ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ನಾಡು ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿತ್ತು. ಅದನ್ನು ಏಕೀಕರಣಗೊಳಿಸಿದ ನೆನಪಾಗಿ ಹಾಗೂ ಮೈಸೂರು ರಾಜ್ಯವೆಂದಿದ್ದ ಹೆಸರನ್ನು ಕರ್ನಾಟಕವೆಂದು ಮರು ನಾಮಕರಣ ಮಾಡಿದ ಸುದಿನವನ್ನು ಕನ್ನಡ ರಾಜ್ಯೋತ್ಸವವೆಂದು ಆಚರಿಸುತ್ತೇವೆ. ಕನ್ನಡ ಭಾಷೆ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಭಾಷೆ. ಈ ನಾಡಿನ ರಾಜರ ಪರಾಕ್ರಮ ಉತ್ತರ ಭಾರತದವರಿಗೂ ಹರಡಿತ್ತು. ಇಮ್ಮಡಿ ಪುಲಕೇಶಿ, ಮುಮ್ಮಡಿ ಗೋವಿಂದರಂತಹ ರಾಜರ ಇತಿಹಾಸಗಳು ಇದಕ್ಕೆ ಸಾಕ್ಷಿಯಾಗಿ ನಿಂತಿವೆ ಎಂದು ಅಭಿಪ್ರಾಯಪಟ್ಟರು.
ಎಲ್ಲ ಕ್ಷೇತ್ರಗಳಲ್ಲೂ ಶ್ರೇಷ್ಠತೆ ಹೊಂದಿರುವ ಕನ್ನಡ ಭಾಷೆಯ ಅನನ್ಯತೆ, ಹಿರಿಮೆ, ಸುಲಲಿತತೆ ತಿಳಿಯದಿರುವುದರಿಂದ ಹೆಚ್ಚಿನವರು ಭಾಷೆಯನ್ನು ಕೀಳಾಗಿ ಕಾಣುತ್ತಿದ್ದಾರೆ. ಆದರೆ ಭಾಷೆಯು ಎಲ್ಲ ರೀತಿಯಲ್ಲೂ ಮಹತ್ವಪೂರ್ಣವಾಗಿದೆ. ಜತೆಗೆ ವೈಜ್ಞಾನಿಕವಾಗಿ ರಚನೆಯಾದಂತಹ ವರ್ಣಮಾಲೆ, 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು, ಲಿಪಿಗಳಲ್ಲೇ ಅತ್ಯಂತ ಸುಂದರ ಲಿಪಿಯಾದ ಕಾರಣ ವಿಶ್ವ ಲಿಪಿಗಳ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದನ್ನು ಗಮನಿಸಬಹುದು. ಅಷ್ಟೇ ಅಲ್ಲದೆ ಬರೆದಂತೆ ಓದುವ , ಓದಿದಂತೆ ಉಚ್ಚರಿಸುವ, ಉಚ್ಚರಿಸಿದಂತೆ ಬರೆಯುವ ಕೆಲವೇ ಕೆಲವು ಭಾಷೆಗಳಲ್ಲಿ ಕನ್ನಡ ಒಂದು. ಆದ್ದರಿಂದ ವ್ಯವಹಾರಿಕವಾಗಿ ವಿವಿಧ ಭಾಷೆಗಳು ಅವಶ್ಯಕತೆ ಇದ್ದರೂ ಕನ್ನಡ ಭಾಷೆಯನ್ನು ಎಂದಿಗೂ ಮರೆಯಬಾರದು. ಹೊರಗಿನಿಂದ ಬಂದು ಇಲ್ಲಿ ನೆಲೆಸಿದವರಿಗೂ ನಮ್ಮ ಭಾಷೆ, ನಮ್ಮ ಸಂಸ್ಕೃತಿಯನ್ನು ಕಲಿಸಿ ನಮ್ಮ ಮೂಲ ಉಳಿಸುವ ಪ್ರಯತ್ನ ಪ್ರತಿಯೊಬ್ಬರಿಂದ ಆದಾಗ ಕನ್ನಡ ಭಾಷೆಯು ಉಳಿಯುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್. ಸಲ್ದಾನ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ವ್ಯವಹಾರಿಕ ದೃಷ್ಟಿಯಿಂದ ವಿವಿಧ ಭಾಷೆಗಳನ್ನು ಕಲಿಯುವುದು ಹಾಗೂ ಬಳಸುವುದು ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ನಾಡಿನ ಮಾತೃ ಭಾಷೆ ಕನ್ನಡವನ್ನು ಎಂದಿಗೂ ನಿರ್ಲಕ್ಷಿಸಬಾರದು. ಭಾಷೆಯ ಹಿರಿಮೆ, ಇತಿಹಾಸ , ರಚನೆಯಾದಂತಹ ಶ್ರೇಷ್ಠ ಗ್ರಂಥಗಳು, ಸಾಹಿತ್ಯ, ಸಂಗೀತ ಇವೆಲ್ಲವನ್ನು ನಾವು ಅರಿತು ಮುಂದಿನ ಪೀಳಿಗೆಗೆ ಅರ್ಥೈಸಿಕೊಡಬೇಕು. ಬಹಳ ಸ್ವಂತಿಕೆಯಿಂದ ಕೂಡಿದ ಭಾಷೆಯನ್ನು ಬಳಸಿ ಬೆಳೆಸುವ ಪಣವನ್ನು ನಾವೆಲ್ಲರೂ ತೊಡಬೇಕು. ಮನೆಯಲ್ಲಿ ಬೇರೆ , ಬೇರೆ ಭಾಷೆ ನಮ್ಮ ಮಾತೃ ಭಾಷೆಯಾಗಿದ್ದರೂ ನಮ್ಮನ್ನು ಸಾಮಾಜಿಕವಾಗಿ ಒಗ್ಗೂಡಿಸುವ ಭಾಷೆ ಕನ್ನಡ ಎಂಬುದನ್ನು ಅರಿತು ಭಾಷೆ ಬಳಕೆ ಕಡೆ ಗಮನಹರಿಸೋಣ ಎಂದರು.
ವೇದಿಕೆ ಮೇಲೆ ಐಕ್ಯುಎಸಿ ಸಂಯೋಜಕಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಮುಖ್ಯಸ್ಥೆ ಪ್ರಿಯಾ ಮುದ್ದಪ್ಪ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗರಾಜು, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ. ಸುನಿಲ್ ಕುಮಾರ್ ಇತರರು ಇದ್ದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.