ಕಿರುಗೂರಿನಲ್ಲಿ ಹಿರಿಯ ಕ್ರೀಡಾಪಟುಗಳ ಸ್ನೇಹ ಮಿಲನ

ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ೧೯೮೨-೮೩ರ ಕರ್ನಾಟಕ ರಾಜ್ಯದ ಕ್ರೀಡಾ ವಸತಿ ನಿಲಯದ ಮೊದಲ ಬ್ಯಾಚ್‌ನ ಕ್ರೀಡಾಪಟುಗಳು.
ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ೧೯೮೨-೮೩ರ ಕರ್ನಾಟಕ ರಾಜ್ಯದ ಕ್ರೀಡಾ ವಸತಿ ನಿಲಯದ ಮೊದಲ ಬ್ಯಾಚ್‌ನ ಕ್ರೀಡಾಪಟುಗಳು.
Published on
ಪೊನ್ನಂಪೇಟೆ: ಕ್ರೀಡಾ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಕ್ರೀಡಾ ದಿಗ್ಗಜರು ಒಂದೆಡೆ ಸೇರಿ ತಮ್ಮ ಹಳೆಯ ನೆನಪುಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಅರ್ಥಪೂರ್ಣವಾದ ಸ್ನೇಹ ಮಿಲನ ಕಾರ್ಯಕ್ರಮವನ್ನು ಆಚರಿಸಿಕೊಂಡರು.
೧೯೮೨-೮೩ರ ಕರ್ನಾಟಕ ರಾಜ್ಯದ ಕ್ರೀಡಾ ವಸತಿ ನಿಲಯದ ಮೊದಲ ಬ್ಯಾಚ್‌ನ ಕ್ರೀಡಾಪಟುಗಳ ಈ ಸ್ನೇಹ ಮಿಲನ ಕಾರ್ಯಕ್ರಮ ಪೊನ್ನಂಪೇಟೆ ಸಮೀಪದ ಕಿರುಗೂರಿನ ರೆಸಾರ್ಟ್‌ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಿಗ್ಗಜರು, ತಮ್ಮ ೪೪ ವರ್ಷಗಳ ಸುದೀರ್ಘ ಕ್ರೀಡಾ ಪಯಣದ ಅನುಭವವನ್ನು ಮೆಲುಕು ಹಾಕುತ್ತಾ, ನಡೆದು ಬಂದ ಹಾದಿಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಹಳೆಯ ದಿನಗಳ ಮಧುರ ಕ್ಷಣಗಳು, ತಮ್ಮ ಕ್ರೀಡಾ ಸಾಧನೆಯ ಹಾದಿ, ಈ ಸಾಧನೆಗಳಿಗಾಗಿ ದೊರೆತ ಪ್ರೇರಣೆ ಹಾಗೂ ಹಿಂದಿನ ಮರೆಯಲಾಗದ ಅನುಭವಗಳನ್ನು ಹಂಚಿಕೊಂಡ ಈ ಕ್ರೀಡಾ ಸಾಧಕರು, ತಾವು ಪಟ್ಟ ಶ್ರಮ, ಎದುರಿಸಿದ ಸವಾಲುಗಳು ಮತ್ತು ಸಾಧಿಸಿದ ಮೈಲಿಗಲ್ಲುಗಳ ಬಗ್ಗೆ ಅವಲೋಕನ ನಡೆಸಿದರು.
ಕಾರ್ಯಕ್ರಮದಲ್ಲಿ ತಮ್ಮ ಕ್ರೀಡಾ ಭವಿಷ್ಯ ರೂಪಿಸಲು ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ನೀಡಿದ ಪದ್ಮಶ್ರೀ ಡಾ.ಮೊಳ್ಳೇರ ಪಿ.ಗಣೇಶ್, ಮೊಳ್ಳೇರ ಸುಬ್ಬಯ್ಯ ಹಾಗೂ ಚೇಂದಂಡ ಈರಪ್ಪ ಅವರನ್ನು ವಿಶೇಷವಾಗಿ ಸ್ಮರಿಸಿದ ಈ ಹಿರಿಯ ಕ್ರೀಡಾ ದಿಗ್ಗಜರು, ಹೊಸ ಪೀಳಿಗೆಯ ಕ್ರೀಡಾಪಟುಗಳಿಗೆ ಯಶಸ್ಸು ಸಿಗಲು ಸರಿಯಾದ ಆಪ್ತ ಸಮಾಲೋಚನೆ, ವೈಜ್ಞಾನಿಕ ತರಬೇತಿ ಮತ್ತು ಸರ್ಕಾರದಿಂದ ದೊರೆಯಬೇಕಾದ ಬೆಂಬಲದ ಬಗೆಯು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಕ್ರೀಡೆಯ ಜೀವಂತಿಕೆಯನ್ನು ಭದ್ರಪಡಿಸಲು ತಮ್ಮ ಎಲ್ಲಾ ಅನುಭವಗಳನ್ನು ತರಬೇತಿ, ಸಲಹೆ ಮತ್ತು ಮಾರ್ಗದರ್ಶನದ ರೂಪದಲ್ಲಿ ದಾರೆ ಎರೆಯಲು ಸಿದ್ಧವಿರುವುದಾಗಿ ಇದೇ ಸಂದರ್ಭದಲ್ಲಿ ಇವರು ಘೋಷಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ವಸತಿ ನಿಲಯದ ಮೊದಲ ಬ್ಯಾಚ್‌ನ ಕ್ರೀಡಾಪಟುಗಳಾದ ಅಪ್ಪನೆರವಂಡ ಗಿರಿ ಮಾಚಯ್ಯ, ಪೊಡನೊಳಂಡ ನಾಣಯ್ಯ(ದಿಲ್ಲು) ಮತ್ತು ಕಲಿಯಂಡ ಪೂಣಚ್ಚ ಈ ಮೂರನ್ನು ಹೊರತುಪಡಿಸಿ ಒಲಂಪಿಯನ್‌ಗಳಾದ ಡಾ.ಅಂಜಪರುವಂಡ ಸುಬ್ಬಯ್ಯ, ಚೆಪ್ಪುಡೀರ ಎಸ್.ಪೂಣಚ್ಚ, ಅಂತರಾಷ್ಟ್ರೀಯ ಹಾಕಿ ಆಟಗಾರರಾದ ಕುಲ್ಲೇಟಿರ ಉತ್ತಯ್ಯ, ಮುಕ್ಕಾಟಿರ ವಿನೋದ್ ಚಿಣ್ಣಪ್ಪ, ಬುಟ್ಟಿಯಂಡ ಚಂಗಪ್ಪ, ರಾಷ್ಟ್ರೀಯ ಹಾಕಿ ಆಟಗಾರರಾದ ಚೆಪ್ಪುಡೀರ ಕಾರ್ಯಪ್ಪ, ಬುಟ್ಟಿಯಂಡ ಕಾರ್ಯಪ್ಪ, ಕುಪ್ಪಂಡ ನಾಚಪ್ಪ, ಪಾರುವಂಗಡ ಸೋಮಣ್ಣ(ಗಿರಿ), ಕೊಕ್ಕಂಡ ಮೊಣ್ಣಪ್ಪ, ಕನ್ನಂಬಿರ ಗಣಪತಿ, ಕುಟ್ಟಂಡ ಕಾರ್ಸನ್, ಕಲಿಯಂಡ ಮಾದಯ್ಯ ಹಾಗೂ ಬಾಳೆಯಡ ಕಾಳಪ್ಪ, ಅಥ್ಲೆಟಿಕ್ಸ್ ಕ್ರೀಡಾಳುಗಳಾದ ಕೊಕ್ಕಲೆರ ನಾಣಯ್ಯ, ಕಾಳಚಂಡ ರವಿ ತಮ್ಮಯ್ಯ, ಕುಲ್ಲೇಟಿರ ಸುಬ್ಬಯ್ಯ ಮೊದಲಾದವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net