ವಿರಾಜಪೇಟೆ: ಪ್ರಕೃತಿಯ ಉಳಿವಿಗಾಗಿ ಮಾನವರು ಗಿಡ ಮರವನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ಪ್ರೀತಿಸುವಂತಾಗಬೇಕು ಎಂದು ಗೋಣಿಕೊಪ್ಪಲು ಪ್ರೌಢಶಾಲೆ ಗೋಣಿಕೊಪ್ಪಲು ಕೃಷ್ಣಜೈತನ್ಯ ಹೇಳಿದರು.
ವಿರಾಜಪೇಟೆ ಸಮೀಪದ ಅರಮೇರಿ ಕಳಂಜೇರಿ ಮಠದ ಶ್ರೀ ಲಿಂಗರಾಜೇಂದ್ರ ಭವನದಲ್ಲಿ ಇತ್ತೀಚೆಗೆ ನಡೆದ 'ಹೊಂಬೆಳಕು ಕಿರಣ ೨೪೪ ನೇ ಮಾಸಿಕ ತತ್ವಚಿಂತನಾಗೋಷ್ಠಿ' ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ 'ವಿಶ್ವ ಪರಿಸರ ದಿನದ ಅಂಗವಾಗಿ 'ಪ್ರಕೃತಿಯ ಕೌತುಕಗಳು' ಎಂಬ ವಿಷಯದ ಬಗ್ಗೆ ಮಾತನಾಡಿ ಪರಿಸರ ನಮ್ಮ ಮನೆ ಸುತ್ತಲು ಉತ್ತಮ ಪರಿಸರದಿಂದ ಇದ್ದಲ್ಲಿ ಉತ್ತಮವಾದ ಗಾಳಿ ಶುದ್ಧ ನೀರು ಸಾದ್ಯ, ಪ್ರತಿಯೊಂದು ವಸ್ತುವೂ ಅಣುಗಳಿಂದಾದರೆ ಪ್ರತಿಯೊಂದು ಜೀವರಾಶಿಗಳಿರುವ ಜೀವಕೋಶಗಳಿಂದ ರಚಿಸಲ್ಪಟ್ಟಿವೆ. ಮಾನವನಿಂದ ಪ್ರಕೃತಿಯ ಮೇಲೆ ನಡೆಯುತ್ತಿರುವ ಕ್ರೌರ್ಯದಿಂದ ಆಗುವ ದುಷ್ಪರಿಣಾಮಗಳು ಇವುಗಳಿಂದಾಗಿ ಮಾನವನೇ ಎದುರಿಸುತ್ತಿರುವ ಸಂಕಷ್ಟಗಳು ಅದರಿಂದ ನಮಗೆ ಸಾದ್ಯವಾದಷ್ಟು ಹೂ ಗಿಡಗಳು ಮತ್ತು ಹಣ್ಣು ಗಿಡಗಳನ್ನು ಬೆಳೆಸಿ ಪ್ರಕೃತಿಗೆ ಕೊಟ್ಟರೆ ಪಕ್ಷಿಗಳಿಗೆ ಆಹಾರ ವಾಗುತ್ತದೆ ಅದನ್ನು ತಿಂದ ಪಕ್ಷಿಗಳು ಇತರೆಡೆಗಳಲ್ಲಿ ಬೀಜವನ್ನು ಹರಡುತ್ತವೆ.
ಕೊಡಗಿನ ಪ್ರಕೃತಿ ಸೌಂದರ್ಯದಲ್ಲಿ ನೀರು, ಗಾಳಿ ಶುದ್ಧವಾಗಿರುತ್ತದೆ. ಎಂದು ಹೇಳಿದ ಕೃಷ್ಣಜೈತನ್ಯ ಅವರು ಮದ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಒಂದೊಂದೆ ವಸ್ತುಗಳ ಲಭ್ಯತೆ ಕಡಿಮೆಯಾಗುತ್ತಿದೆ. ಪೆಟ್ರೋಲ್-ಡೀಸೆಲ್ ಹಾಗೂ ಕಚ್ಚತೈಲ ಬೆಲೆಗಳು ಹೆಚ್ಚಾಗುತ್ತಿದೆ ಎಂದು ವಿಶಾದ ವ್ಯಕ್ತಪಡಿಸಿದರು
ಮೊದಲಿಗೆ ವಿರಾಜಪೇಟೆ ವೈದ್ಯರು ಪಕ್ಷಿ ತಜ್ಞರಾದ ಡಾ.ಎಸ್.ವಿ.ನರಸಿಂಹನ್ ಅವರು ಜೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪ್ರಕೃತಿ ಶಬ್ದಾಡಂಬರವಿಲ್ಲದೆ ಪಾಠ ಕಲಿಸುವ ಗುರುವಂತೆ. ಪರಿಸರ ನಮಗೆ ಜ್ಞಾನವನ್ನು ಮಾತ್ರವಲ್ಲ ನೀತಿ ಪಾಠವನ್ನೂ ಕಲಿಸುತ್ತದೆ. ಪ್ರಕೃತಿಯನ್ನು ಅರಿತರೆ ನಾವು ದೇವರ ಮನಸ್ಸನ್ನು ಅರಿತಂತೆ, ಪ್ರಕೃತಿಯೇ ದೇವರ ಶೃಷ್ಟಿ. ಪ್ರಕೃತಿಯಲ್ಲಿರುವಂತ ಗರಿಕೆ ಹುಲ್ಲು ಸೇರಿದಂತೆ ಪ್ರತಿ ವಸ್ತುಗಳು ಮಾನವನ ಉಪಯೋಗಕ್ಕೆ ಬರುತ್ತದೆ ಅದರಿಂದ ಪ್ರಕೃತಿಯನ್ನು ಪ್ರೀತಿಸುವಂತಾಗಬೇಕು ಎಂದರು. ಗಿಡ ನೆಡುವುದು ಉತ್ತಮ ಆದರೆ ಗಿಡನೆಟ್ಟು ಅದನ್ನು ಪೋಶಿಸದಿದ್ದರೆ ಮುಂದಿನ ವರ್ಷ ಮತ್ತೆ ಅದೇ ಜಾಗಕ್ಕೆ ಗಿಡ ನೆಡುವಂತಾಗಲಿದೆ ಎಂದರು.
ಅರಮೇರಿ ಕಳಂಜೇರಿ ಮಠದ ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಸಭಿಕರನ್ನುದ್ದೇಶಿಸಿ ಉತ್ತಮ ಪರಿಸರದಲ್ಲಿ ಕೆಡುಕನ್ನು ಮಾಡದೆ ಒಳಿತನ್ನು ಮಾಡುವಂತಾಗಬೇಕು. ಮನುಷ್ಯ ತನ್ನ ಬದುಕಿನಲ್ಲಿ ತನ್ನನ್ನು ತಾನು ತಿಳಿದುಕೊಂಡು ನಿರ್ಮಲವಾದ ಮನಸ್ಸನ್ನು ರೂಡಿಸಿಕೊಳ್ಳುವಂತಾಗಬೇಕು. ಪ್ರಕೃತಿಯ ಬಗ್ಗೆ ಆಂದೋಲನ ವಾಗಬೇಕಾಗಿದೆ. ಪ್ರತಿ ವರ್ಷಕ್ಕೊಂದು ಗಿಡ ನೆಟ್ಟು ಪೋಶಿಸದಿದ್ದರೆ ನಮ್ಮ ಪರಿಸರ ಮರುಭೂಮಿಯಂತಾಗುವ ಸಂದರ್ಭ ಎದುರಾಗಬಹುದು. ಅದರಿಂದ ಸಾಧ್ಯವಾದಷ್ಟು ಮನೆ ತೋಟಗಳಲ್ಲಿ ಗಿಡಮರಗಳನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಂತಾಗಬೇಕು. ಗಿಡ ನೆಡುವುದು ಎಷ್ಟು ಮುಖ್ಯವೊ ಅದನ್ನು ಬೆಳೆಸುವುದು ಆಷ್ಟೆ ಮುಖ್ಯವಾಗಿದೆ ಎಂದು ಸ್ವಾಮೀಜಿ ಹೇಳಿದರು.
ವೇದಿಕೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಪೊನ್ನಂಪೇಟೆ-ವಿರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಎನ್.ಎಂ.ರಾಜೇಶ್, ನಿರ್ದೇಶಕ ಎಸ್.ಎಲ್.ಮಹದೇವಪ್ಪ ಉಪಸ್ಥಿತರಿದ್ದರು.