ರೈಲ್ವೇ ಮಾರ್ಗಕ್ಕೆ ಪರಿಸರವಾದಿಗಳ ರೆಡ್ ಸಿಗ್ನಲ್

ಕಾಣಿಯೂರು-ಸುಳ್ಯ-ನಾಪೋಕ್ಲು-ಕುಶಾಲನಗರ ರೈಲ್ವೇ ಮಾರ್ಗದ ಬಗ್ಗೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ ಭಾಗೀರಥಿ ಮುರುಳ್ಯ ಮತ್ತು ಬ್ರಿಜೇಶ್ ಚೌಟ
ಕಾಣಿಯೂರು-ಸುಳ್ಯ-ನಾಪೋಕ್ಲು-ಕುಶಾಲನಗರ ರೈಲ್ವೇ ಮಾರ್ಗದ ಬಗ್ಗೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ ಭಾಗೀರಥಿ ಮುರುಳ್ಯ ಮತ್ತು ಬ್ರಿಜೇಶ್ ಚೌಟ
Published on
ಮಡಿಕೇರಿ:
ವಿವಿಧ ಯೋಜನೆಗಳು, ಪ್ರವಾಸೋದ್ಯಮದ ಅವೈಜ್ಞಾನಿಕ ಬೆಳವಣಿಗೆ ಮತ್ತಿತರ ಕಾರಣಗಳಿಂದ ಜಿಲ್ಲೆಯ ಪರಿಸರಕ್ಕೆ ಈಗಾಗಲೇ ಸಾಕಷ್ಟು ಹಾನಿಯಾಗಿದ್ದು, ಇದೀಗ ಹೊಸದಾಗಿ ರೈಲ್ವೇ ಯೋಜನೆಯೊಂದರ ಪ್ರಸ್ತಾಪ ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ. ಒಂದು ಕಡೆ ಪಕ್ಕದ ಕೇರಳದ ಜನಪ್ರತಿನಿಧಿಗಳು ಕೊಡಗಿನ ಮೂಲಕ ರೈಲ್ವೇ ಮತ್ತು ಹೆದ್ದಾರಿ ಸಂಪರ್ಕ ಸಾಧಿಸಲು ತೆರೆಮರೆಯ ಪ್ರಯತ್ನ ಮುಂದುವರಿಸಿದ್ದರೆ ಮತ್ತೊಂದು ಕಡೆ ನೆರೆಯ ದಕ್ಷಿಣ ಕನ್ನಡದ ಜನಪ್ರತಿನಿಧಿಗಳು ಕೂಡ ಈಗ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವುದು ಹಲವು ರೀತಿಯ ಚರ್ಚೆ ಹುಟ್ಟುಹಾಕಿದೆ.
ಕರ್ನಾಟಕದಲ್ಲಿ ಕೊಡಗು ರೈಲ್ವೆ ಸಂಪರ್ಕ ವಂಚಿತ ಜಿಲ್ಲೆ ಆಗಿರುವÀಂತೆ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಕೂಡ ರೈಲ್ವೇ ಮಾರ್ಗದಿಂದ ದೂರ ಉಳಿದಿರುವ ತಾಲೂಕು ಆಗಿದೆ. ಹಾಗಾಗಿ ಅಲ್ಲಿಯ ಜನಪ್ರತಿನಿಧಿಗಳು ಸುಳ್ಯಕ್ಕೆ ರೈಲ್ವೇ ಸಂಪರ್ಕ ಕಲ್ಪಿಸಲು ಪ್ರಯತ್ನ ಆರಂಭಿಸಿದ್ದು, ಇತ್ತೀಚೆಗಷ್ಟೇ ಈ ಸಂಬAಧ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಜಂಟಿ ಮನವಿಯೊಂದನ್ನು ಸಲ್ಲಿಸುವ ಮೂಲಕ ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.
ದಕ್ಷಿಣ ಕನ್ನಡದ ಜನಪ್ರತಿನಿಧಿಗಳು ಸುಳ್ಯಕ್ಕೆ ರೈಲ್ವೇ ಸಂಪರ್ಕದ ಬೇಡಿಕೆ ಇಡುವ ಸಂದರ್ಭ ಕೊಡಗನ್ನು ಪ್ರಸ್ತಾಪ ಮಾಡಿರುವುದು ಸ್ಥಳೀಯ ಪರಿಸರಪ್ರೇಮಿಗಳಲ್ಲಿ ಆತಂಕ ಹುಟ್ಟಿಸಿದೆ. ಪಶ್ಚಿಮ ಘಟ್ಟಗಳು ಮತ್ತು ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗಳ ಸಂಪರ್ಕಕ್ಕೆ ಸಂಬAಧಿಸಿದAತೆ ಕಾಣಿಯೂರು-ಸುಳ್ಯ-ನಾಪೋಕ್ಲು-ಕುಶಾಲನಗರ ರೈಲ್ವೇ ಮಾರ್ಗದ ಪ್ರಸ್ತಾವನೆಯನ್ನು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರ ಮುಂದೆ ಇಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕಾಗಿದ್ದರೂ ರೈಲ್ವೇ ಸಂಪರ್ಕ ವಂಚಿತವಾಗಿರುವ ಸುಳ್ಯಕ್ಕೆ ರೈಲು ಸೌಲಭ್ಯ ಕಲ್ಪಿಸುವುದು ಮತ್ತು ಕೊಡಗಿನ ಮೂಲಕ ಮೈಸೂರಿಗೆ ಪರ್ಯಾಯ ಸಂಪರ್ಕ ಸಾಧಿಸುವುದು ಈ ಪ್ರಸ್ತಾವನೆಯ ಮೂಲ ಉದ್ದೇಶವಾಗಿದೆ.
ಪ್ರಸ್ತಾವಿತ ರೈಲ್ವೇ ಕಾರಿಡಾರ್‌ನಲ್ಲಿ ಮಂಗಳೂರು-ಹಾಸನ ರೈಲು ಮಾರ್ಗದಲ್ಲಿರುವ ಯೆಲಡ್ಕ ಎಂಬಲ್ಲಿ ಜಂಕ್ಷನ್ ಮಾಡಲು ಉದ್ದೇಶಿಸಲಾಗಿದ್ದು ಕಾಣಿಯೂರು ನಿಲ್ದಾಣದಿಂದ ರೈಲ್ವೇ ಮಾರ್ಗ ಆರಂಭವಾಗುತ್ತದೆ. ಅಲ್ಲಿಂದ ಸುಳ್ಯ ಮತ್ತು ಕೊಡಗಿನ ನಾಪೋಕ್ಲು ಮೂಲಕ ಹಾದು, ಪ್ರಸ್ತಾವಿತ ಕುಶಾಲನಗರ ರೈಲು ಮಾರ್ಗವನ್ನು ತಲುಪಲು ಯೋಜನೆ ರೂಪಿಸಲಾಗಿದೆ. ಈ ಪ್ರಸ್ತಾವಿತ ರೈಲ್ವೇ ಮಾರ್ಗ ಅನುಷ್ಠಾನಕ್ಕೆ ಬಂದರೆ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಸಹಕಾರಿ ಆಗಲಿದೆ ಎನ್ನುವ ಸಮರ್ಥನೆ ಕೊಡಲಾಗುತ್ತಿದೆ.
ಕರಿಮೆಣಸು, ಕಾಫಿ, ಅಡಿಕೆ, ಕೋಕೋ, ರಬ್ಬರ್, ಸಾಂಬಾರ ಪದಾರ್ಥಗಳು ಸೇರಿದಂತೆ ಸುಳ್ಯ ಮತ್ತು ಕೊಡಗಿನ ತೋಟಗಾರಿಕಾ ಬೆಳೆಗಳ ಸಾಗಾಣಿಕೆಗೆ ಹಾಗೂ ಕರಾವಳಿ-ಕೊಡಗು ಪ್ರವಾಸೋದ್ಯಮದ ಬೆಳವಣಿಗೆಗೆ ಇದು ಪೂರಕ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹತ್ತಿರವಿರುವ ಕಾಣಿಯೂರನ್ನು ಟರ್ಮಿನಲ್ ಆಗಿ ಅಭಿವೃದ್ಧಿಪಡಿಸಿದರೆ ಮಂಗಳೂರು ರೈಲು ನಿಲ್ದಾಣಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಈ ಮಾರ್ಗದಿಂದ ಸುಳ್ಯ ತಾಲೂಕಿನ ಆರ್ಥಿಕ ಚಿತ್ರಣ ಬದಲಾಗಬಹುದು ಎನ್ನುವ ವಾದ ಈ ರೈಲ್ವೇ ಮಾರ್ಗದ ಪರ ಇರುವವರಿಂದ ಕೇಳಿಬರುತ್ತಿದೆ.
ಆದರೆ ಈ ಮಾರ್ಗದ ಪ್ರಸ್ತಾವನೆಯ ಬಗ್ಗೆ ವರದಿಗಳು ಹೊರಬೀಳುತ್ತಿದ್ದಂತೆಯೇ ಕೊಡಗು ಜಿಲ್ಲೆಯ ಪರಿಸರ ಸಂಘಟನೆಗಳು, ಸಾಮಾಜಿಕ ಜಾಲತಾಣಿಗರು ಮತ್ತು ಸ್ಥಳೀಯ ನಿವಾಸಿಗಳಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿದೆ. ಈ ರೈಲು ಮಾರ್ಗದ ಯೋಜನೆ ಅಸ್ತಿತ್ವಕ್ಕೆ ಬಂದರೆ ವಿಶ್ವದ ಅತ್ಯಂತ ಶ್ರೀಮಂತ ಜೀವವೈವಿಧ್ಯ ವಲಯವಾದ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ ಮೂಲಕ ಹಾದುಹೋಗಬೇಕಾಗುತ್ತದೆ. ಇದರಿಂದ ಲಕ್ಷಾಂತರ ಮರಗಳ ಮಾರಣಹೋಮ ಮತ್ತು ಕಾಡುಗಳ ನಾಶವಾಗುತ್ತದೆ ಎಂಬ ಆತಂಕವಿದೆ.
ಪ್ರಸ್ತಾವಿತ ಮಾರ್ಗ ವಿಶೇಷವಾಗಿ ಆನೆಗಳು ಸೇರಿದಂತೆ ವನ್ಯಜೀವಿಗಳ ನೈಸರ್ಗಿಕ ಕಾರಿಡಾರ್‌ಗಳನ್ನು ಸೀಳುವುದರಿಂದ, ಕೊಡಗಿನಲ್ಲಿ ಈಗಾಗಲೇ ತೀವ್ರ ಸ್ವರೂಪ ಪಡೆದುಕೊಂಡಿರುವ ಮಾನವ-ಆನೆ ಸಂಘರ್ಷ ಇನ್ನಷ್ಟು ಜಟಿಲವಾಗಬಹುದು. ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಸಂಭವಿಸುತ್ತಿರುವ ಸರಣಿ ಭೂಕುಸಿತಗಳಿಗೆ ಅವೈಜ್ಞಾನಿಕ ಮೂಲಸೌಕರ್ಯ ಯೋಜನೆಗಳೇ ಕಾರಣ ಎಂದು ಪರಿಸರವಾದಿಗಳು ಎಚ್ಚರಿಸಿರುವುದರಿಂದ ಹೊಸ ಯೋಜನೆ ಭವಿಷ್ಯದಲ್ಲಿ ಆತಂಕಕಾರಿ ಆಗಬಹುದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಕೊಡಗು ಕಾವೇರಿ ನದಿಯ ಪ್ರಮುಖ ಜಲಾನಯನ ಪ್ರದೇಶವಾಗಿದೆ. ಇಲ್ಲಿನ ಕಾಡುಗಳನ್ನು ನಾಶಪಡಿಸಿದರೆ ಇಡೀ ದಕ್ಷಿಣ ಭಾರತದ ನೀರಾವರಿ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎನ್ನುವ ವಾದವೂ ಇದೆ.
ಪ್ರಸ್ತಾವಿತ ಕಾಣಿಯೂರು-ಸುಳ್ಯ-ನಾಪೋಕ್ಲು-ಕುಶಾಲನಗರ ರೈಲ್ವೇ ಮಾರ್ಗವನ್ನು ಪ್ರಸ್ತಾವಿತ ಮೈಸೂರು-ಕುಶಾಲನಗರ ರೈಲ್ವೇ ಮಾರ್ಗಕ್ಕೆ ಸಂಪರ್ಕಿಸುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಆದರೆ 87 ಕಿ.ಮೀ. ಉದ್ದದ ಮೈಸೂರು-ಕುಶಾಲನಗರ ರೈಲ್ವೇ ಯೋಜನೆಯೇ ಸದ್ಯಕ್ಕೆ ನೆನೆಗುದಿಗೆ ಬಿದ್ದಿದೆ. ರೈಲ್ವೇ ಇಲಾಖೆ ನಡೆಸಿದ ಅಂತಿಮ ಸ್ಥಳ ಸಮೀಕ್ಷೆ ಪ್ರಕಾರ ಮೈಸೂರು-ಕುಶಾಲನಗರ ಮಾರ್ಗದಲ್ಲಿ ನಿರೀಕ್ಷಿತ ಪ್ರಮಾಣದ ಪ್ರಯಾಣಿಕರು ಮತ್ತು ಸರಕು ಸಾಗಣೆಯ ಸಾಮರ್ಥ್ಯ ಕಂಡುಬAದಿಲ್ಲ. ಹೂಡಿಕೆಗೆ ತಕ್ಕ ಆದಾಯ ಬಾರದೇ ಇರುವುದರಿಂದ ಮತ್ತು ರಾಜ್ಯ ಸರ್ಕಾರ ಉಚಿತವಾಗಿ ಭೂಮಿ ನೀಡಲು ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರೈಲ್ವೇ ಮಂಡಳಿ ಸದ್ಯಕ್ಕೆ ಕೈಬಿಟ್ಟಿದೆ. ಹಾಗಾಗಿ ಇದಕ್ಕೆ ಜೋಡಣೆಯಾಗಬೇಕಿರುವ ಕಾಣಿಯೂರು-ಸುಳ್ಯ-ನಾಪೋಕ್ಲು ಮಾರ್ಗ ಪರಿಸರ ಇಲಾಖೆಯ ಅನುಮತಿ ಮತ್ತು ಆರ್ಥಿಕ ಸಬಲತೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ತೀರಾ ಕಠಿಣವಾಗಿದೆ ಎನ್ನುವ ಮಾತುಗಳಿದ್ದರೂ ಕರಾವಳಿಯ ಜನಪ್ರತಿನಿಧಿಗಳ ಒತ್ತಾಯ ಮತ್ತು ಕೊಡಗಿನ ಜನರ ಪರಿಸರ ಕಾಳಜಿಯ ನಡುವೆ ಈ ವಿಷಯದಲ್ಲಿ ಚರ್ಚೆಯಂತೂ ಮುಂದುವರಿದಿದೆ.
ಮತ್ತೊಂದು ಕಡೆ ಕೇರಳ ಮತ್ತು ಕರ್ನಾಟಕದ ಗಡಿ ಭಾಗದ ಜನಪ್ರತಿನಿಧಿಗಳು ಕೊಡಗಿನ ದಕ್ಷಿಣ ಭಾಗ ಒಳಗೊಳ್ಳುವ ರೈಲು ಮಾರ್ಗವೊಂದಕ್ಕೆ ಒತ್ತಾಯಿಸುತ್ತಿದ್ದಾರೆ. ಕೇರಳದ ವೈನಾಡು, ತಲಶ್ಶೇರಿಯಿಂದ ಆರಂಭವಾಗಿ ಕೊಡಗಿನ ಗಡಿ ಭಾಗದ ಮೂಲಕ ಹೆಚ್.ಡಿ. ಕೋಟೆ ಹಾಗೂ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ಈ ರೈಲು ಮಾರ್ಗದ ಬಗ್ಗೆ ಕೇರಳ ಸರ್ಕಾರ ಮತ್ತು ಅಲ್ಲಿನ ಸಂಸದರು ಹೆಚ್ಚು ಪ್ರಸ್ತಾಪಿಸುತ್ತಿದ್ದರೂ, ಕರ್ನಾಟಕದ ಭಾಗದಲ್ಲಿ ವಿಶೇಷವಾಗಿ ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯಗಳ ಸೂಕ್ಷ್ಮ ವಲಯದ ಕಾರಣದಿಂದಾಗಿ ಈ ಯೋಜನೆಗೆ ಯಾವುದೇ ತಾಂತ್ರಿಕ ಅನುಮೋದನೆ ಸಿಕ್ಕಿಲ್ಲ. ಆದರೂ ಕೇರಳದ ಲಾಬಿ ಮುಂದುವರಿದಿದೆ. ಕೇರಳದಿಂದ ತಲಕಾವೇರಿ ಮೂಲಕ ಭಾಗಮಂಡಲ, ಮಡಿಕೇರಿಗಾಗಿ ಮೈಸೂರು ಸಂಪರ್ಕಿಸುವ ಹೆದ್ದಾರಿ ಯೋಜನೆ ಬಗ್ಗೆಯೂ ಕೇರಳದ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು. ಅಣೆಕಟ್ಟೆ, ರಸ್ತೆ, ಹೈಟೆನ್ಶನ್ ವಿದ್ಯುತ್ ಮಾರ್ಗಕ್ಕಾಗಿ ಈಗಾಗಲೇ ಸಾಕಷ್ಟು ಅರಣ್ಯ ಕಳೆದುಕೊಂಡಿರುವ ಕೊಡಗಿನಲ್ಲಿ ಇಂಥ ಕಾಮಗಾರಿಗಳು ಮತ್ತೆ ನಡೆದರೆ ಜಿಲ್ಲೆಯ ಅಸ್ತಿತ್ವಕ್ಕೆ ಧಕ್ಕೆ ಬರುವ ಬಗ್ಗೆ ಪರಿಸರ ಪ್ರಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
"

ಆರ್ಥಿಕ ದೃಷ್ಟಿಕೋನದಿಂದ ನೋಡಿದರೆ ಈ ನೂತನ ಮಾರ್ಗ ಈ ಭಾಗದ ಆರ್ಥಿಕತೆಗೆ ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ. ಸುಳ್ಯ ಮತ್ತು ಕೊಡಗು ಭಾಗದಲ್ಲಿ ಕಾಫಿ, ಸಾಂಬಾರ ಪದಾರ್ಥಗಳು, ಅಡಿಕೆ, ಕಾಳುಮೆಣಸು ಮತ್ತು ರಬ್ಬರ್ ಬೆಳೆಯಲಾಗುತ್ತದೆ. ಇವು ದೇಶೀಯ ವ್ಯಾಪಾರ ಮತ್ತು ರಫ್ತಿಗೆ ದೊಡ್ಡ ಕೊಡುಗೆ ನೀಡುತ್ತವೆ. ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಬರುವ ಸುಬ್ರಹ್ಮಣ್ಯ-ಸಕಲೇಶಪುರ ಘಾಟ್ ಮಾರ್ಗ ಈಗಾಗಲೇ ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾಪವು ಅತ್ಯಂತ ನಿರ್ಣಾಯಕವಾಗಿದೆ.

— ಭಾಗೀರಥಿ ಮುರುಳ್ಯ, ಸುಳ್ಯ ಶಾಸಕಿ


"

ಈ ಪ್ರಸ್ತಾವಿತ ಯೋಜನೆ ಕೊಡಗಿನಲ್ಲಿ ಕಾಲಿಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕೊಡಗಿನವರು ಶಾಂತಿಪ್ರಿಯರು. ಆದರೆ ಪರಿಸರ ವಿಷಯದಲ್ಲಿ ಆಗಾಗ್ಗೆ ನಮ್ಮನ್ನು ಕೆಣಕಿದರೆ ನಾವು ಸುಮ್ಮನಿರುವುದಿಲ್ಲ. ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾದರೂ ರ‍್ವಾಗಿಲ್ಲ. ಈ ಯೋಜನೆಯನ್ನು ಬಲವಾಗಿ ವಿರೋಧಿಸುತ್ತೇವೆ. ಅಮೂಲ್ಯ ಪಶ್ಚಿಮ ಘಟ್ಟದ ಬಗ್ಗೆ ಅವರಿಗೂ ಪ್ರೀತಿ ಇರಬೇಕು. ಕೊಡಗಿನವರು ಈಗಾಗಲೇ ಪರಿಸರ ನಾಶದ ಪರಿಣಾಮ ಎದುರಿಸುತ್ತಿದ್ದೇವೆ. 40ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯಲು ನೀರಿಲ್ಲ. ಮಳೆಯಲ್ಲೂ ವ್ಯತ್ಯಾಸ ಆಗುತ್ತಿದೆ.

— ಕರ್ನಲ್ ಸಿ.ಪಿ. ಮುತ್ತಣ್ಣ, ಸಂಸ್ಥಾಪಕ, ಭಾರತೀಯ ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net