ಯುವಜನಾಂಗಕ್ಕೆ ರಕ್ತದಾನದ ಮಹತ್ವ ತಿಳಿಸಿ

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ತಹಸೀಲ್ದಾರ್ ಕೃಷ್ಣಮೂರ್ತಿ ಚಾಲನೆ ನೀಡಿದರು. ಉದಯ್, ಕರುಂಬಯ್ಯ, ಜಮೀರ್ ಇದ್ದರು.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ತಹಸೀಲ್ದಾರ್ ಕೃಷ್ಣಮೂರ್ತಿ ಚಾಲನೆ ನೀಡಿದರು. ಉದಯ್, ಕರುಂಬಯ್ಯ, ಜಮೀರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಸಲಹೆ
  • ಜಾಗೃತಿ ಶಿಬಿರ

ಸೋಮವಾರಪೇಟೆ:

ಬದಲಾದ ಜೀವನಶೈಲಿಯಿಂದ ಹಾದಿ ತಪ್ಪುತ್ತಿರುವ ಯುವಜನಾಂಗಕ್ಕೆ ರಕ್ತದಾನದ ಮಹತ್ವ ಹಾಗೂ ಆರೋಗ್ಯದ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ತಥಾಸ್ತು ಸಾತ್ವಿಕ ಸಂಸ್ಥೆ, ಅಬಕಾರಿ ಇಲಾಖೆ ಹಾಗೂ ಮೈಸೂರು ಕುವೆಂಪು ನಗರದ ಅಬಕಾರಿ ವಿಚಕ್ಷಣಾದಳದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಮತ್ತು ಪಾರ್ಶ್ವವಾಯು ಕುರಿತು ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ರಕ್ತದಾನದ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಜನರಲ್ಲಿ ನಿರೀಕ್ಷಿತ ಮಟ್ಟದ ಅರಿವು ಮೂಡಿಲ್ಲ. ಆರೋಗ್ಯವಂತರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಅಪಾಯದಲ್ಲಿರುವವರ ಜೀವ ಉಳಿಸಲು ಸಹಕರಿಸಬೇಕು ಎಂದರು.
ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಕಿರಣ್ ಮಾತನಾಡಿ, ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಯುವಜನರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳು ಹೆಚ್ಚಾಗುತ್ತಿವೆ. ಒತ್ತಡದ ಜೀವನ, ನಿದ್ರೆಯ ಕೊರತೆ, ಫಾಸ್ಟ್‌ಫುಡ್ ಹಾಗೂ ಜಂಕ್‌ಫುಡ್ ಸೇವನೆ ಮತ್ತು ವ್ಯಾಯಾಮದ ಕೊರತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಯುವಜನರು ಸೊಪ್ಪು, ತರಕಾರಿ ಸೇರಿದಂತೆ ಪೌಷ್ಟಿಕ ಆಹಾರ ಸೇವಿಸಿ, ನಿಯಮಿತವಾಗಿ ವ್ಯಾಯಾಮ ಅಥವಾ ವಾಕಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾದಕವಸ್ತುಗಳ ವ್ಯಸನವೂ ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಮೀರ್ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ಹಲವು ಜೀವಗಳು ಅಪಾಯಕ್ಕೆ ಸಿಲುಕುತ್ತವೆ. ಅಪಘಾತ ಹಾಗೂ ಶಸ್ತ್ರ ಚಿಕಿತ್ಸೆ ಸಂದರ್ಭಗಳಲ್ಲಿ ಅಗತ್ಯ ರಕ್ತದಾಸ್ತಾನು ಇರಬೇಕು. ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವ ಉಳಿಸಲು ಕೈಜೋಡಿಸಬೇಕು ಎಂದರು.
ತಥಾಸ್ತು ಸಂಸ್ಥೆಯ ಅಧ್ಯಕ್ಷ ಉದಯ್ ಅಧ್ಯಕ್ಷತೆ ವಹಿಸಿದ್ದರು. ಅಬಕಾರಿ ನಿರೀಕ್ಷಕ ಲೋಕೇಶ್ ಸುವರ್ಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಜಿಲ್ಲಾ ರಕ್ತನಿಧಿ ಘಟಕದ ವೈದ್ಯ ಡಾ.ಕರುಂಬಯ್ಯ, ಆರೋಗ್ಯ ನಿರೀಕ್ಷಕ ಜಾಸಿಂಖಾನ್, ವಿದ್ಯಾ ನರ್ಸಿಂಗ್ ಶಾಲೆಯ ಮುಖ್ಯಸ್ಥರಾದ ಆಲಿಮಾ ಸುಲೇಮಾನ್, ತಥಾಸ್ತು ಸಂಸ್ಥೆಯ ಶಿವಕುಮಾರ್, ರಮೇಶ್, ಜನಾರ್ದನ, ರಮೇಶ್ ಮರಗೋಡು ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net