ಸುಂಟಿಕೊಪ್ಪ ವಿವಿಧೆಡೆ ಗೌರಿ-ಗಣೇಶ ವಿಸರ್ಜನಾ ಸಂಭ್ರಮ

ಕೊಡಗರಹಳ್ಳಿ ಶ್ರೀ ವಿಘ್ನೇಶ್ವರ ಸೇವಾ ಸಂಘದ ಎಂಟನೇ ವರ್ಷದ ಗೌರಿ-ಗಣೇಶೋತ್ಸವದ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಕೊಡಗರಹಳ್ಳಿ ಶ್ರೀ ವಿಘ್ನೇಶ್ವರ ಸೇವಾ ಸಂಘದ ಎಂಟನೇ ವರ್ಷದ ಗೌರಿ-ಗಣೇಶೋತ್ಸವದ ಮೂರ್ತಿಗಳನ್ನು ವಿಸರ್ಜಿಸಲಾಯಿತು.
Published on
ಸುಂಟಿಕೊಪ್ಪ: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್‌ನಗರದ ಶ್ರೀ ವಿನಾಯಕ ಮಿತ್ರ ಮಂಡಳಿ ಸಮಿತಿಯ ಎರಡನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಇರಿಸಿ ಎಚ್.ಡಿ.ಕೋಟೆಯ ನಗಾರಿ, ಡಿಜೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ವಿಸರ್ಜಿಸಲಾಯಿತು.
ಪಂಪ್‌ಹೌಸ್ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್‌ನಗರದ ಶ್ರೀ ವಿನಾಯಕ ಮಿತ್ರ ಮಂಡಳಿ ಸಮಿತಿಯ ಎರಡನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕೂರಿಸಿ ಪಂಪ್‌ಹೌಸ್ ರಸ್ತೆಯಿಂದ ಅಯ್ಯಪ್ಪ ದೇವಾಲಯದವರೆಗೆ, ಬಳಿಕ ಮಾದಾಪುರ ರಸ್ತೆಯ ವೃಕ್ಷೋದ್ಭವ ಗಣಪತಿ ದೇವಾಲಯದವರೆಗೆ ಭವ್ಯ ಮೆರವಣಿಗೆ ನಡೆಸಿ ಹರದೂರು ಹೊಳೆಯಲ್ಲಿ ವಿಸರ್ಜಿಸಲಾಯಿತು.
ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಮೂರ್ತಿಯ ವಿಸರ್ಜನೋತ್ಸವ ಕಾರ್ಯಕ್ರಮವು ಬುಧವಾರ ಅದ್ದೂರಿಯಾಗಿ ನಡೆಯಿತು.
ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಂಘದ 8ನೇ ವರ್ಷದ ಗೌರಿ-ಗಣೇಶೋತ್ಸವದ ವಿಸರ್ಜನೋತ್ಸವವು ಬುಧವಾರ ಸಂಜೆ ವಿವಿಧ ಪೂಜಾ ಕೈಂಕಾರ್ಯದ ನಂತರ ಕೊಡಗರಹಳ್ಳಿ ಪ್ರಮುಖ ಬೀದಿಯಲ್ಲಿ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಗೌರಿ-ಗಣೇಶ ಉತ್ಸವ ಮೂರ್ತಿಯ ಭವ್ಯ ಶೋಭಯಾತ್ರೆಯೊಂದಿಗೆ ನಡೆದು ರಾತ್ರಿ ಸ್ಥಳೀಯ ಕೆರೆಯಲ್ಲಿ ವಿಸರ್ಜಿಸಲಾಯಿತು. ಸುತ್ತಮುತ್ತಲಿನ ನೂರಾರು ಮಂದಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.
ಸೌಹಾರ್ದ ಸಾರಿದ ಮುಸ್ಲಿಂ ಕುಟುಂಬ: ಕೊಡಗರಹಳ್ಳಿಯ ಬೈತೂರಪ್ಪ ದೇವಾಲಯದ ಬಳಿಯ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಮೂರ್ತಿಯ ವಿಸರ್ಜನೋತ್ಸವ ಮೆರವಣಿಗೆಯ ವೇಳೆ ಸ್ಥಳೀಯ ರಫೀಕ್ ಮತ್ತು ಇಬ್ರಾಹಿಂ ಕುಟುಂಬದವರು ಹಿಂದೂಗಳಿಗೆ ಸಿಹಿ ಮತ್ತು ತಂಪು ಪಾನೀಯ ಹಂಚಿ ಸೌಹಾರ್ದತೆ ಮೆರೆದರು.
ಮಾದಾಪುರ ರಸ್ತೆಯಲ್ಲಿರುವ ವೃಕ್ಷೋಧ್ಭವ ಶಕ್ತಿ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಪಿಸಿದ್ದ ಗೌರಿ-ಗಣೇಶ ಉತ್ಸವ ಮೂರ್ತಿಗೆ ಮಹಾಪೂಜೆ ನೆರವೇರಿಸಿ ನಂತರ ಹರದೂರು ಹೊಳೆಯಲ್ಲಿ ಸಂಜೆ ವಿಸರ್ಜಿಸಲಾಯಿತು.
ಎಮ್ಮೆಗುಂಡಿಯ ಬಾಲಗಣಪತಿ ಮಿತ್ರ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಎರಡನೇ ವರ್ಷದ ಗೌರಿ-ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಎಮ್ಮೆಗುಂಡಿಯಿಂದ ಒಂಟಿಕೊಪ್ಪ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಹಿಂತಿರುಗಿ ಎಮ್ಮೆ ಗುಂಡಿಯ ಕೆರೆಯಲ್ಲಿ ವಿಸರ್ಜಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net