ಮುಂಗಾರು ಮಳೆ ಕೊರತೆ ಆತಂಕದಲ್ಲಿ ರೈತರು

 ಮಳೆ ಕೊರತೆಯಿಂದ ಕೊಡಗಿನ ನದಿಗಳಲ್ಲಿ ನೀರಿನ ಮಟ್ಟ ಮಳೆಗಾಲದಲ್ಲೂ ಹೆಚ್ಚಾಗಲಿಲ್ಲ
ಮಳೆ ಕೊರತೆಯಿಂದ ಕೊಡಗಿನ ನದಿಗಳಲ್ಲಿ ನೀರಿನ ಮಟ್ಟ ಮಳೆಗಾಲದಲ್ಲೂ ಹೆಚ್ಚಾಗಲಿಲ್ಲ
Published on
ಮಡಿಕೇರಿ
ಈಗಾಗಲೇ ಮುಂಗಾರು ಮಳೆ ಕೊರತೆಯಿಂದ ಆತಂಕದಲ್ಲಿ ಇರುವ ರೈತರು ಹಿಂಗಾರು ಮಳೆ ಬಗ್ಗೆ ಆಶಾಭಾವನೆ ಇಟ್ಟುಕೊಂಡಿದ್ದರು. ಆದರೆ ಅಕ್ಟೋಬರ್, ನವೆಂಬರ್, ಡಿಸೆಂಬರ್‌ನಲ್ಲೂ ಇದೇ ಪರಿಸ್ಥಿತಿ ಮುಂದುವರಿಯುವ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಇದಕ್ಕೆ ಎಲ್ ನಿನೋ ಪರಿಣಾಮ ಒಂದು ಕಾರಣವಾದರೆ ಭಾರತದ ಸುತ್ತಮುತ್ತಲು ಮತ್ತು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಇರುವ ಜ್ವಾಲಾಮುಖಿಗಳ ಚಟುವಟಿಕೆಗಳು ತುಂಬಾ ಇಳಿಮುಖವಾಗಿರುವುದರಿಂದಲೂ ಮಳೆಯ ಕೊರತೆ ಕಾಡಲಿದೆ ಎನ್ನುತಾರೆ ಭೂ ವಿಜ್ಞಾನಿಗಳು.
ಜೂನ್ ಮುಗಿಯುತ್ತಾ ಬಂದರೂ ಮುಂಗಾರು ಮಳೆಯಲ್ಲಿ ಚೇತರಿಕೆ ಕಂಡುಬರುತ್ತಿಲ್ಲ. ಇದರಿಂದಾಗಿ ಮಳೆಯನ್ನೇ ನಂಬಿರುವ ಕೃಷಿಕರು ಆತಂಕದಲ್ಲಿ ದಿನದೂಡುತ್ತಿದ್ದಾರೆ. ಮಳೆ ಕೈ ಕೊಟ್ಟರೆ ಕೃಷಿಯ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಇದನ್ನೇ ನಂಬಿಕೊAಡಿರುವ ಇತರ ಉದ್ಯಮಗಳ ಮೇಲೂ ದುಷ್ಪರಿಣಾಮ ಬೀರಲಿದ್ದು, ಆರ್ಥಿಕತೆಯೇ ಬುಡಮೇಲಾಗುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಈಗಾಲೇ ಮುಂಗಾರಿನ ಒಂದು ತಿಂಗಳು ಮುಗಿದು ಹೋಗಿದ್ದು ಉಳಿದ ಅವಧಿಯಲ್ಲಾದರೂ ಮಳೆ ಚುರುಕಾಗಬಹುದು ಎನ್ನುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಒಂದು ವೇಳೆ ಮುಂಗಾರು ಮಳೆ ಉತ್ತಮವಾಗಿ ಸುರಿಯದಿದ್ದರೆ ಹಿಂಗಾರು ಮಳೆಯಾದರೂ ಕೈ ಹಿಡಿಯಬಹುದು ಎನ್ನುವ ನಂಬಿಕೆಯನ್ನು ಅನ್ನದಾತರು ಇಟ್ಟುಕೊಂಡಿದ್ದಾರೆ.
ರೈತರ ನಿರೀಕ್ಷೆ ಏನೇ ಇದ್ದರೂ ಎಲ್ ನಿನೋ ಪರಿಣಾಮದಿಂದ ಈ ವರ್ಷ ಮುಂಗಾರು ಸಾಮಾನ್ಯದಂತೆ ಇರುವುದಿಲ್ಲ ಎಂದು ಈಗಾಗಲೇ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಆದರೆ ಹಿಂಗಾರು ಮಳೆ ಬಗ್ಗೆ ಸ್ವಲ್ಪ ಆಶಾಭಾವನೆ ಇಟ್ಟುಕೊಳ್ಳಲಾಗಿದೆ. ಮತ್ತೊಂದು ಕಡೆ ಭೂ ವಿಜ್ಞಾನಿಗಳು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದು, ಹಿಂಗಾರು ಮಳೆ ಕೂಡ ಕೊರತೆಯಿಂದ ಕೂಡಿರುತ್ತದೆ ಎನ್ನುತ್ತಿದ್ದಾರೆ. ಜಿಯೋಮೀಟಿಯೋರೋಲಜಿ ಅಧ್ಯಯನದ ಮೂಲಕ ಈ ವಿಷಯ ಸ್ಪಷ್ಟವಾಗುತ್ತಿದೆ ಎಂದು ಹೇಳುವ ಭೂ ವಿಜ್ಞಾನಿ ಬೆಂಗಳೂರಿನ ಡಾ. ಹೆಚ್.ಎಸ್.ಎಂ. ಪ್ರಕಾಶ್ ಮೋಡಗಳು ಸೃಷ್ಟಿಯಾಗುವುದಕ್ಕೆ ಪೂರಕವಾದ ಪರಿಸ್ಥಿತಿಯೇ ಕಂಡುಬರುತ್ತಿಲ್ಲ ಎನ್ನುತ್ತಾರೆ.
ಕೊಡಗಿನ ಮಳೆ ಮತ್ತು ಇಲ್ಲಿಯ ಪರಿಸರ ಬಗ್ಗೆ ವಿಶೇಷ ಅಧ್ಯಯನ ನಡೆಸುತ್ತಿರುವ ಭೂ ವಿಜ್ಞಾನಿ ಡಾ. ಹೆಚ್.ಎಸ್.ಎಂ. ಪ್ರಕಾಶ್ ಜಿಯೋಮೀಟಿಯೋರೋಲಜಿ ವಿಧಾನದ ಮೂಲಕ ಮಳೆಯ ಸ್ಪಷ್ಟ ಮಾಹಿತಿ ನೀಡುತ್ತಾ ಬಂದಿದ್ದಾರೆ. ಸಕ್ರಿಯ ಭೂಕಂಪನ ಮತ್ತು ಜ್ವಾಲಾಮುಖಿಗಳು ಮಳೆಯ ತೀವ್ರತೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಜಿಯೋಮೀಟಿಯೋರೋಲಜಿ ವಿಜ್ಞಾನ ಸಿದ್ಧಾಂತ ಮೂಲಕ ಸಮರ್ಥಿಸಿಕೊಳ್ಳುತ್ತಾರೆ. 2017, 2018 ಹಾಗೂ 2019ರ ಕೊಡಗು, ಕೇರಳದಲ್ಲಿ ಮಹಾಮಳೆ ಮತ್ತು ಪ್ರಾಕೃತಿಕ ವಿಕೋಪ ಸಂದರ್ಭ ಭಾರತಕ್ಕೆ ನಿಕಟವಾಗಿರುವ ಜ್ವಾಲಾಮುಖಿ ವಲಯಗಳು ದೊಡ್ಡ ಪ್ರಮಾಣದಲ್ಲಿ ಸಕ್ರಿಯವಾಗಿದ್ದವು. 2021, 22, 23ರಲ್ಲಿ ನಮಗೆ ಸಮೀಪದಲ್ಲಿ ಇಂತಹ ಸಕ್ರಿಯ ಜ್ವಾಲಾಮುಖಿಗಳು ಇಲ್ಲದ ಕಾರಣ ಸಾಮಾನ್ಯ ಮಳೆ ಬಂದರೂ ಅನಾಹುತಕಾರಿ ಆಗಿರಲಿಲ್ಲ. 2024, 25ರಲ್ಲೂ ಇದೇ ಪರಿಸ್ಥಿತಿ ಇತ್ತು.
ಈ ವರ್ಷವೂ 2026ರ ಮುಂಗಾರು ಮಳೆಯ ಕೊರತೆ ಸ್ಪಷ್ಟವಾಗಿ ಕಾಣುತ್ತಿದೆ. ಭಾರತದ ಸುತ್ತಮುತ್ತಲು ಹಾಗೂ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಇರುವ ಆವಿಯ ಮೂಲಗಳಾದ ಜ್ವಾಲಾಮುಖಿಗಳ ಚಟುವಟಿಗಳು ತುಂಬಾ ಇಳಿಮುಖವಾಗಿರುವುದೇ ಇದಕ್ಕೆ ಕಾರಣ ಎನ್ನುವುದು ಜಿಯೋಮೀಟಿಯೋರೋಲಜಿ ಅಧ್ಯಯನದ ಮೂಲಕ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳುಗಳ ಚಟುವಟಿಕೆಗಳ ಮುನ್ಸೂಚನಾ ವರದಿಗಳ ಅಧ್ಯಯನದಿಂದ 2026ರ ಹಿಂಗಾರು ಅವಧಿಯಾದ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಿಂದಾಗಿ ಮತ್ತಷ್ಟು ಮಳೆಯ ಕೊರತೆ ಉಂಟಾಗುವ ಸಾಧ್ಯತೆ ಇದೆ. ಎಲ್ ನಿನೋ ಪರಿಸ್ಥಿತಿಗೂ ಸಹ ಸಮುದ್ರದೊಳಗಿನ ಭೀಕರ ಜ್ವಾಲಾಮುಖಿಗಳು ಕಾರಣ ಎನ್ನುವುದೂ ಗಮನಾರ್ಹ ಎನ್ನುತ್ತಾರೆ ಡಾ. ಹೆಚ್.ಎಸ್.ಎಂ. ಪ್ರಕಾಶ್.
ಜಿಯೋಮೀಟಿಯೋರೋಲಜಿ ಅಧ್ಯಯನದ ಮಾಹಿತಿಯನ್ನು ಹವಾಮಾನ ತಜ್ಞರು ಸಂಪೂರ್ಣ ಒಪ್ಪುವುದಿಲ್ಲ. ಎಲ್ ನಿನೋ ಪರಿಣಾಮದಿಂದ ಮಳೆ ಏರುಪೇರಾದರೂ ಅದರ ತೀವ್ರತೆ ಮತ್ತು ಅವಧಿಯಲ್ಲಿ ಹೆಚ್ಚು ಕಡಿಮೆ ಆಗಬಹುದು. ನೈಋತ್ಯ ಮಾನ್ಸೂನ್ ಮಳೆ ಕಡಿಮೆಯಾಗುವ ಮುನ್ಸೂಚನೆ ಇದ್ದರೂ ಮುಂದಿನ ದಿನಗಳಲ್ಲಿ ಮಳೆ ನಿರೀಕ್ಷೆ ಮಾಡಬಹುದು ಎನ್ನುತಾರೆ ಅವರು.
ಈ ಹಿಂದಿನ ವರ್ಷಗಳಲ್ಲಿ ಇಷ್ಟೊತ್ತಿಗಾಗಲೇ ಕೊಡಗಿನಲ್ಲಿ ಮುಂಗಾರು ಅಬ್ಬರ ಜೋರಾಗಿ ಇರುತ್ತಿತ್ತು. ಆದರೆ ಈ ವರ್ಷ ಕೆಲವು ಕಡೆಗಳಲ್ಲಿ ಮಾತ್ರ ಸಾಧಾರಣ ಮಳೆ ಆಗಿದೆ. ಉಳಿದೆಡೆಗಳಲ್ಲಿ ಆಗೊಮ್ಮೆ, ಈಗೊಮ್ಮೆ ತುಂತುರು ಮಳೆ, ಮೋಡ ಕವಿದ ವಾತಾವರಣ ಇದ್ದರೆ ಮೈಸೂರು, ಹಾಸನ ಗಡಿಭಾಗದ ಊರುಗಳಲ್ಲಿ ಬಿಸಿಲು ಮುಂದುವರಿದಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.
ಜಿಯೋಮೀಟಿಯೋರೋಲಜಿ ಎನ್ನುವುದು ಭೂವಿಜ್ಞಾನ ಮತ್ತು ಹವಾಮಾನ ಶಾಸ್ತç ಎರಡನ್ನೂ ಒಟ್ಟುಗೂಡಿಸುವ ಒಂದು ಅಂತರಶಿಸ್ತೀಯ ಅಧ್ಯಯನ ಕ್ಷೇತ್ರ. ಭೂಮಿಯ ಮೇಲ್ಮೆöÊನ ನೆಲ, ಬಂಡೆಗಳು, ಮಣ್ಣು ಮತ್ತು ವಾತಾವರಣದ ಹವಾಮಾನ, ಮಳೆ, ಗಾಳಿ ನಡುವಿನ ಪರಸ್ಪರ ಕ್ರಿಯೆಗಳನ್ನು ಇದು ಅಧ್ಯಯನ ಮಾಡುತ್ತದೆ. ಹವಾಮಾನ ಬದಲಾವಣೆಗಳು ಭೂಮಿಯ ಮೇಲ್ಮೈಯನ್ನು ಹೇಗೆ ಬದಲಾಯಿಸುತ್ತವೆ ಅಂದರೆ ಭಾರೀ ಮಳೆಯಿಂದಾಗಿ ಭೂಕುಸಿತವಾಗುವುದು ಅಥವಾ ಮಣ್ಣಿನ ಸವೆತ ಮತ್ತು ಭೂಮಿಯ ಭೂಪ್ರದೇಶಗಳಾದ ಪರ್ವತಗಳು, ಕಣಿವೆಗಳು ಸ್ಥಳೀಯ ಹವಾಮಾನವನ್ನು ಹೇಗೆ ನಿರ್ಧರಿಸುತ್ತವೆ ಎಂಬುದನ್ನು ಇದು ವಿವರಿಸುತ್ತದೆ. ಭೂಕುಸಿತ, ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪಗಳ ಮುನ್ಸೂಚನೆ, ಕೃಷಿ ಯೋಜನೆ, ಜಲಸಂಪನ್ಮೂಲ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಜಿಯೋಮೀಟಿಯೋರೋಲಜಿ ಪ್ರಮುಖ ಪಾತ್ರ ವಹಿಸುತ್ತದೆ. ಪಶ್ಚಿಮ ಘಟ್ಟಗಳಂತಹ ಸೂಕ್ಷ್ಮ ಪರಿಸರ ವಲಯಗಳಲ್ಲಿ ತಾಪಮಾನ, ಮಳೆ ಮತ್ತು ಭೂಪ್ರಕೃತಿಯ ನಡುವಿನ ಸಂಬAಧವನ್ನು ಅರ್ಥಮಾಡಿಕೊಳ್ಳಲು ಈ ಅಧ್ಯಯನವು ತುಂಬಾ ಸಹಕಾರಿಯಾಗಿದೆ. ಬೆಂಗಳೂರಿನ ಭೂ ವಿಜ್ಞಾನಿ ಡಾ. ಹೆಚ್.ಎಸ್.ಎಂ. ಪ್ರಕಾಶ್ ಇದೇ ಜಿಯೋಮೀಟಿಯೋರೋಲಜಿ ವಿಧಾನದ ಮೂಲಕ ಕಳೆದ 10 ವರ್ಷಗಳಿಂದ ಮಳೆಯ ಸ್ಥಿತಿ ಗತಿ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
"

ಈಗಾಗಲೇ ಕಂಡು ಬಂದಿರುವ ಹಾಗೆ ಪ್ರಸ್ತುತ 2026ರ ಮುಂಗಾರು ಮಳೆಯ ಕೊರತೆ ಸ್ಪಷ್ಟವಾಗಿ ಕಾಣುತ್ತಿದೆ. ಇದಕ್ಕೆ ಜಿಯೋಮೀಟಿಯೋರೋಲಜಿ ಅಧ್ಯಯನದ ಮೂಲಕ ಕಂಡು ಬರುವ ಅಂಶವೆAದರೆ ಭಾರತದ ಸುತ್ತಮುತ್ತಲು ಹಾಗೂ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಇರುವ ಆವಿಯ ಮೂಲಗಳಾದ ಜ್ವಾಲಾಮುಖಿಗಳ ಚಟುವಟಿಕೆಗಳು ತುಂಬಾ ಇಳಿಮುಖವಾಗಿದೆ. ಹಿಂಗಾರು ಅವಧಿಯಾದ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ

— ಡಾ. ಹೆಚ್.ಎಸ್.ಎಂ. ಪ್ರಕಾಶ್, ಭೂ ವಿಜ್ಞಾನಿ, ಬೆಂಗಳೂರು

"

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಈ ವಾರ ಅತೀ ಕಡಿಮೆ ಮಳೆ ಬರುವ ಸಾಧ್ಯತೆ ಇದೆ. ಎಲ್ ನಿನೋ ಪರಿಣಾಮದಿಂದ ಮಳೆ ಏರುಪೇರಾಗುತ್ತಿದೆ. ಇದರಲ್ಲಿ ವ್ಯತ್ಯಾಸ ಕಂಡು ಬರಲೂಬಹುದು. ಎಲ್ ನಿನೋ ತೀವ್ರತೆ ಮತ್ತು ಅದರ ಅವಧಿಯೂ ಹೆಚ್ಚು ಕಡಿಮೆ ಆಗಬಹುದು. ಸದ್ಯಕ್ಕೆ ನೈಋತ್ಯ ಮಾನ್ಸೂನ್ ಮಳೆ ಕಡಿಮೆಯಾಗಲಿದೆ ಎಂಬ ಮುನ್ಸೂಚನೆ ಇದೆಯಾದರೂ, ಆರಂಭದಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಮಳೆ ನಿರೀಕ್ಷೆ ಮಾಡಬಹುದು.

— ಡಾ. ಜಿ.ವಿ. ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ, ಮೈಸೂರು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net