ಭತ್ತ ಖರೀದಿ ಕೇಂದ್ರಗಳತ್ತ ಇಲ್ಲ ರೈತರ ಚಿತ್ತ

ಮಡಿಕೇರಿ ತಾಲೂಕಿನಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ ಎಪಿಎಂಸಿ
ಮಡಿಕೇರಿ ತಾಲೂಕಿನಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ ಎಪಿಎಂಸಿ
Published on
ಮಡಿಕೇರಿ:
ಸರ್ಕಾರದ ಆದೇಶದಂತೆ ಕೊಡಗಿನ ಐದು ತಾಲೂಕುಗಳ ವ್ಯಾಪ್ತಿಯಲ್ಲಿ ಕೂಡ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲಾಗಿದೆ. ಆದರೆ ರೈತರಿಂದ ಇದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭತ್ತ ಮಾರಾಟಕ್ಕಾಗಿ ಇಲ್ಲಿಯ ತನಕ ಕೇವಲ ಮೂವರು ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಇವರ್ಯಾರೂ ಇಲ್ಲಿಗೆ ತಂದು ಭತ್ತ ಮಾರಾಟ ಮಾಡಿಲ್ಲ. ಭತ್ತ ಮಾರಾಟಕ್ಕೆ ಈ ತಿಂಗಳ 28ರ ತನಕ ಅವಕಾಶ ಇದೆ.
ಜಿಲ್ಲೆಯಲ್ಲಿ ಮಡಿಕೇರಿ, ಕುಶಾಲನಗರ, ಗೋಣಿಕೊಪ್ಪಲು, ಸೋಮವಾರಪೇಟೆ ಎಪಿಎಂಸಿ ಹಾಗೂ ವಿರಾಜಪೇಟೆ ಕೃಷಿ ಇಲಾಖೆ ಆವರಣದಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗಿದೆ. ಭತ್ತ ಮಾರಾಟಕ್ಕಾಗಿ ರೈತರು ಅಕ್ಟೋಬರ್ 15ರಿಂದ ಡಿಸೆಂಬರ್ 31ರ ತನಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಮೂವರು ಮಾತ್ರ ಈ ವಿಷಯದಲ್ಲಿ ಆಸಕ್ತಿ ತೋರಿಸಿದ್ದು, 103 ಕ್ವಿಂಟಾಲ್ ಭತ್ತ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.
ಭತ್ತಕ್ಕೆ ಸರ್ಕಾರ 2369 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ 2,400-2,500 ರೂ. ತನಕ ಬೆಲೆ ಕೊಟ್ಟು ವ್ಯಾಪಾರಿಗಳು ಖರೀದಿ ಮಾಡುತ್ತಿದ್ದಾರೆ. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ರೈತರು ಆಸಕ್ತಿ ತೋರಿಸದಿರಲು ಇದು ಪ್ರಮುಖ ಕಾರಣವಾಗಿದೆ. ಇನ್ನು ಇಲ್ಲಿ ಖರೀದಿ ಆದ ಭತ್ತದ ಹಣ ರೈತರ ಕೈ ಸೇರಬೇಕಾದರೆ 10-15 ದಿನ ಕಾಯಬೇಕು. ಖರೀದಿ ಕೇಂದ್ರಕ್ಕೆ ರೈತರೇ ಭತ್ತ ಸಾಗಾಟ ಮಾಡಬೇಕು. ಸರ್ಕಾರ ನಿಗದಿಪಡಿಸಿರುವ ಗುಣಮಟ್ಟದ ಭತ್ತವನ್ನೇ ತರಬೇಕು.
ಆದರೆ ಸ್ಥಳೀಯ ವ್ಯಾಪಾರಿಗಳಿಗೆ ಮಾರಾಟ ಮಾಡಿದರೆ ಈ ಸಮಸ್ಯೆಗಳು ಇರುವುದಿಲ್ಲ. ಹಾಗಾಗಿಯೇ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರದಲ್ಲಿ ಭತ್ತ ಮಾರಾಟ ಮಾಡಲು ರೈತರು ಉತ್ಸಾಹ ತೋರಿಸುತ್ತಿಲ್ಲ ಎನ್ನಲಾಗುತ್ತಿದೆ.
"

ರೈತರಿಗೆ ನ್ಯಾಯಯುತ ಬೆಲೆ ಎಂಎಸ್‌ಪಿ ಒದಗಿಸಿ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಸಲುವಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಖರೀದಿ ಮಾಡುವುದೇನೋ ಸರಿ. ಆದರೆ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲುವಿನಲ್ಲಿ ಒಂದೇ ಒಂದು ಎಪಿಎಂಸಿ ಕೇಂದ್ರ ಇದೆ. ದೂರದ ಬಿರುನಾಣಿ, ಕುಟ್ಟ ಭಾಗದಿಂದ ಬರುವ ರೈತರಿಗೆ ಕಷ್ಟವಾಗುತ್ತದೆ. ಆದ್ದರಿಂದ ಹೆಚ್ಚಿನ ರೈತರು ತಮಗೆ ಹತ್ತಿರವಾಗುವ ಖಾಸಗಿ ವ್ಯಾಪಾರಿಗಳಿಗೆ ತಾವು ಬೆಳೆದ ಭತ್ತ ಮಾರಾಟ ಮಾಡುತ್ತಾರೆ. ಹತ್ತಿರದಲ್ಲೇ ಮಾರಿದರೆ ಸಾಗಾಣಿಕೆ ಖರ್ಚು ಕಡಿಮೆಯಾಗುತ್ತದೆ.

"

ಭತ್ತ ಖರೀದಿ ಕೇಂದ್ರಗಳಿಗೆ ಭತ್ತ ಸಾಗಿಸುವುದಕ್ಕೆ ಸಾರಿಗೆ ವೆಚ್ಚ ಹೆಚ್ಚಾಗುತ್ತಿದೆ. ಕೇಂದ್ರಗಳಲ್ಲಿ ಗುಣಮಟ್ಟದ ಭತ್ತವೇ ಬೇಕು ಎನ್ನುತ್ತಾರೆ. ಭತ್ತ ಕೃಷಿಗೆ ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ಸೂಕ್ತ ಸೌಲಭ್ಯ, ಸಹಾಯ ಧನ ಇಲ್ಲದೆ ಭತ್ತ ಕೃಷಿಯನ್ನೇ ಕೈಬಿಡುತ್ತಿದ್ದಾರೆ. ಅಕಾಲಿಕ ಮಳೆಯಿಂದ ಭತ್ತದ ಗುಣಮಟ್ಟ ಕಾಯ್ದುಕೊಳ್ಳುವುದು ರೈತರಿಗೆ ಕಷ್ಟವಾಗಿದೆ. ಇಂತಹ ಸಮಸ್ಯೆಗಳು ಖರೀದಿ ಕೇಂದ್ರದಲ್ಲಿ ಕೇಳುವುದಿಲ್ಲ. ರೈತರ ಮನೆಗೆ ಬಂದು ಸೂಕ್ತ ಬೆಲೆ ಕೊಟ್ಟು ಖರೀದಿ ಮಾಡುವಂತಾಗಬೇಕು.

"

ಭತ್ತ ಖರೀದಿ ಕೇಂದ್ರ ತೆರೆದಿದೆ ಅಷ್ಟೇ. ಅಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆ ಇದೆ. ಹಳೆಯ ಬೆಲೆಯನ್ನೇ ನಿಗದಿ ಮಾಡಿದ್ದಾರೆ. ಇನ್ನು ಅಲ್ಲಿಗೆ ನಾವು ಯಾವಾಗ ಬೇಕಾದರೂ ತಂದು ಮಾರಾಟ ಮಾಡಲು ಸಾಧ್ಯವಿಲ್ಲ. ಕೇಂದ್ರದವರು ತಿಳಿಸಿದ ದಿನ ತೆಗೆದುಕೊಂಡು ಹೋಗಬೇಕು. ಹೋದರೂ ಸಹ ಬೆಲೆ ಕಡಿಮೆ ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇನ್ನಾದರೂ ಬೆಂಬಲ ಬೆಲೆ ಹೆಚ್ಚು ಮಾಡಲಿ. ಹಾಗೆಯೇ ರೈತರ ಅನುಕೂಲಕ್ಕೆ ತಕ್ಕಂತೆ ಖರೀದಿ ಕೇಂದ್ರ ತೆರೆಯಲಿ.

"

ಇತ್ತೀಚಿನ ದಿನಗಳಲ್ಲಿ ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದ್ದು. ಕೆಲವು ಕಡೆಗಳಲ್ಲಿ ರೈತರು ಭತ್ತವನ್ನು ನೇರವಾಗಿ ಮಾರುತ್ತಾರೆ. ಇನ್ನು ಕೆಲವರು ಮಿಲ್‌ಗಳಲ್ಲಿ ಭತ್ತವನ್ನು ಇರಿಸಿ ಗ್ರಾಹಕರಿಗೆ ಅವಶ್ಯ ಇದ್ದಾಗ ಅಕ್ಕಿ ಮಾಡಿ ಮಾರಾಟ ನಡೆಸುವುದರಿಂದ ಹೆಚ್ಚಿನ ಲಾಭ ಪಡೆಯುತ್ತಾರೆ. ಆದರಿಂದ ಬೆಂಬಲ ಬೆಲೆ ಭತ್ತ ಖರೀದಿ ಕೇಂದ್ರಗಳತ್ತ ರೈತರು ಹೆಚ್ಚು ಗಮನ ಹರಿಸುತ್ತಿಲ್ಲ.

"

ಮೈಸೂರಿನಲ್ಲಿ 43 ಸಾವಿರ ಕ್ವಿಂಟಾಲ್ ಹಾಗೂ ಮಂಡ್ಯದಲ್ಲಿ 35 ಸಾವಿರ ಕ್ವಿಂಟಾಲ್ ಭತ್ತದ ಮಾರಾಟಕ್ಕೆ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಕೊಡಗಿನಲ್ಲಿ ಕೇವಲ ಮೂವರು ರೈತರು ಮಡಿಕೇರಿ ಕೇಂದ್ರದಲ್ಲಿ ಮಾತ್ರ 103 ಕ್ವಿಂಟಾಲ್ ಭತ್ತದ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಕೊಡಗಿನಲ್ಲಿ ಸಣ್ಣ ಭತ್ತ ಹೆಚ್ಚಾಗಿ ಬೆಳೆಯುತ್ತಾರೆ. ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ದರ ಇದೆ. ಇನ್ನು ಈ ಭಾಗದಲ್ಲಿ ಮನೆ ಬಳಕೆಗೆ ಇಟ್ಟುಕೊಂಡು ಹೆಚ್ಚುವರಿ ಭತ್ತ ಮಾತ್ರ ಮಾರಾಟ ಮಾಡುತ್ತಾರೆ. ಮಾರಾಟ ಮಾಡುವುದಕ್ಕಾಗಿಯೇ ಭತ್ತ ಬೆಳೆಯುವುದು ಕಡಿಮೆ. ಈ ಕಾರಣದಿಂದಲೂ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಪ್ರತಿಕ್ರಿಯೆ ಕಡಿಮೆ ಆಗಿರಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net