ಸೈನಿಕ ಶಾಲೆ ಆಡಳಿತಾಧಿಕಾರಿಗೆ ಬೀಳ್ಕೊಡುಗೆ

ಕೊಡಗು ಸೈನಿಕ ಶಾಲೆ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ಆಗ್ರಾ ವಾಯುಪಡೆ ನಿಲ್ದಾಣಕ್ಕೆ ವರ್ಗಾವಣೆಗೊಂಡಿರುವ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಅವರನ್ನು ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಸ್ಮರಣಿಕೆ ನೀಡಿ ಬೀಳ್ಕೊಟ್ಟರು.
ಕೊಡಗು ಸೈನಿಕ ಶಾಲೆ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ಆಗ್ರಾ ವಾಯುಪಡೆ ನಿಲ್ದಾಣಕ್ಕೆ ವರ್ಗಾವಣೆಗೊಂಡಿರುವ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಅವರನ್ನು ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಸ್ಮರಣಿಕೆ ನೀಡಿ ಬೀಳ್ಕೊಟ್ಟರು.
Published on
ಕುಶಾಲನಗರ:
ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ಆಗ್ರಾ ವಾಯುಪಡೆ ನಿಲ್ದಾಣಕ್ಕೆ ವರ್ಗಾವಣೆಗೊಂಡಿರುವ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಅವರನ್ನು ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಈ ಸಂದರ್ಭ ಶೈಕ್ಷಣಿಕ ಸಿಬ್ಬಂದಿ ಪರವಾಗಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಮಣಿಕಂಠನ್ ಮತ್ತು ಆಡಳಿತ ಮಂಡಳಿಯ ಪರವಾಗಿ ಕಚೇರಿ ಅಧೀಕ್ಷಕ ರಿತಂ ಗಂಗೂಲಿ ಮಾತನಾಡಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಮಾತನಾಡಿ ಪ್ರಕಾಶ್ ರಾವ್ ಅವರ ವೃತ್ತಿಪರತೆಯನ್ನು ಸ್ಮರಿಸಿದರು.
ನಂತರ ಮಾತನಾಡಿದ ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಸಂಸ್ಥೆಯನ್ನು ರೂಪಿಸುವಲ್ಲಿ ಸಾಂಘಿಕ ಪ್ರಯತ್ನ ಮತ್ತು ಸಮನ್ವಯದ ಮಹತ್ವವನ್ನು ಒತ್ತಿ ಹೇಳಿದರು. ಯಾವಾಗಲೂ ಕುತೂಹಲಭರಿತರಾಗಿರಿ ಹಾಗೆಯೇ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಬೇಡಿ. ಸಾಧನೆಗೆ ಆಕಾಶವೇ ಗಡಿ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ ಸಂಸ್ಥೆಯ ರಚನೆ ಮೊದಲೇ ಇತ್ತಾದರೂ, ಅದಕ್ಕೆ ಜೀವ ತುಂಬಿದವರು ವಿಂಗ್ ಕಮಾಂಡರ್ ಪ್ರಕಾಶ್ ರಾವ್. ಯುಪಿಎಸ್‌ಸಿ ಆಕಾಂಕ್ಷಿಗಳಿಗಾಗಿ ನಿರ್ಮಿಸಲಾದ ಪ್ರಾಜೆಕ್ಟ್ ಶಿಖರ್ ಸೌಲಭ್ಯ ನಿರ್ಗಮಿತ ಅಧಿಕಾರಿಯ ಅವಧಿಯಲ್ಲಿ ಪೂರ್ಣಗೊಂಡಿತು ಎಂದರು. ನಂತರ ಸ್ಮರಣಿಕೆ ನೀಡಿ ಗೌರವಿಸಿದರು.
ದಿವ್ಯಾ ಸಿಂಗ್, ಶಾಲಿನಿ ರಾವ್, ಹಿರಿಯ ಶಿಕ್ಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ, ಎನ್‌ಸಿಸಿ, ಪಿಐ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭ ಇದ್ದರು.
ಇದೇ ವೇಳೆ ಪ್ರದರ್ಶಿಸಲಾದ ಮಯೂರ ನರ್ತನ, ಸಾಂಪ್ರದಾಯಿಕ ಚಂಡೆವಾದನವಾದ 'ಚಂಡೆಮದ್ದಳೆ' ಪ್ರದರ್ಶನಗಳು ಗಮನಸೆಳೆದವು. ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಅವರ ಅಧಿಕಾರಾವಧಿಯ ಸ್ಮರಣೀಯ ಕ್ಷಣಗಳು ಮತ್ತು ಶಾಲೆಯ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳನ್ನು ಬಿಂಬಿಸುವ ವೀಡಿಯೊ ತುಣುಕುಗಳನ್ನು ಪ್ರದರ್ಶಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net