ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕರುನಾಡ ಸಂಭ್ರಮ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಗಣೇಶ್ ನಿಲುವಾಗಿಲು , ಪ್ರೊ.ಡಿ.ಕೆ.ಸರಸ್ವತಿ , ಪ್ರೊ.ಕೆ.ಬಸವರಾಜು , ಡಾ.ಡಿ.ಪ್ರಭು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿರಾಜಪೇಟೆ ಉಪ ಖಜಾನೆ ಅಧೀಕ್ಷಕ ಗಣೇಶ್ ನಿಲುವಾಗಿಲು ಸಲಹೆ
ವಿರಾಜಪೇಟೆ : ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಿಂದಲೇ ಕನ್ನಡ ನಾಡು ನುಡಿಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಲೇಖಕ ಹಾಗೂ ವಿರಾಜಪೇಟೆ ಉಪ ಖಜಾನೆಯ ಅಧೀಕ್ಷಕ ಗಣೇಶ್ ನಿಲುವಾಗಿಲು ಹೇಳಿದರು.
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಕನ್ನಡ ಭಾಷಾ ವಿಭಾಗದ ವತಿಯಿಂದ ಕರುನಾಡ ಸಂಭ್ರಮ 2025ರ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಒಳ್ಳೆಯ ಪುಸ್ತಕಗಳನ್ನು ಓದಬೇಕು. ಪುಸ್ತಕಗಳನ್ನು ಓದುವುದರ ಮೂಲಕ ಇತರರಿಗೆ ಜ್ಞಾನವನ್ನು ನೀಡಬೇಕು. ಅಲ್ಲದೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ.ಡಿ.ಕೆ.ಸರಸ್ವತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯವು ಜೀವನದ ಗತಿಬಿಂಬ ಮತ್ತು ಪ್ರತಿಬಿಂಬವಾಗಿದೆ. ನಿತ್ಯವೂ ನೂತನ ಅನುಭವಗಳನ್ನು ಆನಂದಿಸುವ ಮನುಷ್ಯ ಅದನ್ನು ಕಟ್ಟುವ ಹಾಗೂ ಕೃತಿ ರಚಿಸುವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಲೇಖಕ ಹಾಗೂ ವಿರಾಜಪೇಟೆ ಉಪ ಖಜಾನೆಯ ಅಧೀಕ್ಷಕ ಗಣೇಶ್ ನಿಲುವಾಗಿಲು ಅವರ ಚಕ್ರವರ್ತಿ ನೆಪೋಲಿಯನ್ ಹಾಗೂ ಹುಣಸೂರಿನ ಅರಸು ಕೃತಿಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಲೇಖನದ ಕುರಿತ ಚರ್ಚೆಗಳಲ್ಲಿ ಭಾಗವಹಿಸಿ ಅನೇಕ ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡರು.
ವಿದ್ಯಾರ್ಥಿನಿಯರಾದ ಸುಹೈರಾ ಹಾಗೂ ಕೀರ್ತನಾ ಲೇಖಕರ ಕೃತಿಗಳನ್ನು ವಿಮರ್ಶಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಬಸವರಾಜು, ಉಪನ್ಯಾಸಕರಾದ ಡಾ.ಡಿ.ಪ್ರಭು, ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.