ಕಾಡಾನೆಯಿಂದ ರಸ್ತೆಯಲ್ಲಿ ನಡೆದು ಹೋಗಲು ಭಯ

ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿ ದಕ್ಷಿತ್ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಪಾರ್ವತಮ್ಮ, ಸಾವಿತ್ರವ್ವ, ನಿರ್ಮಲಾ ಇದ್ದರು.
ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿ ದಕ್ಷಿತ್ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಪಾರ್ವತಮ್ಮ, ಸಾವಿತ್ರವ್ವ, ನಿರ್ಮಲಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಳಗುಂದ ಸರ್ಕಾರಿ ಶಾಲೆಯ ಗ್ರಾಮಸಭೆಯಲ್ಲಿ ಮಕ್ಕಳ ಅಳಲು
ಸೋಮವಾರಪೇಟೆ: ಕಾಡಾನೆ ಕಾಟದಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಭಯವಾಗುತ್ತದೆ. ಬೀದಿ ದೀಪಗಳನ್ನಾದರೂ ಅಳವಡಿಸಿಕೊಡಿ ಎಂದು ವಿದ್ಯಾರ್ಥಿನಿ ಪಿಡಿಒ ಗಮನ ಸೆಳೆದರು.
ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೇಳೂರು ಗ್ರಾಮ ಪಂಚಾಯಿತಿ, ಬೆಂಗಳೂರಿನ ಸಿಎಂಸಿಎ ಸಂಸ್ಥೆ ಹಾಗೂ ಕೊಡಗಿನ ನಾವು ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಮೀಸಲು ಅರಣ್ಯ ಪಕ್ಕದಲ್ಲೇ ಬೇಳೂರು ಶಾಲೆ ಇದೆ. ಕಾಡಾನೆ ಭಯ, ಬೀದಿನಾಯಿಗಳ ಹಾವಳಿಯಿಂದ ಭಯದಿಂದಲೇ ಶಾಲೆಗೆ ಬರಬೇಕು. ಮಕ್ಕಳು ನಡೆದುಕೊಂಡು ಹೋಗುವ ರಸ್ತೆಯಲ್ಲಿ ಬೀದಿ ದೀಪ ಅಳವಡಿಸಬೇಕು. ಇದರಿಂದ ಗ್ರಾಮದ ನಿವಾಸಿಗಳಿಗೂ ಉಪಯೋಗವಾಗಲಿದೆ ಎಂದು ವಿದ್ಯಾರ್ಥಿನಿ ಪೂರ್ವಿ ಮನವಿ ಮಾಡಿದರು.
ಶಾಲೆಯ ಹಿಂಭಾಗದಲ್ಲಿ ಆನೆಕಂದಕ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಕಾಲು ಜಾರಿದರೆ ಕಂದಕದೊಳಗೆ ಬೀಳಬೇಕಾಗುತ್ತದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಈ ಹಿಂದೆಯೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿನಿ ಸೀಮಾ ಹೇಳಿದರು.
ಸ್ಪಂದಿಸಿದ ಪಿಡಿಒ ಮೋಹನ್, ಪಂಚಾಯಿತಿಯಿಂದ ರಸ್ತೆ ಬದಿ ಬೀದಿ ದೀಪ ಅಳವಡಿಸುತ್ತೇವೆ. ಶಾಲೆಯಲ್ಲಿ ತೆಗೆಸಿರುವ ಕೊಳವೆಬಾವಿಗೆ ಮೋಟರ್ ಅಳವಡಿಸಲಾಗುವುದು. ಇಂಗುಗುಂಡಿ ನಿರ್ಮಿಸಲು ಕ್ರಮ ತೆಗದುಕೊಳ್ಳುತ್ತೇವೆ. ಕಂದಕದ ಸಮೀಪ ಕಾಂಪೌಂಡ್ ನಿರ್ಮಿಸಲು ಅರಣ್ಯ ಇಲಾಖೆಗೆ ಪಂಚಾಯಿತಿಯಿಂದ ಮನವಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬೇಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಟಕಿಗಳು ಹಾಳಾಗಿವೆ. ತರಗತಿಯಲ್ಲಿ ಕೂರಲು ಚಳಿಯಾಗುತ್ತದೆ. ರಾತ್ರಿ ವೇಳೆ ಹಾವು ರೂಂ ಒಳಗೆ ಸೇರಿಕೊಳ್ಳುವ ಭಯವಿದೆ ಎಂದು ವಿದ್ಯಾರ್ಥಿಗಳು ಹೇಳಿದರು.
ಬಳಗುಂದ ಶಾಲೆಯ ಅವರಣದೊಳಗೆ ಕಿಡಿಗೇಡಿಗಳು ಸಮಸ್ಯೆ ಮಾಡುತ್ತಿದ್ದಾರೆ. ಶೌಚಗೃಹದ ಬೀಗವನ್ನು ಒಡೆದು ಹಾಕುತ್ತಿದ್ದಾರೆ. ಶಾಲಾ ಆವರಣದೊಳಗೆ ಮದ್ಯದ ಬಾಟಲ್‌ಗಳನ್ನು ಎಸೆಯುತ್ತಾರೆ ಎಂದು ವಿದ್ಯಾರ್ಥಿಗಳು ಅರೋಪಿಸಿದರು. ಶಾಲಾ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಡುವ ಭರವಸೆಯನ್ನು ಪಿಡಿಒ ನೀಡಿದರು. ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಮುಖ್ಯಶಿಕ್ಷಕಿ ಭಾಗ್ಯಾ ಹೇಳಿದರು.
ಈ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪ್ರಥಮ ಚಿಕಿತ್ಸೆ ಕಿಟ್ ನೀಡುತ್ತಿದ್ದರು. ಈಗ ಆರೋಗ್ಯ ಕೇಂದ್ರಕ್ಕೆ ಹಾಕಲಾಗಿದೆ ಎಂದು ಹೇಳಿದರು. ಅರೋಗ್ಯ ಕೇಂದ್ರದಲ್ಲಿ ವೈದ್ಯರು, ದಾದಿಯರು ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಮಾತ್ರೆ, ಔಷಧವನ್ನು ವೃದ್ಧರು ಕೇಳುತ್ತಾರೆ. ನಾವು ಎಲ್ಲಿಂದ ಕೊಡುವುದು ಎಂದು ಆಶಾ ಕಾರ್ಯಕರ್ತೆಯೊಬ್ಬರು ಅಸಹಾಯಕತೆ ಹೇಳಿಕೊಂಡರು. ಆಶಾ ಕಾರ್ಯಕರ್ತೆಯರಿಗೂ ಸಂಬಳವಾಗಿಲ್ಲ ಎಂದು ಹೇಳಿದರು. ಶಾಲೆಗೆ ಹೂದೋಟ ನಿರ್ಮಿಸಿಕೊಡಬೇಕು. ನೀರಿನ ಸೌಲಭ್ಯ ಒದಗಿಸಿಕೊಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.
ಮಕ್ಕಳ ಹಕ್ಕುಗಳು ಮತ್ತು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಸಾವಿತ್ರವ್ವ ಮಾಹಿತಿ ನೀಡಿದರು. ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಸುಜಾತಾ, ಬೇಳೂರು ಶಾಲೆ ಮುಖ್ಯಶಿಕ್ಷಕಿ ನಿರ್ಮಲಾ, ನಾವು ಪ್ರತಿಷ್ಠಾನದ ಸುಮನಾ ಮ್ಯಾಥ್ಯು, ಗೌತಮ್ ಕಿರಗಂದೂರು, ಶಿಕ್ಷಕಿ ಪುಷ್ಪಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net