ಬಿಡದಿ ಹೋರಾಟಕ್ಕೆ ಹೊರಟಿದ್ದ ರೈತರು ಖಾಕಿ ವಶಕ್ಕೆ

ಬಿಡದಿ ಹೋರಾಟಕ್ಕೆ ಹೊರಟಿದ್ದ ತಾಲೂಕಿನ ರೈತ ಹೋರಾಟಗಾರರನ್ನು ವಶಕ್ಕೆ ಪಡೆದು ಕೊಡ್ಲಿಪೇಟೆ ಠಾಣೆಯಲ್ಲಿ ಇರಿಸಲಾಗಿತ್ತು.
ಬಿಡದಿ ಹೋರಾಟಕ್ಕೆ ಹೊರಟಿದ್ದ ತಾಲೂಕಿನ ರೈತ ಹೋರಾಟಗಾರರನ್ನು ವಶಕ್ಕೆ ಪಡೆದು ಕೊಡ್ಲಿಪೇಟೆ ಠಾಣೆಯಲ್ಲಿ ಇರಿಸಲಾಗಿತ್ತು.
Published on
ಶನಿವಾರಸಂತೆ: ಬಿಡದಿಯ ರೈತರ ಹೋರಾಟಕ್ಕೆ ಬೆಂಬಲ ನೀಡಲು ಹೊರಟಿದ್ದ ಸೋಮವಾರಪೇಟೆ ತಾಲೂಕಿನ ರೈತ ಸಂಘದ ಮುಖಂಡರನ್ನು ಶುಕ್ರವಾರ ಪೊಲೀಸರು ತಡೆದು ವಶಕ್ಕೆ ಪಡೆದರು. ರೈತ ಸಂಘದ ಮುಖಂಡರಾದ ಹೆಗ್ಗಳ ಹೂವಯ್ಯ, ಪ್ರಸನ್ನ, ರಮೇಶ್, ದಿನೇಶ್, ಜಿತೇಂದ್ರ, ಮೊಗಪ್ಪ, ಲೋಕೇಶ್, ಲಕ್ಷ್ಮಣ, ನಾಗರಾಜ್, ಅಜಿತ್, ಅಶೋಕ್ ಇತರರನ್ನು ಪೊಲೀಸರು ವಶಕ್ಕೆ ಪಡೆದು ಕೊಡ್ಲಿಪೇಟೆ ಉಪ ಠಾಣೆಗೆ ಕರೆತಂದಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಕೊಡ್ಲಿಪೇಟೆ ಮತ್ತು ಸುತ್ತಮುತ್ತಲಿನ ರೈತರು ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಬಿಡದಿಯಲ್ಲಿ ರೈತರ ಆಸ್ತಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಸಿಕೊಳ್ಳುವಂತೆ ಕೊಡಗಿನಲ್ಲೂ ರೈತರ ಆಸ್ತಿಯನ್ನು ಕಬಳಿಸಲು ಹೊರಟಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನೆಗೆ ಮಣಿದ ಶನಿವಾರಸಂತೆ ವೃತ್ತ ನಿರೀಕ್ಷಕ ಕೃಷ್ಣರಾಜ್ ವಶಕ್ಕೆ ಪಡೆದ ಹೋರಾಟಗಾರರನ್ನು ಬಿಡುಗಡೆಗೊಳಿಸಿದರು.
ಪ್ರತಿಭಟನೆಯಲ್ಲಿ ರೈತ ಹೋರಾಟಗಾರರಾದ ಚಕ್ರವರ್ತಿ ಸುರೇಶ್, ವಕೀಲ ದೀಪಕ್, ಪ್ರಸನ್ನ, ಶನಿವಾರಸಂತೆ ಒಕ್ಕಲಿಗರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಪ್ರಮುಖರಾದ ಭಗವಾನ್, ವಿನೋದ್ ಮೂದರವಳ್ಳಿ, ಅನಂತ್ ಶನಿವಾರಸಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net