ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚಳ

ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಬಳಿ ಈಚೆಗೆ ಸೆರೆ ಹಿಡಿಯಲಾದ ಕಾಡಾನೆ
ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಬಳಿ ಈಚೆಗೆ ಸೆರೆ ಹಿಡಿಯಲಾದ ಕಾಡಾನೆ
Published on
ಮಡಿಕೇರಿ:
ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಹಗಲಿನಲ್ಲೂ ಜನವಸತಿ ಪ್ರದೇಶಗಳಿಗೆ ದಾಳಿ ಇಡುವ ಕಾಡಾನೆಗಳು ಮಾನವ ಜೀವ ಹಾನಿ ಮಾತ್ರವಲ್ಲದೆ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಈ ಸಂದರ್ಭ ಹೆಚ್ಚು ಅಪಾಯಕಾರಿ ಆಗಿರುವ ಆನೆಗಳನ್ನು ಸೆರೆ ಹಿಡಿದು ಬೇರೆ ಕಡೆಗೆ ಸ್ಥಳಾಂತರಿಸುವ ಮೂಲಕ ಸದ್ಯದ ಮಟ್ಟಿಗೆ ಪರಿಹಾರ ಕಲ್ಪಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಆನೆ ಸೆರೆಹಿಡಿಯುವ ಕಾರ್ಯಾಚರಣೆ ದುಬಾರಿ ವೆಚ್ಚದಿಂದ ಕೂಡಿರುವುದಲ್ಲದೆ ಮಾನವ ಶ್ರಮವೂ ಹೆಚ್ಚು ಬೇಕಾಗುತ್ತದೆ. ಆದರೆ ಆನೆಗಳ ಸ್ಥಳಾಂತರ ಪ್ರಕ್ರಿಯೆ ಆನೆ-ಮಾನವ ಸಂಘರ್ಷ ಕಡಿವಾಣ ಹಾಕಲು ಶಾಶ್ವತ ಪರಿಹಾರ ಅಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
ಆನೆಗಳಿಗೆ ತಮ್ಮ ಮೂಲ ನೆಲೆ ಮತ್ತು ಸಂಚಾರ ಮಾರ್ಗಗಳ ಬಗ್ಗೆ ಅದ್ಭುತವಾದ ಸ್ಮರಣಶಕ್ತಿಯ ಇರುತ್ತದೆ. ಸ್ಥಳಾಂತರಿಸಿದ ಆನೆಗಳು ನೂರಾರು ಕಿಲೋಮೀಟರ್ ದೂರದಿಂದ ಮತ್ತೆ ತಮ್ಮ ಹಳೆಯ ಪ್ರದೇಶಕ್ಕೆ ಬರಲು ಪ್ರಯತ್ನಿಸುತ್ತವೆ. ಈ ಹಾದಿಯಲ್ಲಿ ಅವು ಹೊಸ ಪ್ರದೇಶಗಳ ಮೂಲಕ ಹಾದುಹೋಗುವಾಗ ಮತ್ತಷ್ಟು ಸಂಘರ್ಷಗಳಿಗೆ ಕಾರಣವಾಗಬಹುದಾದ ಆತಂಕವೂ ಇದೆ. ಒಂದು ಕಡೆಯಿಂದ ಹಿಡಿದ ಆನೆಯನ್ನು ಬೇರೆ ಅರಣ್ಯಕ್ಕೆ ಬಿಟ್ಟಾಗ, ಅಲ್ಲಿನ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಅದು ಪರದಾಡುತ್ತದೆ. ಅಲ್ಲಿನ ಸ್ಥಳೀಯ ಆನೆಗಳ ಗುಂಪಿನೊAದಿಗೆ ಸಂಘರ್ಷ ಉಂಟಾಗಬಹುದು ಅಥವಾ ಆಹಾರ ಹುಡುಕುತ್ತಾ ಮತ್ತೆ ಅರಣ್ಯದ ಅಂಚಿನ ಗ್ರಾಮಗಳಿಗೆ ನುಗ್ಗಬಹುದು. ಹಾಗಾಗಿ ಆನೆ-ಮಾನವ ಸಂಘರ್ಷಕ್ಕೆ ಆನೆಗಳ ಸ್ಥಳಾಂತರ ಪರಿಣಾಮಕಾರಿ ಪರಿಹಾರ ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಆನೆಗಳು ಮುಕ್ತವಾಗಿ ಓಡಾಡಲು ಅಡೆತಡೆಯಿಲ್ಲದ ಮಾರ್ಗಗಳನ್ನು ಒದಗಿಸಲು ಆನೆ ಕಾರಿಡಾರ್‌ಗಳ ರಕ್ಷಣೆ, ಸೌರ ಬೇಲಿ ಮತ್ತು ರೈಲ್ವೇ ಹಳಿ ತಡೆಗೋಡೆ ವೈಜ್ಞಾನಿಕವಾಗಿ ಅಳವಡಿಸುವುದು ಮತ್ತು ಅವುಗಳ ಸರಿಯಾದ ನಿರ್ವಹಣೆ, ಕಾಡಿನ ಅಂಚಿನ ಜಮೀನುಗಳಲ್ಲಿ ಆನೆಗಳನ್ನು ಆಕರ್ಷಿಸದ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವುದು, ಆನೆಗಳು ಕಾಡಿನಿಂದ ಹೊರಬಂದಾಗ ತಕ್ಷಣ ಗ್ರಾಮಸ್ಥರಿಗೆ ಎಸ್‌ಎಂಎಸ್ ಅಥವಾ ಸೈರನ್ ಮೂಲಕ ಮಾಹಿತಿ ನೀಡುವ ತಂತ್ರಜ್ಞಾನ ಬಳಸುವುದು ಮತ್ತಿತರ ಮಾರ್ಗಗಳ ಮೂಲಕ ಆನೆ-ಮಾನವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎನ್ನುವ ಸಲಹೆಗಳೂ ಕೇಳಿಬರುತ್ತಿವೆ.
"

ಕಾಡಾನೆ-ಮಾನವ ಸಂಘರ್ಷದಲ್ಲಿ ಅತೀ ಹೆಚ್ಚು ಕಾರ್ಮಿಕರು, ಬಡವರು, ರೈತರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅವರ ಜೀವಕ್ಕೂ ಬೆಲೆ ಇದೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲೇ ಬೇಕು. ಕಾಡಾನೆಗಳನ್ನು ನಿರ್ದಿಷ್ಟ ಮೀಸಲು ಅರಣ್ಯದಲ್ಲಿ ಬಿಡಬೇಕು.

"

ಆನೆ-ಮಾನವ ಸಂಘರ್ಷಕ್ಕೆ ಸಂಬAಧಿಸಿದAತೆ ಉಪಟಳ ನೀಡುವ ಆನೆಗಳನ್ನು ಮಾತ್ರ ಬೇರೆಡೆಗೆ ಸ್ಥಳಾಂತರಿಸುವುದರಿAದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಕಾಡಾನೆಗಳು ಅರಣ್ಯದಲ್ಲೇ ಇರಬೇಕಲ್ಲದೆ ನಾಡಿನ ಕಡೆ ನುಸುಳದಂತೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಒದಗಿಸಬೇಕು. ಆನೆಗಳಿಗೆ ಅರಣ್ಯದಲ್ಲಿ ಅವುಗಳ ಹಸಿವು, ಬಾಯಾರಿಕೆ ನೀಗದಿದ್ದಲ್ಲಿ ಮಾತ್ರ ಅವುಗಳು ನಾಡಿನೆಡೆ ಬರುತ್ತವೆ. ಈ ಸಂದರ್ಭ ಮತ್ತೆ ಆನೆ-ಮಾನವ ಸಂಘರ್ಷ ಮರುಕಳಿಸುವುದು ಖಂಡಿತ. ಮುಖ್ಯವಾಗಿ ಅರಣ್ಯದ ಗಡಿಯಲ್ಲಿ ಸುತ್ತಲೂ ಆನೆಗಳು ದಾಟದಂತೆ ಕಂದಕ ನಿರ್ಮಿಸುವುದು ಸೂಕ್ತ.

"

ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ಅನೇಕ ವರ್ಷಗಳಿಂದ ಇದ್ದು ಇದಕ್ಕೆ ಇಂದಿಗೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕಾಡಾನೆಗಳನ್ನು ಹಿಡಿದು ಬೇರೆಡೆ ಬಿಡುವುದರಿಂದ ಪರಿಹಾರ ಸಿಗುವುದಿಲ್ಲ. ಅವುಗಳಿಗೆ ಬೇಕಾದ ಆಹಾರ ಪದಾರ್ಥಗಳನ್ನು ಅವಿರುವ ಸ್ಥಳದಲ್ಲಿ ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಕಾಡಾನೆ ಹಿಡಿದು ಬೇರೆಡೆಗೆ ಬಿಟ್ಟು ರೈತರ ಕಣ್ಣೊರೆಸುವ ಕೆಲಸ ಆಗಬಾರದು.

"

ಆನೆಗಳ ಸ್ಥಳಾಂತರ ಎನ್ನುವುದು ಪ್ರಯೋಜನ ಇಲ್ಲದ ಒಂದು ಯೋಜನೆ. ಈಚೆಗೆ ಸುಂಟಿಕೊಪ್ಪ ಬಳಿ ಸೆರೆ ಹಿಡಿದಿದ್ದ ಆನೆಯನ್ನು ದೂರದಲ್ಲಿ ಎಲ್ಲೋ ಬಿಟ್ಟು ಬರಲಾಗಿತ್ತು. ಆದರೆ ಮಾರನೆಯ ದಿನವೇ ಆ ಆನೆ ಹಿಡಿದ ಸ್ಥಳದಲ್ಲಿ ಪ್ರತ್ಯಕ್ಷ ಆಗಿತ್ತು. ಆನೆಗಳು ಪ್ರತಿ ದಿನ 40-50 ಕಿಮೀ ನಡೆಯುತ್ತವೆ. ಆನೆಗಳ ಸಂಖ್ಯೆಯೂ ಹೆಚ್ಚಾಗಿದೆ. ಹಾಗಾಗಿ ಕಾಡಂಚಿನ ಪ್ರದೇಶದಲ್ಲಿ ಇರುವವರು ಎಚ್ಚರಿಕೆಯಿಂದ ಇರುವ ಬಗ್ಗೆ ಜಾಗೃತಿ ಮೂಡಿಸುವುದಷ್ಟೇ ಸದ್ಯಕ್ಕೆ ಇರುವ ಪರಿಹಾರ.

"

ಸಿದ್ದಾಪುರದಲ್ಲಿ ಒಂದು ಆನೆ, ಚೆಂಬೆಳ್ಳೂರಿನಲ್ಲಿ ಒಂದು ಆನೆ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಮೂರು ಆನೆಗಳನ್ನು ಸೆರೆಹಿಡಿಯಲಾಗಿದೆ. ಇದೇ ರೀತಿಯಲ್ಲಿ ತೊಂದರೆ ಕೊಡುವ ಆನೆಗಳನ್ನು ಗುರುತಿಸಿ ಹಿಡಿಯುವ ಕೆಲಸ ಮಾಡಲಾಗುತ್ತಿದೆ. ಆನೆಗಳನ್ನು ಹಿಡಿದ ಕೂಡಲೇ ಪರಿಸರವಾದಿಗಳು, ಎನ್‌ಜಿಒಗಳು ಇವರು ಆನೆಗಳನ್ನು ಹಿಡಿದುಬಿಟ್ಟರು ಎಂದು ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇವೆಲ್ಲವುಗಳ ನಡುವೆ ಸಮತೋಲನ ಕಾಯ್ದುಕೊಂಡು ಆನೆ-ಮಾನವ ಸಂಘರ್ಷ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕಾರ ಕೊಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net