ಪರಿಸರ ನಾಶದಿಂದ ವಿಪತ್ತು ಭೀಕರ

2018ರಲ್ಲಿ ಕೊಡಗಿನಲ್ಲಿ ಸಂಭವಿದ್ದ ಭೂಕುಸಿತದ ದೃಶ್ಯ
2018ರಲ್ಲಿ ಕೊಡಗಿನಲ್ಲಿ ಸಂಭವಿದ್ದ ಭೂಕುಸಿತದ ದೃಶ್ಯ
Published on
ಮಡಿಕೇರಿ:
ಪ್ರಕೃತಿ ಮೇಲೆ ಹೆಚ್ಚಿನ ಒತ್ತಡ ಹಾಕಿದರೆ ಏನಾಗುತ್ತದೆ ಎನ್ನುವುದಕ್ಕೆ ಕೇರಳದ ವಯನಾಡು ಮತ್ತೊಮ್ಮೆ ಸಾಕ್ಷಿಯಾಗಿದೆ. ಕೊಡಗಿನ ಪಕ್ಕದ ಜಿಲ್ಲೆಯಾಗಿರುವ ವಯನಾಡು ಕೊಡಗಿನಂತೆಯೇ ಪಶ್ಚಿಮ ಘಟ್ಟಗಳ ಮಡಿಲಲ್ಲಿ ಇರುವ ಅತ್ಯಂತ ಸೂಕ್ಷ್ಮ ಹಾಗೂ ಸುಂದರ ಪ್ರದೇಶ. ಭೌಗೋಳಿಕವಾಗಿ ಮತ್ತು ಹವಾಮಾನದ ವಿಷಯದಲ್ಲಿ ಎರಡೂ ಜಿಲ್ಲೆಗಳಿಗೂ ಸಾಮ್ಯತೆಯಿದೆ. ಹಾಗಾಗಿ ಅಲ್ಲಿನ ದುರಂತ ಕೊಡಗಿಗೂ ಪಾಠ ಎನ್ನುತ್ತಾರೆ ಪರಿಸರ ಪ್ರೇಮಿಗಳು.
2018ರಲ್ಲಿ ಜಿಲ್ಲೆಯ ಹಲವೆಡೆ ಸಂಭವಿಸಿದ ಭೀಕರ ಭೂಕುಸಿತ ನಂತರ 2019 ಹಾಗೂ 2020ರಲ್ಲೂ ಮರುಕಳಿಸಿದ ಪ್ರಾಕೃತಿಕ ವಿಕೋಪದ ಅನಾಹುತಗಳು ನೆನಪಿನಂಗಳದಲ್ಲಿ ಉಳಿದಿರುವಂತೆಯೇ ಪಕ್ಕದ ಕೇರಳದ ವಯನಾಡು ಜಿಲ್ಲೆಯಲ್ಲಿ 2024ರಲ್ಲಿ ಇಂಥದ್ದೇ ದುರಂತ ಸಂಭವಿಸಿ ಪ್ರಕೃತಿಯ ಮುಂದೆ ಮಾನವ ಎಷ್ಟು ಕುಬ್ಜ ಎನ್ನುವುದನ್ನು ಸಾಬೀತುಪಡಿಸಿತ್ತು. ಇದೀಗ ಮತ್ತೆ ವಯನಾಡು ಜಿಲ್ಲೆಯಲ್ಲಿ ಪ್ರಕೃತಿ ತನ್ನ ಕೋಪ ಪ್ರದರ್ಶಿಸಿದೆ. ಅಲ್ಲಿಯ ಸಚಿವರೇ ಹೇಳಿಕೊಂಡAತೆ ಇದು ನೈಸರ್ಗಿಕ ವಿಕೋಪ ಅಲ್ಲ ಮಾನವ ನಿರ್ಮಿತ ದುರಂತವಾಗಿದ್ದು, ಪರಿಸರವಾದಿಗಳ ಎಲ್ಲಾ ವಿರೋಧ ಮೀರಿ ಸುರಂಗ ಕಾಮಗಾರಿಗೆ ಇಳಿದಿದ್ದರ ಪರಿಣಾಮವಾಗಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ರೆಸಾರ್ಟ್ಗಳು ಸೇರಿದಂತೆ ದೊಡ್ಡ ಪ್ರಮಾಣದ ನಿರ್ಮಾಣಗಳು, ರಸ್ತೆ ಕಾಮಗಾರಿಗಳು ಮತ್ತು ಸುರಂಗ ಕೊರೆಯುವಿಕೆ ಹಾಗೂ ಮರಗಳ ನಾಶವೇ ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತಕ್ಕೆ ನೇರ ಕಾರಣಗಳಾಗಿವೆ. ಈ ನಿಟ್ಟಿನಲ್ಲಿ ಹಿಮಾಲಯ ಮತ್ತು ಆಲ್ಪ್ಸ್ನಂತಹ ಪರ್ವತ ಪ್ರದೇಶಗಳು ತುಲನಾತ್ಮಕವಾಗಿ ಸ್ಥಿತಿಸ್ಥಾಪಕತ್ವವನ್ನು ಹೊಂದಿವೆ, ಆದರೆ ಪಶ್ಚಿಮ ಘಟ್ಟಗಳ ಸೂಕ್ಷ್ಮ ಬೆಟ್ಟದ ಪರಿಸರ ವ್ಯವಸ್ಥೆಯಲ್ಲಿ ಕಡಿದಾದ ಇಳಿಜಾರುಗಳ ಇಂತಹ ಅವನತಿಯು ದುರಂತಕ್ಕೆ ಮುನ್ನುಡಿಯಾಗಿದೆ ಎನ್ನುವುದು ಪರಿಸರವಾದಿಗಳ ಮಾತು.
ಕೊಡಗಿನಲ್ಲಿ ಭೂಕುಸಿತಗಳು ಸಂಭವಿಸಿದ್ದಾಗಲೂ ತಜ್ಞರು ಸಲ್ಲಿಸಿದ್ದ ವರದಿಯಲ್ಲಿ ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪದಿಂದ ಈ ಘಟನೆ ನಡೆದಿದೆ ಎನ್ನುವುದು ಪ್ರಮುಖವಾಗಿ ಪ್ರಸ್ತಾಪವಾಗಿತ್ತು. ಹೆದ್ದಾರಿ, ಗ್ರಾಮೀಣ ರಸ್ತೆಗಳನ್ನು ನಿರ್ಮಿಸುವಾಗ ಬೆಟ್ಟಗಳ ಪಾದವನ್ನು ಕಡಿದಾಗಿ ಕತ್ತರಿಸುವುದು, ವೈಜ್ಞಾನಿಕವಾಗಿ ತಡೆಗೋಡೆಗಳನ್ನು ನಿರ್ಮಿಸದೇ ಇರುವುದರಿಂದ ಬೆಟ್ಟದ ಮೇಲ್ಭಾಗದ ಮಣ್ಣಿಗೆ ಆಸರೆಯಿಲ್ಲದೆ ಭೂ ಕುಸಿತ ಸಂಭವಿಸಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಕಡಿದಾದ ಇಳಿಜಾರುಗಳಲ್ಲಿ ಜೆಸಿಬಿ ಬಳಸಿ ಭೂಮಿ ಸಮತಟ್ಟು ಮಾಡಿ, ಬೆಟ್ಟಗಳ ಸ್ಥಿರತೆಯನ್ನು ಸಂಪೂರ್ಣವಾಗಿ ಕೆಡಿಸಿರುವುದೂ ಇದಕ್ಕೆ ಕಾರಣ.
ಸಾಂಪ್ರದಾಯಿಕ ನೀರು ಹರಿಯುವ ಹಳ್ಳ-ಕೊಳ್ಳಗಳನ್ನು ಮುಚ್ಚಿ ಕಟ್ಟಡಗಳನ್ನು ಕಟ್ಟಿದ ಕಾರಣ ಮಳೆನೀರು ಸರಾಗವಾಗಿ ಹರಿದುಹೋಗಲು ಜಾಗವಿಲ್ಲದೆ, ಭೂಮಿಯೊಳಗೆ ಇಂಗಿ ಇಡೀ ಪ್ರದೇಶವೇ ದುರ್ಬಲವಾಗಿದ್ದರಿಂದಲೂ ಭೂಮಿ ಕುಸಿಯಿತು. ಆಳವಾಗಿ ಬೇರೂರುವ ಕಾಡಿನ ಮರಗಳನ್ನು ಕಡಿದು, ಆಳವಿಲ್ಲದ ಬೇರುಗಳನ್ನು ಹೊಂದಿರುವ ವಾಣಿಜ್ಯ ಬೆಳೆಗಳು ಅಥವಾ ಕಾಫಿ ತೋಟಗಳ ವಿಸ್ತರಣೆಯಿಂದ ಮಣ್ಣಿನ ಹಿಡಿತ ಸಡಿಲವಾಗಿದ್ದೂ ಕಾರಣವಾಗಿದೆ ಎನ್ನುವ ವಿವರಗಳನ್ನು ತಜ್ಞರು ನೀಡಿದ್ದರು.
ಭವಿಷ್ಯದಲ್ಲಿ ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳು ಮರುಕಳಿಸಬಾರದು ಎನ್ನುವ ಕಾರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಜ್ಞರು ಅನೇಕ ಸಲಹೆಗಳನ್ನು ನೀಡಿದ್ದರು. ಭೂಕುಸಿತಕ್ಕೆ ಅತಿ ಹೆಚ್ಚು ತುತ್ತಾಗಬಹುದಾದ ಪ್ರದೇಶಗಳನ್ನು ಮ್ಯಾಪಿಂಗ್ ಮಾಡಿ ಈ ವಲಯಗಳಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು. ಮುಂಗಾರು ಅವಧಿಯಲ್ಲಿ ಮತ್ತು ಕಡಿದಾದ ಬೆಟ್ಟದ ಇಳಿಜಾರುಗಳಲ್ಲಿ ಭಾರಿ ಯಂತ್ರೋಪಕರಣಗಳನ್ನು ಬಳಸಿ ಮಣ್ಣು ಅಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮಳೆನೀರು ಸರಾಗವಾಗಿ ಹರಿದುಹೋಗಲು ನೈಸರ್ಗಿಕ ಹಳ್ಳಗಳನ್ನು ಗುರುತಿಸಿ, ಅವುಗಳ ಮೇಲಿರುವ ಒತ್ತುವರಿಗಳನ್ನು ತೆರವುಗೊಳಿಸಬೇಕು. ಕಡಿದಾದ ಇಳಿಜಾರುಗಳಲ್ಲಿ ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಸ್ಥಳೀಯ ತಳಿಯ ಮರಗಳನ್ನು ನೆಡಬೇಕು ಮತ್ತಿತರ ಶಿಫಾರಸ್ಸುಗಳನ್ನು ಮಾಡಲಾಗಿತ್ತು.
ತಜ್ಞರ ಶಿಫಾರಸ್ಸುಗಳ ಪೈಕಿ ಕೆಲವೊಂದನ್ನು ಸರ್ಕಾರ ಅನುಸರಿಸುವ ಪ್ರಯತ್ನವೂ ನಡೆದಿತ್ತು. ಕೃಷಿ ಭೂಮಿಯ ಭೂ ಪರಿವರ್ತನೆಗೆ ಸ್ವಲ್ಪ ಸಮಯ ನಿರ್ಬಂಧ ವಿಧಿಸಲಾಗಿತ್ತು. ಆದರೆ ಅಲ್ಪಾವಧಿಯಲ್ಲೇ ಈ ನಿರ್ಬಂಧವನ್ನು ಸಡಿಲಿಸಿ ಕೆಲವೊಂದು ಷರತ್ತುಗಳನ್ನು ಹಾಕಿ ಭೂ ಪರಿವರ್ತನೆಗೆ ಅವಕಾಶ ಮಾಡಿಕೊಡಲಾಗಿತ್ತು. ನಂತರದ ದಿನಗಳಲ್ಲಿ ನಿರ್ಬಂಧ ಷರತ್ತುಗಳನ್ನೆಲ್ಲಾ ಗಾಳಿಗೆ ತೂರಿ ಸಿಕ್ಕ ಸಿಕ್ಕಲ್ಲಿ ಭೂಪರಿವರ್ತನೆಗೆ ಅನುಮತಿ ನೀಡಲಾಗುತ್ತಿದೆ. ಇದರ ಪರಿಣಾಮವಾಗಿ ಬೆಟ್ಟ ಗುಡ್ಡಗಳ ಮೇಲೆಲ್ಲಾ ಬೃಹತ್ ವಾಣಿಜ್ಯ ನಿರ್ಮಾಣಗಳು ಕಾಣಿಸಿಕೊಳ್ಳುತ್ತಿವೆ.
ಕೊಡಗಿನಲ್ಲಿ ಈ ಹಿಂದೆ ಸಂಭವಿಸಿದ ಮತ್ತು ವಯನಾಡಿನಲ್ಲಿ ಈಗ ನಡೆದಿರುವ ದುರಂತಕ್ಕೆ ಅತಿಯಾದ ನಗರೀಕರಣ ಮತ್ತು ಪರಿಸರ ಸೂಕ್ಷ್ಮ ವಲಯಗಳಲ್ಲಿ ನಡೆಯುತ್ತಿರುವ ಮಾನವ ಹಸ್ತಕ್ಷೇಪವೇ ಮುಖ್ಯ ಕಾರಣ ಎನ್ನುವುದರ ಅರಿವಿದ್ದರೂ ಪ್ರಕೃತಿ ಮೇಲಿನ ದಾಳಿ ಮುಂದುವರಿದಿದೆ. ಕೊಡಗಿನ ಕಡಿದಾದ ಬೆಟ್ಟ ಗುಡ್ಡಗಳು ಹಾಗೂ ಸೂಕ್ಷ್ಮ ಪ್ರದೇಶಗಳನ್ನು ರೆಡ್ ಜೋನ್ ಎಂದು ಗುರುತಿಸಿ, ಅಲ್ಲಿ ಯಾವುದೇ ದೊಡ್ಡ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡಬಾರದು ಎಂದಿದ್ದರೂ ಗಾಳಿಬೀಡು, ನಾಪೋಕ್ಲು ಸೇರಿದಂತೆ ಪ್ರಾಕೃತಿಕ ಸೂಕ್ಷö್ಮ ಪ್ರದೇಶಗಳಲ್ಲೇ ದೊಡ್ಡ ದೊಡ್ಡ ರೆಸಾರ್ಟ್ಗಳಿ ತಲೆ ಎತ್ತುತ್ತಿವೆ.
ವಯನಾಡಿನಂತೆಯೇ ಕೊಡಗಿನಲ್ಲೂ ಹೋಂ ಸ್ಟೇಗಳು, ರೆಸಾರ್ಟ್ಗಳು ಮತ್ತು ವಾಣಿಜ್ಯ ಕಟ್ಟಡಗಳ ಸಂಖ್ಯೆ ಮಿತಿಮೀರುತ್ತಿದೆ. ಬೆಟ್ಟಗಳನ್ನು ಕೊರೆದು ಜೆಸಿಬಿ ಬಳಸಿ ರಸ್ತೆ ನಿರ್ಮಿಸುವುದು, ರೆಸಾರ್ಟ್ಗಳಿಗಾಗಿ ಭೂಮಿ ಸಮತಟ್ಟು ಮಾಡುವ ಕಾಯಕ ಮುಂದುವರಿದಿದೆ.
ಜಿಲ್ಲೆಯ ಒಟ್ಟು ಪರಿಸರದ ಧಾರಣ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ಜಿಲ್ಲೆಗೆ ವರ್ಷಕ್ಕೆ ಎಷ್ಟು ಪ್ರವಾಸಿಗರು ಬರಬಹುದು, ಎಷ್ಟು ಹೋಂ ಸ್ಟೇಗಳಿಗೆ ಅವಕಾಶ ನೀಡಬಹುದು ಎಂಬುದಕ್ಕೆ ಒಂದು ಕಟ್ಟುನಿಟ್ಟಾದ ಮಿತಿ ಇರಬೇಕು. ತೋಟಗಳಲ್ಲಿ ಆಳವಾದ ಬೇರು ಬಿಡುವ ಮರಗಳನ್ನು ಉಳಿಸಿಕೊಳ್ಳಬೇಕು. ಮಳೆನೀರು ಸರಾಗವಾಗಿ ಹರಿದು ಹೋಗಲು ನೈಸರ್ಗಿಕ ನದಿ, ತೊರೆಗಳ ಪಾತ್ರವನ್ನು ಮುಕ್ತವಾಗಿಡಬೇಕು. ಕೃತಕವಾಗಿ ನೀರು ನಿಲ್ಲಿಸುವ ದೊಡ್ಡ ಕೆರೆಗಳನ್ನು ಬೆಟ್ಟದ ಮೇಲ್ಭಾಗದಲ್ಲಿ ನಿರ್ಮಿಸುವುದನ್ನು ನಿಷೇಧಿಸಬೇಕು ಎನ್ನುವ ಒತ್ತಾಯಗಳು ಕೇಳಿಬರುತ್ತಿವೆ.
2018ರಲ್ಲಿ ಕೊಡಗು ದೊಡ್ಡ ಮಟ್ಟದ ಭೂಕುಸಿತ ಮತ್ತು ಪ್ರವಾಹವನ್ನು ಎದುರಿಸಿದೆ. ವಯನಾಡಿನ ಭೀಕರ ದುರಂತ ಕೊಡಗಿಗೆ ಪ್ರಕೃತಿ ನೀಡುತ್ತಿರುವ ಕಡೆಯ ಎಚ್ಚರಿಕೆಯಾಗಿದೆ ಎಂದು ಪರಿಗಣಿಸಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮ ಘಟ್ಟಗಳ ನಾಶ ಮುಂದುವರಿದರೆ ಅದರ ಪರಿಣಾಮ ಎಷ್ಟು ಭೀಕರವಾಗಿರುತ್ತದೆ ಎಂಬುದಕ್ಕೆ ವಯನಾಡು ಸಾಕ್ಷಿಯಾಗಿದೆ. ಹಾಗಾಗಿ ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರಕ್ಕೆ ತಕ್ಕಂತೆ ಬದುಕಬೇಕೇ ವಿನಃ, ಬಯಲು ಸೀಮೆಯ ಮಾದರಿಯಲ್ಲಿ ಇಲ್ಲಿ ಬೃಹತ್ ಮೂಲಸೌಕರ್ಯ ಮತ್ತು ವಾಣಿಜ್ಯೀಕರಣಕ್ಕೆ ಕೈಹಾಕಿದರೆ ಪ್ರಕೃತಿ ಇಂತಹ ಭೀಕರ ಸ್ವರೂಪದಲ್ಲಿ ಪ್ರತಿಕ್ರಿಯಿಸುತ್ತಲೇ ಇರುತ್ತದೆ. ಮುನ್ನೆಚ್ಚರಿಕೆ ಮತ್ತು ಪ್ರಕೃತಿ ಸ್ನೇಹಿ ಅಭಿವೃದ್ಧಿಯೊಂದೇ ಇದಕ್ಕೆ ಶಾಶ್ವತ ಪರಿಹಾರ ಎನ್ನುತ್ತಾರೆ ಪರಿಸರ ಪ್ರೇಮಿಗಳು.
"

ಹವಾಮಾನ ವೈಪರೀತ್ಯದಿಂದಾಗಿ ಅಲ್ಪಾವಧಿಯಲ್ಲಿಯೇ ಅತಿವೃಷ್ಟಿಯಂತಹ ತೀವ್ರ ಹವಾಮಾನ ವಿದ್ಯಮಾನಗಳು ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಸಂಭವಿಸುತ್ತಿದೆ. ಹೀಗಿದ್ದರೂ ಪಶ್ಚಿಮ ಘಟ್ಟಗಳ ಸಂರಕ್ಷಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಅನೇಕ ಅಭಿವೃದ್ಧಿ ಯೋಜನೆಗಳು ಮತ್ತು ಪ್ರವಾಸಿ ಮೂಲಸೌಕರ್ಯಗಳು, ರಾಜಕಾರಣಿಗಳು ಮತ್ತು ಗುತ್ತಿಗೆದಾರರ ನಡುವಿನ ಶಾಮೀಲಿನಿಂದ ಹಾಗೂ ಅಧಿಕಾರಿಗಳ ಕುಮ್ಮಕ್ಕಿನಿಂದ ಉಂಟಾಗುವ ದುರಾಸೆಯ ಫಲ ಇದಾಗಿದೆ. ಕೊಡಗಿನಲ್ಲಿ, ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರಲ್ಲಿ ನಿರ್ದಿಷ್ಟಪಡಿಸಿದ ನಿಯಮಗಳಿಗೆ ಸಂಬAಧಿಸಿದAತೆ ಕರ್ನಾಟಕ ಉಚ್ಚ ನ್ಯಾಯಾಲಯದ ಸ್ಪಷ್ಟ ಮಧ್ಯಂತರ ಆದೇಶಗಳ ಹೊರತಾಗಿಯೂ ಜಿಲ್ಲೆಯಲ್ಲಿ ಹಲವಾರು ವಾಣಿಜ್ಯ ಜಮೀನು ಪರಿವರ್ತನೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

— ಕರ್ನಲ್ ಸಿ.ಪಿ. ಮುತ್ತಣ್ಣ, ಕಾರ್ಯದರ್ಶಿ, ಪರಿಸರ ಮತ್ತು ಆರೋಗ್ಯ ಫೌಂಡೇಷನ್


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net