ವಿರಾಟ್ ಕ್ರಿಕೆಟರ್ಸ್ ತಂಡದ ಮುಡಿಗೆ ಭಗತ್ ಕಪ್

ಭಗತ್‌ಸಿಂಗ್ ಕ್ರಿಕೆಟ್ ಕಪ್ ಚಾಂಪಿಯನ್‌ಷಿಪ್ ಪಟ್ಟ ಅಲಂಕರಿಸಿದ ವಿರಾಟ್ ಕ್ರಿಕೆಟರ್ಸ್ ತಂಡ.
ಭಗತ್‌ಸಿಂಗ್ ಕ್ರಿಕೆಟ್ ಕಪ್ ಚಾಂಪಿಯನ್‌ಷಿಪ್ ಪಟ್ಟ ಅಲಂಕರಿಸಿದ ವಿರಾಟ್ ಕ್ರಿಕೆಟರ್ಸ್ ತಂಡ.
Published on
ಗೋಣಿಕೊಪ್ಪ: ಭಗತ್‌ಸಿಂಗ್ ಯುವಕ ಸಂಘ ಆಯೋಜಿಸಿದ್ದ 6ನೇ ಆವೃತ್ತಿಯ ಜಿಸಿಎಲ್ ಕ್ರಿಕೆಟ್‌ನ ಭಗತ್ ಕಪ್, ವಿರಾಟ್ ಕ್ರಿಕೆಟರ್ಸ್ ತಂಡ ಮುಡಿಗೇರಿಸಿಕೊಂಡಿತು.
ಹಾತೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ಭಗತ್‌ಸಿಂಗ್ ಯುವಕ ಸಂಘದ ಅಧ್ಯಕ್ಷ ಸತೀಶ್ ಸಿಂಗಿ ನೇತೃತ್ವದಲ್ಲಿ ನಾಲ್ಕು ದಿನಗಳು ನಡೆದ ಈ ಕ್ರೀಡಾಕೂಟದ ಅಂತಿಮ ಹಣಾಹಣಿಯಲ್ಲಿ ಬೂಮ್ ಬೂಮ್ ತಂಡ ಐದು ಓವರ್‌ನಲ್ಲಿ ಎರಡು ವಿಕೆಟ್ ನಷ್ಟಕ್ಕೆ ದಾಖಲಿಸಿದ 22 ರನ್ನುಗಳನ್ನು ಬೆನ್ನಟ್ಟಿದ ವಿರಾಟ್ ಕ್ರಿಕೆಟರ್ಸ್ ತಂಡ ವಿಕೆಟ್ ಕಳೆದುಕೊಳ್ಳದೆ ಎರಡು ಓವರ್‌ಗಳಲ್ಲಿ 23 ರನ್‌ಗಳನ್ನು ಕಲೆ ಹಾಕುವ ಮೂಲಕ ಗುರಿಯತ್ತ ಸಾಗಿ ಗೆಲುವಿನ ನಗೆ ಬೀರಿತು.
ವಿರಾಟ್ ಕ್ರಿಕೆಟರ್ಸ್‌ನ ಗಗನ್ ಆಳ್ವ 8 ಬಾಲ್‌ಗೆ 20 ರನ್‌ಗಳನ್ನು ದಾಖಲಿಸಿದ ಹಿನ್ನೆಲೆಯೇ ತಂಡದ ಗೆಲುವನ್ನು ನಿಶ್ಚಯಿಸಿಕೊಂಡಿತ್ತು. ಬೂಮ್ ಬೂಮ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟು ನಿರ್ಗಮಿಸಿತು. ಚಾಂಪಿಯನ್ ಪಟ್ಟ ಏರಿದ ತಂಡಕ್ಕೆ 1 ಲಕ್ಷ ರೂ. ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಯಿತು. ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟ ತಂಡಕ್ಕೆ 50 ಸಾವಿರ ರೂ.ನಗದು ಮತ್ತು ಟ್ರೋಫಿ ನೀಡಲಾಯಿತು. ತೃತೀಯ ಸ್ಥಾನವನ್ನು ಸಿ.ಎಸ್ ಕ್ರಿಕೆಟರ್ಸ್ ಮತ್ತು ನಾಲ್ಕನೇ ಸ್ಥಾನವನ್ನು ಎಜೆ ಬಾಯ್ಸ ಕ್ರಿಕೆಟರ್ಸ್ ಪಡೆದುಕೊಂಡು ನಗದು ಮತ್ತು ಟ್ರೋಫಿಗೆ ತೃಪ್ತಿಪಟ್ಟಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟೀರ ಕಿಲನ್ ಗಣಪತಿ ಮಾತನಾಡಿ, ಕ್ರೀಡೆ ಎನ್ನುವುದು ಮನುಷ್ಯನನ್ನು ಸದಾ ಚಟುವಟಿಕೆಯಿಂದ ಇರಲು ಮಾಡುವ ಪ್ರೇರಣೆಯ ಅಂಶವಾಗಿದೆ. ಭಗತ್ ಸಿಂಗ್ ಯುವಕ ಸಂಘ ಈ ಹಿನ್ನೆಲೆಯಲ್ಲಿ ಕ್ರಿಕೆಟಿಗೆ ಆದ್ಯತೆ ನೀಡುವ ಮೂಲಕ ಯುವಕರನ್ನು ಆರೋಗ್ಯಪೂರ್ಣ ವ್ಯಕ್ತಿತ್ವಕ್ಕೆ ಪ್ರೇರೇಪಿಸುತ್ತಿದೆ ಎಂದು ಹೇಳಿದರು.
ಗೋಣಿಕೊಪ್ಪ ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ಮಾತನಾಡಿ, ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವುದು ಬಹುದೊಡ್ಡ ಸಾಹಸವೇ ಆಗಿದೆ. ಇಂತಹ ಸಾಹಸಕ್ಕೆ ಭಗತ್ ಸಿಂಗ್ ಯುವಕ ಸಂಘ ಮುಂದಾಗಿರುವುದು ಶ್ರೇಷ್ಠ ಸಾಧನೆ ಎಂದು ಹೇಳಿದರು.
ಸಮಾಜ ಸೇವಕ ಚೋಕಂಡ ಸಂಜು ಸುಬ್ಬಯ್ಯ ಮಾತನಾಡಿ, ಆರೋಗ್ಯಪೂರ್ಣ ಬದುಕಿಗೆ ಕ್ರೀಡೆ ಸಹಕಾರಿಯಾಗಬಲ್ಲದು. ಈ ನಿಟ್ಟಿನಲ್ಲಿ ಸಂಘಟನೆಗಳು ಅತಿ ಹೆಚ್ಚು ಕ್ರೀಡಾಕೂಟಗಳನ್ನಾಗಿಸುವ ಮೂಲಕ ಯುವಕರಿಗೆ ಕ್ರೀಡೆಯಲ್ಲಿ ಆಸಕ್ತಿ ಗಳಿಸುವ ವೇದಿಕೆಯಾಗಬೇಕು ಎಂದರು.
ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ಆರೋಗ್ಯಪೂರ್ಣ ಯುವ ಸಮುದಾಯದ ಅಗತ್ಯತೆ ಇದೆ. ಯುವಕರು ಆರೋಗ್ಯ ಪೂರ್ಣವಾಗಿರಲು ಮತ್ತು ಈ ದೇಶವನ್ನು ಕಟ್ಟುವ ಶಕ್ತಿವಂತರಾಗಲು ಬಲಿಷ್ಠ, ಪೌಷ್ಟಿಕ ದೇಹದೃಢತೆಯನ್ನು ಹೊಂದಬೇಕಾಗಿದೆ. ಹಾಗಿದ್ದಲ್ಲಿ ಅತ್ಯುತ್ತಮ ಜೀವನ ನಡೆಸಲು ಸಾಧ್ಯವಾಗಬಲ್ಲದು. ಈ ಕಾರಣಕ್ಕೆ ಕ್ರಿಕೆಟ್ ಬಹು ಸಹಕಾರಿ ಎಂದು ಹೇಳಿದರು.
ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಅವರ ಸಮಾಜ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಇವರೊಂದಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಿರಿಯಮಾಡ ಅರುಣ್ ಪೂಣಚ್ಚ, ವೈದಕೀಯ ಕ್ಷೇತ್ರದಲ್ಲಿನ ಸಮಾಜ ಸೇವೆಗೆ ಸಂಜು ಸುಬ್ಬಯ್ಯ ಅವರನ್ನು ಮತ್ತು ಪತ್ರಕರ್ತ ಸಿಂಗಿ ಸತೀಶ್, ಸಮಾಜಸೇವೆಯನ್ನು ಗುರುತಿಸಿ ಉಂಬಾಯಿ, ಭಗತ್‌ಸಿಂಗ್ ಯುವಕ ಸಂಘದ ಗೌರವ ಅಧ್ಯಕ್ಷ ಕಣ್ಣನ್ ವೇಣು ದಂಪತಿಯನ್ನು ಸನ್ಮಾನಿಸಲಾಯಿತು.
ಗೋಣಿಕೊಪ್ಪ ಗ್ರಾಪಂ ಸದಸ್ಯ ಶರತ್‌ಕಾಂತ್, ಹಿಂದೂ ಮಳಿಯಾಳಿ ಸಮಾಜದ ಅಧ್ಯಕ್ಷ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ವಿ.ವಿ.ಅರುಣ್‌ಕುಮಾರ್, ಮೀನು ವ್ಯಾಪಾರಿ ಊಂಬಾಯಿ, ಉದ್ಯಮಿಗಳಾದ ಜೀವನ್, ಜಿತನ್, ಪುಲಿಯಂಡ ರೋಷನ್, ಭಗತ್ ಸಿಂಗ್ ಯುವಕ ಸಂಘದ ಉಪಾಧ್ಯಕ್ಷ ಕಣ್ಣನ್ ವೇಣು, ಕ್ರೀಡಾ ಸಂಚಾಲಕ ಸಂತೋಷ್ ಪಿಟ್ಟೆ, ಉಪಾಧ್ಯಕ್ಷ ವೇಣು ಮೆನನ್, ಭಗತ್‌ಸಿಂಗ್ ಯುವಕ ಸಂಘದ ನಿರ್ದೇಶಕರಾದ, ಹರಿಶ್, ಪುಷ್ಪಾ ಮನೋಜ್, ಸುರೇಶ್, ಎ.ಡಿ.ಮಂಜುನಾಥ್, ರವಿ ಸ್ಕಂದ, ನಿತಿನ್ ಆಳ್ವ, ಸಂಜಯ್, ರವಿ ಟಿಂಬರ್, ಅಭಿ, ವಿನ್ಯಾ ಮನೋಜ್, ಅಪ್ಪಿ, ಜೋಗಿ, ಸುದಿ, ಅಕ್ಷಯ್, ಶಿವು ಮತ್ತು 16 ತಂಡಗಳ ಮಾಲೀಕರು, ನಾಯಕರು, ಕ್ರೀಡಾಪಟುಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net