ಹಾಕಿ ಸಂಸ್ಥೆಗಳನ್ನು ಒಂದಾಗಿಸುವೆ

 ಅರುಣ್ ಮಾಚಯ್ಯ ಅವರಿಗೆ ಸನ್ಮಾನ ಮಾಡಿದ ಸಂದರ್ಭ
ಅರುಣ್ ಮಾಚಯ್ಯ ಅವರಿಗೆ ಸನ್ಮಾನ ಮಾಡಿದ ಸಂದರ್ಭ
Published on
ಗೋಣಿಕೊಪ್ಪಲು: ಕೊಡಗಿನಲ್ಲಿ ಹಾಕಿ ಕೂರ್ಗ್ ಸೇರಿದಂತೆ ಹಲವು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ಸಂಸ್ಥೆಗಳನ್ನು ಒಟ್ಟುಗೂಡಿಸಿ ಹಾಕಿ ಕ್ರೀಡೆಗೆ ಮತ್ತಷ್ಟು ಶಕ್ತಿ ತುಂಬಲು ಪ್ರಯತ್ನ ಮಾಡಲಾಗುತ್ತದೆ ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಎಸ್.ಅರುಣ್ ಮಾಚಯ್ಯ ಹೇಳಿದರು.
ದ.ಕೊಡಗಿನ ಕೋಣನಕಟ್ಟೆಯ ಕಲ್ಚರಲ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ಹಾಕಿಯ ತವರು ಕೊಡಗಿನಲ್ಲಿರುವ ವಿವಿಧ ಹಾಕಿ ಸಂಸ್ಥೆಗಳನ್ನು ಒಟ್ಟುಗೂಡಿಸಿ ಹಾಕಿ ಕ್ರೀಡೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ಆಯೋಜಿಸಲಾಗುವುದು. ಸಭೆಗೆ ಹಲವು ಸಂಸ್ಥೆಯ ಪ್ರಮುಖರನ್ನು ಆಹ್ವಾನಿಸಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಈ ನಿಟ್ಟಿನಲ್ಲಿ ಸದ್ಯದಲ್ಲೇ ಸಭೆ ನಡೆಸುವುದಾಗಿ ತಿಳಿಸಿದರು.
ಕ್ರೀಡಾ ವಸತಿ ಶಾಲೆಗಳಲ್ಲಿ 10ನೇ ತರಗತಿಯವರೆಗೆ ಮಾತ್ರ ಅವಕಾಶಗಳು ಲಭ್ಯವಾಗುತ್ತಿದೆ. ತೇರ್ಗಡೆಯಾಗುವ ನಂತರ ಮುಂದಿನ ಭವಿಷ್ಯ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ನಂತರ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ದ್ವಿತೀಯ ಪಿಯುಸಿ ಮುಗಿಸುವವರೆಗೂ ಕ್ರೀಡಾ ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವ ಯೋಜನೆ ಸಿದ್ಧಪಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಮುಂದೆ ಸಾಗಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಶೂಟಿಂಗ್ ಸ್ಪರ್ಧೆಗೆ ಕೊಡಗಿನಲ್ಲಿ ವಿಪುಲ ಅವಕಾಶವಿರುವುದರಿಂದ ಈ ಕ್ರೀಡೆಯನ್ನು ಅನುಷ್ಠಾನಗೊಳಿಸಲು ಆದ್ಯತೆ ನೀಡಲಾಗುವುದು. ಇದರಿಂದ ಸಾಕಷ್ಟು ಕ್ರೀಡಾಪಟುಗಳು ಆಕರ್ಷಿತರಾಗಲಿದ್ದಾರೆ ಎಂದರು.
ಕೋಣನಕಟ್ಟೆ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಪುಚ್ಚಿಮಾಡ ಕಿಶೋರ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿಕಟಪೂರ್ವ ಡೀನ್ ಡಾ.ಚೆಪ್ಪುಡೀರ ಕುಶಾಲಪ್ಪ,  ಕಳ್ಳಿಚಂಡ ಕಾಶಿ, ಚೆಪ್ಪುಡೀರ ಕಿಟ್ಟು, ಚಾಂದಿನಿ ಮಾಚಯ್ಯ, ಬೊಟ್ಟಂಗಡ ಪುಷ್ಪ ಮಂದಪ್ಪ, ಪುಚ್ಚಿಮಾಡ ಅಶೋಕ್, ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪುಚ್ಚಿಮಾಡ ಲಾಲ, ಕೊಳುವಂಡ ಸುಬ್ರಮಣಿ, ಚೆಪ್ಪುಡೀರ ರಾಧ ಅಚ್ಚಯ್ಯ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net