ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಕೊಡವ ಧೀನ ಬಂಧು ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಟ್ಟೇರ ಕಾರ್ಯಪ್ಪ, ಜಯಕುಮಾರ್, ಕಾವೇರಿಯಪ್ಪ, ಚೇಂದ್ರಿಮಾಡ ಜಿ.ಮಾದಪ್ಪ, ಚಂಬಾಂಡ ಸೋಮಣ್ಣ, ಕಳ್ಳಿಚಂಡ ಮುದ್ದುರಾಜು, ಸಣ್ಣುವಂಡ ಎಸ್.ಮಾದಯ್ಯ, ಟಿ. ಕೆ. ಲತಾ, ಯಮುನ, ಪಾಲಕರು ಇದ್ದರು.
ಪೊನ್ನಂಪೇಟೆ:ಕೊಡವ ದೀನಬಂಧು ಚಾರಿಟಬಲ್ ಟ್ರಸ್ಟ್ ಮೈಸೂರು ಸಹಯೋಗದಲ್ಲಿ ಗೋಣಿಕೊಪ್ಪಲು ಕಾವೇರಿ ಪದವಿ, ಪದವಿ ಪೂರ್ವ, ಸ್ನಾತಕೋತ್ತರ ಕಾಲೇಜಿನ ವಿದ್ಯಾರ್ಥಿಗಳು, ಸರ್ವದೈವತಾ ಪದವಿ ಪೂರ್ವ ಕಾಲೇಜು, ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಒಟ್ಟು 156 ಕೊಡವ ಹಾಗೂ ಕೊಡವ ಭಾಷಿಕ ಜನಾಂಗದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಪದವಿ ವಿದ್ಯಾರ್ಥಿಗಳಿಗೆ ತಲಾ 8000 ರೂ. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ತಲಾ 5000 ರೂ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಲಾ 10,000 ರೂ.ನಂತೆ ಒಟ್ಟು 156 ವಿದ್ಯಾರ್ಥಿಗಳಿಗೆ 10,36,000 ರೂ.ಗಳನ್ನು ವಿತರಿಸಲಾಯಿತು.
ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಕೊಡವ ದೀನ ಬಂಧು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕಟ್ಟೇರ ಕಾರ್ಯಪ್ಪ ಮಾತನಾಡಿ, ಕೊಡವ ದೀನ ಬಂಧು ಚಾರಿಟಬಲ್ ಟ್ರಸ್ಟ್ ವತಿಯಿಂದ ಕೊಡವ ಮತ್ತು ಕೊಡವ ಭಾಷಿಕ ಜನಾಂಗದಲ್ಲಿ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಕೊಡವ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿವರ್ಷ ವಿದ್ಯಾರ್ಥಿವೇತನ ನೀಡುತ್ತಾ ಬರುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಗೋಣಿಕೊಪ್ಪಲು ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಮಾಳೇಟಿರ ಬಿ. ಕಾವೇರಿಯಪ್ಪ ಮಾತನಾಡಿ, ಕೊಡವ ದೀನಬಂಧು ಚಾರಿಟಬಲ್ ಟ್ರಸ್ಟ್ ನಿಂದ ನೀಡುವ ವಿದ್ಯಾರ್ಥಿ ವೇತನ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲಿದೆ. ಈ ಟ್ರಸ್ಟ್‌ನಿಂದ ಸಹಾಯ ಪಡೆದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ತಾವು ಉದ್ಯೋಗಕ್ಕೆ ಸೇರಿದ ನಂತರ ಟ್ರಸ್ಟ್‌ಗೆ ಧನ ಸಹಾಯ ಮಾಡಿದರೆ, ಮತ್ತಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಸಾಧ್ಯವಾಗುತ್ತದೆ. ಟ್ರಸ್ಟ್ ನಿಂದ ಸಹಾಯ ಪಡೆದ ವಿದ್ಯಾರ್ಥಿಗಳು ಕರೆಮಾಡಿ ಅಥವಾ ಪತ್ರದ ಮೂಲಕ ಟ್ರಸ್ಟ್ ಗೆ ಧನ್ಯವಾದಗಳನ್ನು ತಿಳಿಸುವ ಸಂಪ್ರದಾಯವನ್ನು ರೂಢಿಸಿಕೊಳ್ಳಬೇಕು. ಇದರಿಂದ ಟ್ರಸ್ಟ್ ಮುನ್ನಡೆಸುವ ಹಿರಿಯ ಜೀವಗಳಿಗೆ ಖುಷಿಯಾಗುತ್ತದೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ಜಯಕುಮಾರ್, ಖಜಾಂಚಿ ನಿವೃತ್ತ ವಿಂಗ್ ಕಮಾಂಡರ್ ಚೇಂದ್ರಿಮಾಡ ಜಿ.ಮಾದಪ್ಪ, ಟ್ರಸ್ಟಿಗಳಾದ ಚಂಬಾಂಡ ಸೋಮಣ್ಣ, ಕಳ್ಳಿಚಂಡ ಮುದ್ದುರಾಜು, ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಣ್ಣುವಂಡ ಎಸ್.ಮಾದಯ್ಯ, ಕಾವೇರಿ ಕಾಲೇಜು ಆಡಳಿತಾತ್ಮಕ ಸಿಬ್ಬಂದಿ ಟಿ. ಕೆ. ಲತಾ, ಯಮುನ ಇದ್ದರು.