

ಪ್ರಮುಖ ಮುಖ್ಯಾಂಶಗಳು
ಕಸ್ತೂರಿ ರಂಗನ್ ವರದಿ ವಿಷಯದಲ್ಲಿ ಸಮಾಧಾನ ಸಿಕ್ಕಿದರೆ ಸಾಲದು. ಶಾಂತಳ್ಳಿ ಹೋಬಳಿಯಲ್ಲಿ ಅತೀ ಹೆಚ್ಚು ರೈತರಿಗೆ ಸಿ ಆ್ಯಂಡ್ ಡಿ ಭೂಮಿ ಇದೆ. ಇದುವರೆಗೆ ಕೃಷಿ ಭೂಮಿಗೆ ಆಸ್ತಿ ಹಕ್ಕುಪತ್ರಗಳು ಸಿಕ್ಕಿಲ್ಲ. ರೈತರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ವಿಶೇಷ ಸಮಿತಿ ರಚಿಸಿದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆಯಿಂದ ಸಿ ಆ್ಯಂಡ್ ಡಿ ಭೂಮಿ ಎಷ್ಟಿದೆ, ಎಲ್ಲಿದೆ ಎಂಬುದು ಗೊತ್ತಾಗಬೇಕು. ಸಿ ಆ್ಯಂಡ್ ಡಿ ಭೂಮಿಗೆ ಹಕ್ಕುಪತ್ರ ಸಿಗುವ ಆಶಾಭಾವನೆಯನ್ನು ರೈತರಲ್ಲಿ ಸಮಿತಿ ಮೂಡಿಸಬೇಕು.
ಕಸ್ತೂರಿ ರಂಗನ್ ವರದಿ ರಾಜ್ಯದಲ್ಲಿ ಅನುಷ್ಠಾನ ಮಾಡುವುದಿಲ್ಲ ಎಂದು ಅರಣ್ಯ ಸಚಿವರು ಹೇಳಿರುವುದು ಮತ್ತು ಸಿ ಆ್ಯಂಡ್ ಡಿ ಸಮಸ್ಯೆ ಬಗೆಹರಿಸುವುದಕ್ಕೋಸ್ಕರ ಸರ್ಕಾರ ಅನುಪಾಲನ ವರದಿ ಸಲ್ಲಿಸಲು ವಿಶೇಷ ಸಮಿತಿ ರಚಿಸಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಸೆಕ್ಷನ್-4, ಸಿ ಆ್ಯಂಡ್ ಡಿ ಸಮಸ್ಯೆಯನ್ನು ಒಟ್ಟಿಗೆ ಪರಿಹರಿಸಬೇಕು. ಸಮಿತಿ ಕೊಡಗಿಗೆ ಬಂದು ಅನುಪಾಲನ ವರದಿಯನ್ನು ಸರ್ಕಾರಕ್ಕೆ ನೀಡುವ ತನಕ ಅರಣ್ಯ ಇಲಾಖೆ ಸರ್ವೆ ಮಾಡಲು ಮುಂದಾಗಬಾರದು.
ಅರಣ್ಯ ಸಚಿವರ ಸ್ಪಷ್ಟನೆ ಜಿಲ್ಲೆಯ ರೈತರಿಗೆ ಸದ್ಯದ ಮಟ್ಟಿಗೆ ಸಮಾಧಾನ ನೀಡಿದ್ದರೂ ವರದಿಯಲ್ಲಿ ಉಲ್ಲೇಖಿಸಿರುವ ಸೂಕ್ಷ್ಮ ಪ್ರದೇಶದ ರೈತರಿಗೆ ವರದಿ ಅನುಷ್ಠಾನದ ಭಯ ನಿರಂತರವಾಗಿದೆ. ಇಂದಲ್ಲ ನಾಳೆ ತಮ್ಮ ಭೂಮಿ ಕಳೆದು ಕೊಳ್ಳುವ ಭೀತಿಯಲ್ಲಿ ಬದುಕು ದೂಡುವಂತಾಗಿದೆ. ಆದಷ್ಟು ಬೇಗ ಇದಕ್ಕೆ ಒಂದು ನಿರ್ಣಾಯಕ ಸ್ಪಷ್ಟನೆ ದೊರೆತು ಭೂಮಿ ರೈತರ ಬಳಿ ಉಳಿಯುವಂತಾಗಬೇಕು.
ಕಸ್ತೂರಿ ರಂಗನ್ ವರದಿ ಅನುಷ್ಠಾನ ಇಲ್ಲ ಎಂದು ಸಚಿವರು ಹೇಳಿರುವುದು ಸ್ವಾಗತಾರ್ಹ. ಜಿಲ್ಲೆಯ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುವ ಅವಶ್ಯಕತೆ ಇದೆ. ಜಿಲ್ಲೆಯ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಕಾನೂನುಗಳನ್ನು ತಂದರೆ ಯಾರಿಗೂ ಅನಾನುಕೂಲವಾಗುವುದಿಲ್ಲ. ಅರಣ್ಯ ಕಾಯ್ದೆಗಳನ್ನ ಜನರ ಹಾಗೂ ರೈತರ ಹಿತಾಸಕ್ತಿಗೆ ಅನುಗುಣವಾಗಿ ರೂಪಿಸಬೇಕಾದ ಅನಿವಾರ್ಯತೆಯಿದೆ.
ಕಸ್ತೂರಿ ರಂಗನ್ ವರದಿ ಬಂದ ಮೇಲೆ ಕೇಂದ್ರ ಸರ್ಕಾರ 6 ಅಧಿಸೂಚನೆ ಹೊರಡಿಸಿದೆ. ಕೇಂದ್ರದ ಎಲ್ಲಾ ಅಧಿಸೂಚನೆಗಳನ್ನು ನಾವು ತಿರಸ್ಕಾರ ಮಾಡಿದ್ದೇವೆ. 6ನೇ ಬಾರಿ ಸೂಚನೆ ಹೊರಡಿಸಿದ ಮೇಲೆ ಜನಪ್ರತಿನಿಧಿಗಳ ಸಭೆ ಮಾಡಿದ್ದೇವೆ. ಕ್ಯಾಬಿನೆಟ್ ಮತ್ತು ಕ್ಯಾಬಿನೆಟ್ ಉಪಸಮಿತಿಯಲ್ಲಿ ಚರ್ಚೆ ಮಾಡಲಾಗಿದೆ. ಕೇಂದ್ರದ 6ನೇ ಅಧಿಸೂಚನೆ ರದ್ದು ಮಾಡಬೇಕು ಎಂದು 2024ರ ಸೆ.30ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರದ ವರದಿ ತಿರಸ್ಕಾರ ಮಾಡಲಾಗಿದೆ. ಸಂರಕ್ಷಿತ ಪ್ರದೇಶ ಬಿಟ್ಟು ಬೇರೆ ಕಡೆ ಯಾವುದೇ ಸಮಸ್ಯೆ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ.
ಕಸ್ತೂರಿ ರಂಗನ್ ವರದಿ ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವುದಿಲ್ಲ ಎಂದಿರುವ ಅರಣ್ಯ ಸಚಿವರ ಹೇಳಿಕೆಯನ್ನು ಸ್ವಾಗತಿಸಲಾಗುತ್ತದೆ. ಈ ವರದಿ ಸಂಬAಧ ಕೇಂದ್ರ ಸರ್ಕಾರ ಹೊರಡಿಸಿದ್ದ ಎಲ್ಲ ಅಧಿಸೂಚನೆಗಳಿಗೂ ಕೊಡಗಿನಿಂದ ವಿರೋಧ ವ್ಯಕ್ತಪಡಿಸಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆ ಕಳಿಸಲಾಗಿತ್ತು. ಉಪಗ್ರಹ ಆಧಾರಿತ ಈ ಸರ್ವೇಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಸರ್ಕಾರದ ಜಾಗಗಳನ್ನು ಈ ವರದಿ ವ್ಯಾಪ್ತಿಯಲ್ಲಿ ತರಲು ನಮ್ಮ ವಿರೋಧ ಇಲ್ಲ. ಆದರೆ ಜನವಸತಿ ಪ್ರದೇಶಗಳಿಗೆ ಯಾವುದೇ ತೊಂದರೆ ಆಗಬಾರದು.