ಯುಗಾದಿ ಹಬ್ಬದ ಸಂದರ್ಭದಲ್ಲಿ ಉತ್ತರ ಕೊಡಗಿನ ತೊರೆನೂರು, ಶಿರಂಗಾಲ, ಮಣಜೂರು, ಕೂಡ್ಲೂರು ಗ್ರಾಮಗಳಲ್ಲಿ ಗುರುವಾರ ರೈತರು ಹೊನ್ನಾರು ಉತ್ಸವ ಆಚರಿಸಿದರು. ಬೇಸಾಯದ ಕೆಲಸ ಆರಂಭಿಸುವ ಮೊದಲ ದಿನವಾದ ಯುಗಾದಿ ಸಂದರ್ಭದಲ್ಲಿ ರೈತರು ಭೂಮಿಗೆ ಪೂಜೆ ಸಲ್ಲಿಸಿ
ಹೊನ್ನಾರು ಉಳುಮೆ ಆರಂಭಿಸುವ ಮೂಲಕ ಹೊಸ ಸಂವತ್ಸರದ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಬೆಳಗಿನ ಜಾವ ಎತ್ತು, ದನ, ಕರುಗಳನ್ನು ನದಿಗೆ ಕರೆದೊಯ್ದು ಜಳಕ ಮಾಡಿಸಿ ಅವುಗಳನ್ನು ಸಿಂಗರಿಸಿ, ಮನೆ ಮಂದಿ ಹೊಸ ಉಡುಗೆ ಧರಿಸಿ, ಜಾನುವಾರು ಹಾಗೂ ಕೃಷಿಪರಿಕರಗಳಿಗೆ ಪೂಜೆ ಸಲ್ಲಿಸಿದರು. ಇದರ ಜತೆಗೆ ಹಬ್ಬಕ್ಕಾಗಿ ಸಿದ್ದಪಡಿಸಿದ ಒಬ್ಬಟ್ಟು (ಹೋಳಿಗೆ), ಪಾಯಸ, ವಿವಿಧ ಭಕ್ಷ್ಯಗಳನ್ನು ಜಾನುವಾರುಗಳಿಗೂ ತಿನ್ನಿಸಿ ಸಂಭ್ರಮಿಸಿದರು.
ಮಧ್ಯಾಹ್ನದ ನಂತರ ತೊರೆನೂರು, ಶಿರಂಗಾಲ ಗ್ರಾಮಗಳಲ್ಲಿ ಹೊನ್ನಾರು ಮೆರವಣಿಗೆ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿ ಅಲ್ಲಿಂದ ಮಂಗಳವಾದ್ಯ ಗಳೊಂದಿಗೆ ಹೊರಟು ಗ್ರಾಮದಲ್ಲಿ ಮೆರವಣಿಗೆ ನಡೆಸಿ ರೈತರು ತಮ್ಮ ತಮ್ಮ ಜಮೀನಿನಲ್ಲಿ ಉಳುಮೆ ಆರಂಭಿಸಿದರು. ಪ್ರಸಕ್ತ ವರ್ಷದಲ್ಲಿ ಉತ್ತಮ ಮಳೆ- ಬೆಳೆಯಾಗಲಿ ಎಂದು ಪ್ರಕೃತಿಯನ್ನು ಪೂಜಿಸಿ, ಪ್ರಾರ್ಥಿಸಿದರು.
ಬಯಲುಸೀಮೆ ಪ್ರದೇಶದ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಹೆಬ್ಬಾಲೆ, ಶಿರಂಗಾಲ, ತೊರೆನೂರು, ಹುಲುಸೆ, ಕೂಡಿಗೆ, ಭುವನಗಿರಿ, ಸೀಗೆಹೊಸೂರು, ನಲ್ಲೂರು, ಮಣಜೂರು ಮೊದಲಾದ ಹಳ್ಳಿಗಳಲ್ಲಿ ರೈತರು ತಮ್ಮ ಪೂರ್ವಿಕರ ಕಾಲದಿಂದಲೂ ಯುಗಾದಿಯಂದು ಹೊನ್ನಾರು ಉಳುಮೆ ಬಹಳ ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ.
ಈ ಸಂದರ್ಭ ಮಾತನಾಡಿದರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವ ಗ್ರಾಮೀಣ ಕೃಷಿ ಬದುಕಿನ ಚಿತ್ರಣವನ್ನು ಪ್ರತಿಬಿಂಬಿಸುತ್ತದೆ. ಯುಗಾದಿ ಸಂದರ್ಭದಲ್ಲಿ ರೈತರು ತಮ್ಮ ಜಮೀನಿನಲ್ಲಿ ಹೊಸದಾಗಿ ಹೊನ್ನಾರು ಉಳುಮೆ ಅಂದರೆ ಮೊದಲ ಚಿನ್ನದ ಉಳುಮೆ ಆರಂಭಿಸುವ ಮೂಲಕ ಭೂಮಿಯನ್ನು ಪೂಜಿಸಿ ಉತ್ತಮ ಮಳೆ- ಬೆಳೆ ಹಾಗೂ ಕೃಷಿ ಫಸಲು ಬರಲಿ ಎಂದು ಪ್ರಕೃತಿಗೆ ನಮಿಸುವುದು ಮೊದಲಿನಿಂದಲೂ ವಾಡಿಕೆಯಂತೆ ನಡೆದುಕೊಂಡು ಬರುತ್ತಿದೆ ಎಂದರು.
ತೊರೆನೂರು ಗ್ರಾಮದಲ್ಲಿ ರೈತ ಟಿ.ವಿ. ಬಸವರಾಜು ಅವರು ದೇವಸ್ಥಾನ ಸಮಿತಿಯ ಜಮೀನಿನಲ್ಲಿ ಭೂಮಿಗೆ ಪೂಜೆ ಸಲ್ಲಿಸಿ ಮೊದಲ ಹೊನ್ನಾರು ಉಳುಮೆ ಆರಂಭಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಬಿ. ಜಗದೀಶ್, ಕಾರ್ಯದರ್ಶಿ ಟಿ.ಎಲ್. ಮಹೇಶ್ , ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.