ಆದಿವಾಸಿಗಳ ಕ್ರಿಕೆಟ್ ಪಂದ್ಯಾವಳಿಗೆ ಉತ್ತಮ ಪ್ರತಿಕ್ರಿಯೆ

ತಿತಿಮತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಆದಿವಾಸಿ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಗಳಿಸಿದ  ಕುಟ್ಟದ ಸಿಂಕೋನ ಯೂತ್ ಕ್ಲಬ್ ಎ ತಂಡ. ಸುಜಿನ್, ಪಂಕಜ ಮತ್ತಿತರರು ಇದ್ದರು.
ತಿತಿಮತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಆದಿವಾಸಿ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಗಳಿಸಿದ ಕುಟ್ಟದ ಸಿಂಕೋನ ಯೂತ್ ಕ್ಲಬ್ ಎ ತಂಡ. ಸುಜಿನ್, ಪಂಕಜ ಮತ್ತಿತರರು ಇದ್ದರು.
Published on
ಗೋಣಿಕೊಪ್ಪಲು:
ತಿತಿಮತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 5 ದಿನಗಳ ಕಾಲ ನಡೆದ ಆದಿವಾಸಿ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಅಂತಿಮ ಹಣಾಹಣಿಯಲ್ಲಿ ಕುಟ್ಟದ ಸಿಂಕೋನ ಯೂತ್ ಕ್ಲಬ್ ಎ ತಂಡ ಕುಟ್ಟದ ಸಿಂಕೋನ ಯೂತ್ ಕ್ಲಬ್ ಬಿ ತಂಡವನ್ನು ಸೋಲಿಸುವ ಮೂಲಕ ದಿ.ಶಶಿಕುಮಾರ್ ಜ್ಞಾಪಕಾರ್ಥವಾಗಿ ಏರ್ಪಡಿಸಲಾಗಿದ್ದ ಕ್ರಿಕೆಟ್ ಚಾಂಪಿಯನ್ ಶಿಫ್ ತನ್ನದಾಗಿಸಿಕೊಂಡಿತ್ತು. ಸಿಂಕೋನ ಯೂತ್ ಕ್ಲಬ್ ಬಿ ತಂಡ ರನ್ನರ್ ಆಫ್ ಪ್ರಶಸ್ತಿ ಪಡೆಯಿತು.
ಮಹಿಳಾ ವಿಭಾಗದಲ್ಲಿ ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟಿನ ರೆಡ್ ರೋರ‍್ಸ್ ಮಹಿಳಾ ತಂಡ ತಿತಿಮತಿಯ ವಾರಿರ‍್ಸ್ ವುಮೆನ್ಸ್ ತಂಡವನ್ನು ಸೋಲಿಸಿ ಪ್ರಥಮ ಸ್ಥಾನಕ್ಕೆ ಭಾಜನವಾಯಿತು. ತಿತಿಮತಿಯ ವಾರಿರ‍್ಸ್ ವುಮೆನ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ನಡೆದ ರೋಚಕÀ ಪಂದ್ಯಾವಳಿಯಲ್ಲಿ ಸಮಬಲ ಕಂಡು ಬಂತು. ನಂತರ ಸೂಪರ್ ಓವರ್‌ನಲ್ಲಿ ರೆಡ್ ರೋರ‍್ಸ್ ಮಹಿಳಾ ತಂಡವು ಗೆಲುವಿನೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.
ಇದೇ ಮೊದಲ ಬಾರಿಗೆ ಆದಿವಾಸಿ ಪುರುಷ ಹಾಗೂ ಮಹಿಳೆಯರಿಗಾಗಿ ಕ್ರಿಕೆಟ್ ಆಟಗಾರ ಆದಿವಾಸಿ ಯುವಕ ದಿ.ಶಶಿಕುಮಾರ್ ಜ್ಞಾಪಕಾರ್ಥವಾಗಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. 67 ಪುರುಷರ ಹಾಗೂ 11 ಮಹಿಳೆಯರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಅಂತಿಮ ಪಂದ್ಯಾವಳಿಗೆ ಸಾವಿರಾರು ಸಂಖ್ಯೆಯಲ್ಲಿ ಆದಿವಾಸಿಗಳು ಆಗಮಿಸಿದ್ದರು. ವಿಜೇತ ತಂಡಕ್ಕೆ ನಗದು ಬಹುಮಾನ ಸೇರಿದಂತೆ ಪಾರಿತೋಷಕಗಳನ್ನು ನೀಡಲಾಯಿತು.
ಸಮಾರೋಪ ಸಮಾರಂಭ ಸುಜಿನ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಕ್ರೀಡಾ ಕೂಟದ ಸಂಚಾಲಕ ಮುಸ್ತಫಾ ಮತ್ತು ಅಪ್ರೋಸ್ ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸಿದ್ದನ್ನು ಆದಿವಾಸಿಗಳು ಪ್ರಸಂಶಿಸಿ, ಗೌರವಿಸಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಯಮುಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆಪಟ್ಟಿರ ಟಾಟೂ ಮೊಣ್ಣಪ್ಪ ಮಾತನಾಡಿ ಆದಿವಾಸಿಗಳು ಕ್ರೀಡೆಯೊಂದಿಗೆ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸ ಕೊಡಿಸಲು ಮುಂದೆ ಬರಬೇಕು. ವಾರ್ಷಿಕವಾಗಿ ನಡೆಯುವ ಕ್ರೀಡೋತ್ಸವದಲ್ಲಿ ಎಲ್ಲರು ಒಗ್ಗಟ್ಟಾಗಿ ಕ್ರೀಡೆಯನ್ನು ಆಚರಿಸಬೇಕು. ಪ್ರತಿಭಾವಂತ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಗಳು ನಿರ್ಮಾಣವಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಿ.ಆರ್. ಪಂಕಜ ಮಾತನಾಡಿ ಆದಿವಾಸಿಗಳು ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆಂಬ ಆರೋಪವು ಆಗಿಂದ್ದಾಗಿಯೇ ಕೇಳಿ ಬರುತ್ತಿದೆ. ಇದರಿಂದ ಹೊರ ಬಂದು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಆದಿವಾಸಿಗಳು ತಮ್ಮನ್ನು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಆದಿವಾಸಿಗಳು ಉತ್ತಮ ಸಾಧನೆ ಮಾಡಿದಂತಾಗುತ್ತದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ತಿತಿಮತಿ ಭಾಗದ ಆಶಾ ಕಾರ್ಯಕರ್ತರ ಉತ್ತಮ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ದಾನಿಗಳಾದ ಗೋಣಿಕೊಪ್ಪಲಿನ ರಾಜು, ಉದ್ಯಮಿ ಮಂಜೇಶ್, ತಿತಿಮತಿ ಗ್ರಾ.ಪಂ. ಮಾಜಿ ಸದಸ್ಯ ಎಂ .ಅಪ್ರೋಸ್, ಟಿ.ವೈ. ಉಮ್ಮರ್, ಶಾಂತಿ, ಮಣಿಯಮ್ಮ, ಉಪಾಧ್ಯಕ್ಷೆ ರೋಹಿಣಿ, ಕಾರ್ಯದರ್ಶಿ ಶಿವಕುಮಾರ್, ಉಪಕಾರ್ಯದರ್ಶಿ ಅನಿಲ್ ಬಾಬು, ಖಜಾಂಜಿ ಸುಜಯ್,ಶಶಿಧರ್, ಸದಸ್ಯರಾದ ರಮಣಿ, ಭಾಗ್ಯ ಮತ್ತಿತರರು ಇದ್ದರು. . ಸುತ್ತಮುತ್ತಲಿನ ಗ್ರಾಮದ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಕುಶಾಲನಗರದ ಸ್ಟಾರ್ ಬಾಯ್ಸ್ ಉತ್ತಮ ತಂಡ ಪ್ರಶಸ್ತಿ ಪಡೆಯಿತು. ಮಹಿಳಾ ವಿಭಾಗದಲ್ಲಿ ಕೆ.ಎಂ. ಕ್ವಿನ್ಸ್ ಉತ್ತಮ ತಂಡವಾಗಿ ಹೊರ ಹೊಮ್ಮಿತು. ಬೆಸ್ಟ್ ಕೀಪರ್ ಮನುಪುಟ್ಟು, ಬೆಸ್ಟ್ ಬೌಲರ್ ನಂದೀಶ್, ಮ್ಯಾನ್‌ಆಫ್ ದಿ ಸಿರೀಸ್ ಕಾರ್ತಿಕ್, ಬೆಸ್ಟ್ ಕ್ಯಾಪ್ಟನ್ ಮನು, ಬೆಸ್ಟ್ ಫೀಲ್ಡರ್ ಸುಧಿ,ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಪ್ರಾಕ್ಸಿ, ಬೆಸ್ಟ್ ಬ್ಯಾಟ್ಸ್ ಮೆನ್ ರಾಜ, ಪಂದ್ಯ ಪುರುಷೋತ್ತಮ ಅಣ್ಣಪ್ಪ ಪ್ರಶಸ್ತಿಗಳನ್ನು ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net