಲುಪಬಹುದು. 4 ಸಾವಿರ ಜನರಿಗೆ ಆಶ್ರಯ ನೀಡಿರುವ ಈ ಗ್ರಾಮವು ಕೃಷಿಗೆ ಬಹು ದೊಡ್ಡ ಆಶ್ರಯವನ್ನೇ ನೀಡಿದೆ.
*
ಗ್ರಾಮದ ಇತಿಹಾಸದ ಪುಟಗಳನ್ನು ತೆರೆದಾಗ ಎರಡು ದೇವಾಲಯಗಳು ಪ್ರಧಾನವಾಗಿವೆ. ಶ್ರೀ ಮಹಾದೇವರ ದೇವಸ್ಥಾನ ಹಾಗೂ ಮೂಲ ಶನೇಶ್ಚರ ಸನ್ನಿಧಿಗಳು ಕಿರಗೂರಿನ ಧಾರ್ಮಿಕ ಬದುಕಿನ ಕೇಂದ್ರಗಳಾಗಿವೆ. ಕಿರಗೂರಿನ ಶನೇಶ್ಚರ ದೇವಾಲಯವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಪುರಾತನ ದೇಗುಲವು 1990ರಲ್ಲಿ ಮರು ನಿರ್ಮಾಣವಾಯಿತು. ಅರ್ಚಕರ ಕುಟುಂಬದವರ ಕನಸಿನಲ್ಲಿ ಬಂದ ಸ್ವಾಮಿಯು ನೀಡಿದ ಸೂಚನೆಯಂತೆ ಧಾರ್ಮಿಕ ವಿಧಿ, ವಿಧಾನಗಳು ನೆರವೇರುತ್ತಿರುವುದು ಮಹತ್ವದ ಸಂಗತಿಯಾಗಿದೆ. ದೇಗುಲದ ಪೂಜಾ ಪರಂಪರೆ ಭಕ್ತರ ನಂಬಿಕೆಗೆ ಇಂಬು ನೀಡುವಂತಿದೆ. 2002ರಲ್ಲಿ ದೇವರ ವಿಗ್ರಹ ಪ್ರತಿಷ್ಠಾಪನೆ, 2004ರಲ್ಲಿ ಜೀರ್ಣೋದ್ಧಾರ ಗೊಂಡಿದೆ. ಕೊಡಗಿನಲ್ಲಿ ಆಕರ್ಷಕ ಗೋಪುರ ಹೊಂದಿರುವ ಕೆಲವೇ ಕೆಲವು ದೇವಾಲಯಗಳ ಪೈಕಿ ಕಿರಗೂರಿನ ಶನೇಶ್ಚರ ದೇವಾಲಯವೂ ಒಂದಾಗಿದೆ ಎಂಬುದೇ ಹೆಗ್ಗಳಿಕೆ.
*
ಕಿರಗೂರಿನ ಮತ್ತೊಂದು ಪ್ರಮುಖ ಧಾರ್ಮಿಕ ಕೇಂದ್ರ ಮಹಾದೇವರ ಸನ್ನಿಧಿ. ಇಲ್ಲಿ ಕಾರಯ್ಯ, ಬಿಲ್ಲಯ್ಯ ಹಾಗೂ ಬಸವೇಶ್ವರ ದೇವರ ನೆಲೆಗಳೂ ಇವೆ. ಯುಗಾದಿಯ ನಂತರದ ಸೋಮವಾರ ನಡೆಯುವ ವಾರ್ಷಿಕ ಉತ್ಸವವು ಪ್ರಮುಖ ಆಚರಣೆಯಾಗಿದೆ. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ಸಾವಿರಾರು ಭಕ್ತರು ಈ ಸಂದರ್ಭ ಸಂಗಮಿಸುತ್ತಾರೆ. ದೇವಾಲಯದ ಆಚರಣೆಗಳು ಹಾಗೂ ಐನ್‌ಮನೆಯ ಪರಂಪರೆಯ ನಡುವಿನ ನಂಟು ವೃದ್ಧಿಯೊಂದಿಗೆ ಕಿರಗೂರಿನ ಗ್ರಾಮೀಣ ಸಂಸ್ಕೃತಿಯ ಅನಾವರಣವೂ ಈ ಸಂದರ್ಭ ನೆರವೇರುತ್ತದೆ.
ಕಿರಗೂರಿನಲ್ಲಿ ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿ ಉಳಿದಿಲ್ಲ. ವಾರ್ಷಿಕ ಉತ್ಸವ, ಹರಕೆ, ವಿಶೇಷ ಪೂಜೆ ಸೇರಿದಂತೆ ವಿವಿಧ ಜಾನಪದೀಯ ಆಚರಣೆಗಳು ಗ್ರಾಮಸ್ಥರನ್ನು ಒಂದೆಡೆ ಸೇರಿಸುವ ಮಹೋತ್ಸವ ಗಳಾಗಿವೆ. ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಿರುವ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳು ಸ್ಥಳೀಯ ನಂಬಿಕೆಗಳನ್ನು ಪಾಲನೆ ಮಾಡುತ್ತಿದೆ.
*
ಕೃಷಿಯೇ ಬದುಕಿನ ಆಧಾರ:
ಕೃಷಿ ಚಟುವಟಿಕೆಗಳು ಈ ಗ್ರಾಮದ ಮೂಲ ಕಸುಬಾಗಿದೆ. ಕಾಫಿ ಹಾಗೂ ಕಾಳುಮೆಣಸು ಇಲ್ಲಿನ ಪ್ರಮುಖ ಬೆಳೆಗಳು. ಕೆಲವೆಡೆ ಭತ್ತ ಮತ್ತು ತಾಳೆಯನ್ನೂ ಬೆಳೆಯಲಾಗುತ್ತಿದೆ. ಗ್ರಾಮದ ಮೂಲಕ ಹರಿಯುವ ಕೀರೆ ಹೊಳೆ ಹಾಗೂ ಕೆರೆ, ಬಾವಿಗಳು ಕೃಷಿ ಮತ್ತು ಜನಜೀವನಕ್ಕೆ ನೀರಿನ ಆಸರೆಯಾಗಿವೆ. ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಈ ಕೃಷಿ ಬದುಕು ಗ್ರಾಮದ ಪಾರಂಪರಿಕ ಜೀವನಶೈಲಿಯ ಭಾಗವಾಗಿದೆ.
*
ಸವಾಲುಗಳ ನಡುವೆ ಬದುಕು:
ಕಾಲ ಬದಲಾದಂತೆ ಕಿರಗೂರಿನ ಬದುಕೂ ಸುಧಾರಣೆಗೊಂಡಿದೆ. ದಶಕಗಳ ಹಿಂದೆ ಭತ್ತದ ಗದ್ದೆಗಳೇ
ಇಲ್ಲಿ ಪ್ರಧಾನವಾಗಿದ್ದವು. ಆದರೆ ಕಾಡಾನೆಗಳ ಹಾವಳಿಯಿಂದ ಭತ್ತದ ಕೃಷಿಗೆ ಅನೇಕರು ಮಂಗಳ ಹಾಡಿದ್ದಾರೆ. ತೋಟದ ಬೆಳೆಗಳಿಗೆ ಪರಿವರ್ತನೆ ಗೊಂಡಿದ್ದಾರೆ. ಇದರ ನಡುವೆ ಇತ್ತೀಚಿನ ವರ್ಷಗಳಲ್ಲಿ ಹುಲಿ ಹಾವಳಿಯೂ ಹೆಚ್ಚಾಗಿದೆ. ಹಲವು ಜಾನುವಾರುಗಳನ್ನೂ ಕಳೆದುಕೊಂಡಿರುವ ರೈತರು ಕೃಷಿಗಾಗಿ ಯಂತ್ರಗಳನ್ನು ಅವಲಂಬಿಸಿದ್ದಾರೆ.
ಕಾಡಾನೆಗಳ ಹಾವಳಿ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಗ್ರಾಮಕ್ಕೆ ಮೂಲಸೌಕರ್ಯಗಳ ಅಗತ್ಯವಿದೆ. ಕುಡಿಯುವ ನೀರು, ರಸ್ತೆ ಸಂಪರ್ಕ ಅಭಿವೃದ್ಧಿಯಾಗಬೇಕಿದೆ. ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಇದರ ಅಭಿವೃದ್ಧಿಗೆ ಸರ್ಕಾರ ಮತ್ತು ಪಾಲಕರು ಇನ್ನಷ್ಟು ಬೆಂಬಲಿಸಬೇಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳೂ ಸ್ಪರ್ಧಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಗ್ರಾಮೀಣ ಪರಂಪರೆಯ ಪ್ರತೀಕವಾಗಿರುವ ಕಿರಗೂರು ಗ್ರಾಮ ಅಭಿವೃದ್ಧಿಯ ಹೊಸ ಪರ್ವಕ್ಕಾಗಿಕಾಯುತ್ತಿದೆ.
*****
ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ದೇವಾಲಯಗಳು ನಮ್ಮ ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಕೇಂದ್ರಗಳಾಗಿವೆ. ದೂರದ ಊರುಗಳಿಂದಲೂ ಭಕ್ತರು ಆಗಮಿಸುವ ಕಾರಣ ವ್ಯಾಪಾರ, ವಹಿವಾಟು ಹೆಚ್ಚಾಗಿದೆ.
ಗ್ರಾಮಸ್ಥರು ಶ್ರದ್ಧಾವಂತರಾಗಿದ್ದು, ಸೌಹಾರ್ದ ಬದುಕು ನಡೆಸುತ್ತಿದ್ದಾರೆ. ಸಮರ್ಪಕವಾದ ರಸ್ತೆಗಳು ಇಲ್ಲದ ಕಾರಣ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ.
ಮಲ್ಲೇಶ್
ಶನೀಶ್ವರ ದೇವಾಲಯದ ಅರ್ಚಕ
***
ನಮ್ಮದು ಸಣ್ಣ ಗ್ರಾಮವಾದರೂ ಎಲ್ಲ ವರ್ಗದ ಜನರೂ ಇಲ್ಲಿ ಸೌಹಾರ್ದದಿಂದ ವಾಸಿಸುತ್ತಿದ್ದಾರೆ. ರೈತರು ಕಾಡುಪ್ರಾಣಿಗಳ ಹಾವಳಿಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಕಾಡಾನೆಗಳ ನಿಯಂತ್ರಣಕ್ಕೆ ಸರ್ಕಾರ ರೂಪಿಸಿರುವ ಯೋಜನೆ ಸಂಪೂರ್ಣ ಅನುಷ್ಠಾನಗೊಂಡಿಲ್ಲ. ಯೋಜನೆಯ ಗತಿಯೂ ಸ್ಪಷ್ಟವಾಗಿಲ್ಲ. ಗ್ರಾಮದ ರಸ್ತೆಗಳು ಹದಗೆಟ್ಟಿವೆ. ತೇಪೆ ಹಾಕಿ ಕೆಲ ರಸ್ತೆಗಳನ್ನು ದುರಸ್ತಿ ಮಾಡಿದ್ದರೂ ಅವು ಹಾಳಾಗಿವೆ. ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ ಎಂದು ಹೇಳುತ್ತಾರೆ. ಆದರೆ ಕೆಲಸ ಮಾತ್ರ ಆಗಿಲ್ಲ.
ಚೆಪ್ಪುಡಿರ ರಾಕೇಶ್ ದೇವಯ್ಯ
ಗ್ರಾಮಸ್ಥ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net