ಶಾಲೆಗಳಲ್ಲಿ ಸ್ವಚ್ಛವಾದ ಶೌಚಾಲಯಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ಆಕರ್ಷಕವಾದ ಕಟ್ಟಡಗಳು ಬೇಕಾಗುತ್ತದೆ. ಒಂದನೇ ತರಗತಿಯಿಂದಲೇ ಸ್ಮಾರ್ಟ್ ಕ್ಲಾಸ್‌ಗಳು, ಕಂಪ್ಯೂಟರ್ ಶಿಕ್ಷಣ ಮತ್ತು ಡಿಜಿಟಲ್ ಕಲಿಕೆ ಪರಿಚಯಿಸಬೇಕಾಗುತ್ತದೆ. ಪೋಷಕರ ಅಪೇಕ್ಷೆಗೆ ತಕ್ಕಂತೆ ಕನ್ನಡದ ಜತೆಗೆ ಇಂಗ್ಲಿಷ್ ಮಾಧ್ಯಮದಲ್ಲೂ ಶಿಕ್ಷಣವನ್ನು ಕೊಡಬೇಕು. ಗ್ರಾಮೀಣ ಮತ್ತು ದೂರದ ಪ್ರದೇಶಗಳಿಂದ ಬರುವ ಮಕ್ಕಳಿಗೆ ಅನುಕೂಲವಾಗುವಂತೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಪೌಷ್ಟಿಕ ಬಿಸಿಯೂಟವನ್ನು ಪರಿಣಾಮಕಾರಿಯಾಗಿ ತಲುಪಿಸಬೇಕು. ಪ್ರತೀ ಶಾಲೆಗೂ ಅಗತ್ಯವಿರುವಷ್ಟು ಶಿಕ್ಷಕರನ್ನು ನಿಯೋಜಿಸಿ, ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಇಂಥ ಕ್ರಮಗಳು ಇಂದಿನ ದಿನಗಳಲ್ಲಿ ತುರ್ತು ಅಗತ್ಯವಾಗಿದೆ.