ಸಿದ್ದಾಪುರ: ಕಾವೇರಿ ನದಿ ಸೇತುವೆ ಸಮೀಪ ಕಸ ಬಿಸಾಡಿದ ನೆಲ್ಯಹುದಿಕೇರಿ ಗ್ರಾಮದ ಹಂಸ ಎಂಬವರಿಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ಮಂಗಳವಾರ ದಂಡ ವಿಧಿಸಿದೆ.
ಸಿದ್ದಾಪುರ-ಮಡಿಕೇರಿ ಸಂಪರ್ಕ ರಸ್ತೆಯಲ್ಲಿರುವ ಕಾವೇರಿ ಸೇತುವೆ ಬಳಿ ತ್ಯಾಜ್ಯ ಬಿಸಾಡುತ್ತಿರುವ ಬಗ್ಗೆ ಬಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ, ಹಂಸ ಕಸವನ್ನು ತಂದು ಸುರಿಯುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಂಡು 500 ರೂ. ದಂಡ ವಿಧಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ನದಿ ತೀರದಲ್ಲಿ ತ್ಯಾಜ್ಯ ಬಿಸಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮುಂದಿನ ದಿನಗಳಲ್ಲಿ ಇದೇ ಪ್ರವೃತ್ತಿ ಮುಂದುವರೆದರೆ 5 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಪಂಚಾಯಿತಿ ಆಡಳಿತ ಎಚ್ಚರಿಕೆ ನೀಡಿದೆ.