ರೋಟರಿ ಕ್ಲಬ್ ವತಿಯಿಂದ ಬೇಳೂರು ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ವನ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪರಿಸರ ಉಳಿಸಿ, ಬೆಳೆಸಿ, ಹಸಿರೇ ನಮ್ಮ ಉಸಿರು ಎಂಬ ಘೋಷವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಅವುಗಳನ್ನು ಸಂರಕ್ಷಣೆ ಮಾಡುವ ಸಂಕಲ್ಪ ತೊಟ್ಟರು.
ರೋಟರಿ ಅಧ್ಯಕ್ಷ ಬಿ.ಎಸ್.ಸುಂದರ್ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಇಂದು ನೆಡುವ ಪ್ರತಿಯೊಂದು ಗಿಡವೂ ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೆರಳು ಮತ್ತು ಉತ್ತಮ ಪರಿಸರ ನೀಡುವ ಅಮೂಲ್ಯ ಆಸ್ತಿ. ಗಿಡ ನೆಡುವುದಷ್ಟೇ ಅಲ್ಲ, ಅವುಗಳನ್ನು ಬೆಳೆಸುವ ಹೊಣೆಗಾರಿಕೆ ಎಲ್ಲರೂ ವಹಿಸಬೇಕು ಎಂದರು.
ರೋಟರಿ ಕಾರ್ಯದರ್ಶಿ ಪಿ.ಕೆ.ರವಿ, ವಲಯ ಸೇನಾನಿ ಎ.ಎಸ್.ಮಲ್ಲೇಶ್, ಬೇಳೂರು ಶಾಲೆ ಎಸ್‌ಡಿಎಂಸಿ ಸದಸ್ಯರ ಉಲ್ಲಾಸ್, ಆನಂದ್ ಇದ್ದರು.