ಗಾಂಧಿನಗರದಲ್ಲಿ ಬರೆಕುಸಿತ ಆತಂಕ

ಸೋಮವಾರಪೇಟೆ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ 2ನೇ ವಾರ್ಡ್‌ಗೆ ತೆರಳಿದ ಶಾಸಕರು ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಸತೀಶ್, ಸುರೇಶ್‌ಶೆಟ್ಟಿ, ಚೇತನ್, ಪ್ರವೀಣ್, ಸೋಮೇಶ್ ಇತರರು ಇದ್ದರು.
ಸೋಮವಾರಪೇಟೆ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ 2ನೇ ವಾರ್ಡ್‌ಗೆ ತೆರಳಿದ ಶಾಸಕರು ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಸತೀಶ್, ಸುರೇಶ್‌ಶೆಟ್ಟಿ, ಚೇತನ್, ಪ್ರವೀಣ್, ಸೋಮೇಶ್ ಇತರರು ಇದ್ದರು.
Published on
ಸೋಮವಾರಪೇಟೆ: ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರ 2ನೇ ವಾರ್ಡ್‌ನಲ್ಲಿ ಬರೆಕುಸಿತದ ಭೀತಿಯಲ್ಲಿರುವ ಅಲ್ಲಿನ ನಿವಾಸಿಗಳನ್ನು ಭೇಟಿಯಾದ ಶಾಸಕ ಡಾ.ಮಂತರ್‌ಗೌಡ ಸಮಸ್ಯೆ ಆಲಿಸಿದರು.

ಸೋಮವಾರಪೇಟೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ನಿವಾಸಿಗಳು, ವಾಸದ ಮನೆಗಳು ಇರುವ ಜಾಗದಲ್ಲಿ ಬರೆ ಕುಸಿದು ಮನೆಗಳು ಕುಸಿಯುವ ಹಂತದಲ್ಲಿದ್ದು ಕೂಡಲೆ ತಡೆಗೋಡೆ ನಿರ್ಮಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಶಾಸಕರಿಗೆ ಮನವಿ ಸಲ್ಲಿಸಿದರು.

ಈ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಡಾ.ಮಂತರ್‌ಗೌಡ ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ವಾರ್ಡ್‌ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜತೆಗೆ ಚೌಡ್ಲು 2ನೇ ವಾರ್ಡ್‌ಗೆ ಭೇಟಿ ನೀಡಿ ನಿವಾಸಿಗಳಿಂದ ಮಾಹಿತಿ ಪಡೆದರು. ದಶಕಗಳಿಂದಲೂ ಇಲ್ಲಿನ ನಿವಾಸಿಗಳು ತಡೆಗೋಡೆ ನಿರ್ಮಿಸಿಕೊಡುವಂತೆ ಅಂಗಲಾಚುತ್ತಿದ್ದಾರೆ. ಕಾರ್ಮಿಕರು ಮಳೆಗಾಲದಲ್ಲಿ ಜೀವಭಯದಲ್ಲೇ ರಾತ್ರಿ ಕಳೆಯುತ್ತಿದ್ದಾರೆ. ಅನೇಕ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಬರೆಕುಸಿದರೆ ಮನೆಗಳು ನೆಲಸಮವಾಗುತ್ತದೆ ಎಂದು ವಾರ್ಡ್ ಸದಸ್ಯ ಸುರೇಶ್‌ಶೆಟ್ಟಿ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.

ಸೂಕ್ತ ಸ್ಥಳಗಳಲ್ಲಿ ತಡೆಗೋಡೆ ಮತ್ತು ಬಿರುಕು ಬಿಟ್ಟಿರುವ ಮನೆಗಳ ಬಗ್ಗೆ ವಿಸ್ತೃತ ವರದಿ ನೀಡುವಂತೆ ಅಧಿಕಾರಿಗಳಿಗೆ ಶಾಸಕ ಮಂತರ್‌ಗೌಡ ಸೂಚಿಸಿದರು. ಚೌಡ್ಲು 2ನೇ ವಾರ್ಡ್‌ನ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಸತೀಶ್, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಸೋಮೇಶ್, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಚೇತನ್, ಪ್ರವೀಣ್, ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ರಫೀಕ್, ಸುಡಾ ಸಮಿತಿ ಸದಸ್ಯ ದರ್ಶನ್, ಪ್ರಮುಖರಾದ ಮಧು, ವಾರ್ಡ್ ನಿವಾಸಿಗಳಾದ ಫ್ರಾನ್ಸಿಸ್ ಸಾಜು, ಅನಿಲ್, ಸತೀಶ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net