ಮಹಿಳಾ ಧ್ವನಿಯಾದ ಕೊಡಗಿನ ಗೌರಮ್ಮ

ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮುಲ್ಲೇಂಗಡ ಬೇಬಿ ಚೋಂದಮ್ಮ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಪ್ರಾಂಶುಪಾಲ ಪಿ. ಸೋಮಚಂದ್ರ ಉದ್ಘಾಟಿಸಿದರು. ಬಿ.ಆರ್. ಸತ್ಯನಾರಾಯಣ, ಟಿ.ಜಿ. ಪ್ರೇಮಕುಮಾರ್, ಎಂ.ಎನ್. ಮೂರ್ತಿ, ಮುಲ್ಲೇಂಗಡ ಮಧೋಶ್ ಪೂವಯ್ಯ, ಶೈಲಜಾ ಮನು ಅಚ್ಚಮ್ಮಯ್ಯ ಮತ್ತಿತರರು ಇದ್ದರು.
ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮುಲ್ಲೇಂಗಡ ಬೇಬಿ ಚೋಂದಮ್ಮ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಪ್ರಾಂಶುಪಾಲ ಪಿ. ಸೋಮಚಂದ್ರ ಉದ್ಘಾಟಿಸಿದರು. ಬಿ.ಆರ್. ಸತ್ಯನಾರಾಯಣ, ಟಿ.ಜಿ. ಪ್ರೇಮಕುಮಾರ್, ಎಂ.ಎನ್. ಮೂರ್ತಿ, ಮುಲ್ಲೇಂಗಡ ಮಧೋಶ್ ಪೂವಯ್ಯ, ಶೈಲಜಾ ಮನು ಅಚ್ಚಮ್ಮಯ್ಯ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಶಿಕ್ಷಕ ಬಿ.ಆರ್. ಸತ್ಯನಾರಾಯಣ ಅಭಿಮತ
ಕುಶಾಲನಗರ: ಕನ್ನಡದ ಪ್ರಥಮ ಕಥೆಗಾರ್ತಿ ಕೊಡಗಿನ ಗೌರಮ್ಮ ಆಧುನಿಕ ಕನ್ನಡ ಸಾಹಿತ್ಯದ ಆರಂಭಿಕ ಹಂತದಲ್ಲಿ ಪ್ರಮುಖ ಮಹಿಳಾ ಧ್ವನಿಯಾಗಿ ಮೂಡಿಬಂದವರು ಎಂದು ತೊರೆನೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ.ಆರ್. ಸತ್ಯನಾರಾಯಣ ಹೇಳಿದರು.
ಸಮೀಪದ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸೌರಭ ಕನ್ನಡ ಭಾಷಾ ಸಂಘ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲೂಕು ಕ.ಸಾ.ಪ. ಘಟಕ ಹಾಗೂ ಹೆಬ್ಬಾಲೆ ವಲಯ ಕ.ಸಾ.ಪ. ಘಟಕದ ಜಂಟಿ ಆಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಮುಲ್ಲೇಂಗಡ ಬೇಬಿ ಚೋಂದಮ್ಮ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೊಡಗಿನ ಮಹಿಳಾ ಸಾಹಿತಿಗಳು ವಿಷಯ ಕುರಿತು ಮಾತನಾಡಿದರು.
ಗೌರಮ್ಮ ಅವರ ಕಂಬನಿ ಮತ್ತು ಚೂಡಾಮಣಿ ಪ್ರಮುಖ ಕೃತಿಗಳಾಗಿದ್ದು, ಇವುಗಳಲ್ಲಿ ಸ್ತ್ರೀವಾದಿ ಚಿಂತನೆ, ಬಡವರ ಶೋಷಣೆ ಹಾಗೂ ಸಾಮಾಜಿಕ ಸುಧಾರಣೆಯ ಮನೋಧರ್ಮ ಎದ್ದು ಕಾಣುತ್ತದೆ. ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ವೇಳೆ ಕೊಡಗಿಗೆ ಭೇಟಿ ನೀಡಿದ್ದಾಗ, ತಮ್ಮ ಸಂಪೂರ್ಣ ಆಭರಣಗಳನ್ನು ದೇಶಕ್ಕಾಗಿ ದಾನ ಮಾಡಿದ ಮಹಾನ್ ದೇಶಪ್ರೇಮಿ ಗೌರಮ್ಮ ಎಂದರು.
ಅಡುಗೆ ಮನೆಯ ಜಂಜಡಗಳಿಂದ ಹೊರಬಂದು ಸಮಾಜದ ಶೋಷಣೆ ಹಾಗೂ ಸ್ತ್ರೀ ಸಂವೇದನೆಗಳ ವಿರುದ್ಧ ಧ್ವನಿ ಎತ್ತಿದ ಹೆಗ್ಗಳಿಕೆ ಕೊಡಗಿನ ಲೇಖಕಿಯರದ್ದಾಗಿದೆ ಎಂದರು.
ಬುಟ್ಟಿಯಂಡ ದೇವಕ್ಕಿಯಮ್ಮ, ಕೂತಂಡ ಪಾರ್ವತಿ ಪೂವಯ್ಯ, ಡಾ. ಟಿ.ವಿ.ಪದ್ಮಾಶೇಖರ್, ಡಾ. ಕವಿತಾ ರೈ, ಮಂಡೀರ ಜಯ ಅಪ್ಪಣ್ಣ, ಪಾಂಡಂಡ ತಂಗಮ್ಮ, ಕುಸುಮಾ ಶ್ಯಾನ್ ಬಾಗ್ ಹಾಗೂ ಡಾ. ರೇಖಾ ವಸಂತ್ ಮುಂತಾದವರು ತಮ್ಮ ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.
ಪ್ರಾಂಶುಪಾಲ ಪಿ.ಸೋಮಚಂದ್ರ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಿಂದಲೇ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ವಿರಾಜಪೇಟೆ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಹಾಗೂ ದತ್ತಿ ದಾನಿ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ, ಮಹಿಳಾ ಸಾಹಿತ್ಯವು ಸ್ತ್ರೀ ದೃಷ್ಟಿಕೋನದ ಅನುಭವ ಮತ್ತು ಸಂವೇದನೆಗಳನ್ನು ವ್ಯಕ್ತಪಡಿಸುತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುತ್ತವೆ ಎಂದು ಹೇಳಿದರು.
ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಬ್ಬಾಲೆ ವಲಯ ಕ.ಸಾ.ಪ. ಅಧ್ಯಕ್ಷ ಎಂ.ಎನ್. ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಸಿ.ಎಂ. ಕುಶಾಲ್ ಅವರನ್ನು ಈ ವೇಳೆ ಸನ್ಮಾನಿಸಲಾಯಿತು.
ದತ್ತಿದಾನಿ ಮುಲ್ಲೇಂಗಡ ಮಧೋಶ್ ಪೂವಯ್ಯ ಹಾಗೂ ಮುಖ್ಯ ಉಪನ್ಯಾಸಕ ಬಿ.ಆರ್. ಸತ್ಯನಾರಾಯಣ ಅವರನ್ನು ಕ.ಸಾ.ಪ. ವತಿಯಿಂದ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಾನಪದ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನವಾಗಿ ಪುಸ್ತಕಗಳನ್ನು ವಿತರಿಸಲಾಯಿತು.
ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಉಪ ಪ್ರಾಂಶುಪಾಲೆ ಶೈಲಜಾ ಮನು ಅಚ್ಚಮ್ಮಯ್ಯ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಎಂ. ರಘು, ಕ.ಸಾ.ಪ. ಪದಾಧಿಕಾರಿಗಳಾದ ಕೆ.ವಿ.ಉಮೇಶ್, ಎಚ್.ಎನ್. ಸುಬ್ರಹ್ಮಣ್ಯ, ಪ್ರಮುಖರಾದ ಪಾರ್ವತಮ್ಮ ಕಾಳಿಂಗಪ್ಪ, ಎಸ್.ವಿ. ಶಿವಾನಂದ, ಎಚ್.ಆರ್. ಶೇಖರ್, ಎಚ್.ಎಸ್. ಲೋಕೇಶ್, ಲೇಖನ ಧರ್ಮಪ್ಪ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net