ಬೇಸಿಗೆ ಮುನ್ನವೇ ಒಣಗಿದ ಕಾಡು

  ಮಲೆಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ಅರಣ್ಯ ಪ್ರದೇಶದಲ್ಲಿ ಮರಗಿಡಗಳು ಸಂಪೂರ್ಣ ಒಣಗಿರುವುದು.
ಮಲೆಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ಅರಣ್ಯ ಪ್ರದೇಶದಲ್ಲಿ ಮರಗಿಡಗಳು ಸಂಪೂರ್ಣ ಒಣಗಿರುವುದು.
Published on
ಹನೂರು: ಮಳೆ ಕೊರತೆಯ ಪರಿಣಾಮ ತಾಲೂಕಿನ ಅರಣ್ಯ ಪ್ರದೇಶಗಳು ಬೇಸಿಗೆ ಮುನ್ನವೇ ಒಣಗ ತೊಡಗಿವೆ. ಈ ಅವಧಿಯಲ್ಲಿ ಬೆಂಕಿ ಅವಘಡ ಸಂಭವಿಸದಂತೆ ಹಾಗೂ ಕಾಡು ಪ್ರಾಣಿಗಳಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳ ಬೇಕಾದದ್ದು ಅರಣ್ಯ ಇಲಾಖೆಗೆ ಸವಾಲಿನ ಕೆಲಸವಾಗಿದೆ.
ಜಿಲ್ಲೆಯಲ್ಲಿಯೇ ಹೆಚ್ಚು ಅರಣ್ಯ ಪ್ರದೇಶದಿಂದ ಕೂಡಿರುವ ಹನೂರು ತಾಲೂಕಿನಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಹೊಂದಿಕೊಂಡಂತೆ ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮವಿದೆ. ಇಲ್ಲಿ ಕಾಡಾನೆ, ಹುಲಿ, ಚಿರತೆ, ಕಾಡಮ್ಮೆ, ಜಿಂಕೆ ಸೇರಿದಂತೆ ಇನ್ನಿತರೆ ಹೆಚ್ಚು ಕಾಡು ಪ್ರಾಣಿಗಳಿವೆ. ಇತ್ತ ಔಷಧ ಸಸ್ಯಗಳು, ಮರ ಗಿಡಗಳು ಹಾಗೂ ಕುರುಚಲು ಸಸ್ಯಗಳಿವೆ. ಈ ಬಾರಿ ತಾಲೂಕಿನಲ್ಲಿ ಮಳೆಯ ಪ್ರಮಾಣ ತೀವ್ರ ಕಡಿಮೆಯಾದ
ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಕೆರೆ, ಕಟ್ಟೆ ಹಾಗೂ ಹಳ್ಳಕೊಳ್ಳಗಳು ಬತ್ತಿ ಹೋಗಿವೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಜನರು ನೀರಿಗಾಗಿ ಪರತಪಿಸುತ್ತಿದ್ದಾರೆ. ಕುಡಿಯುವ ನೀರಿನ ಸೌಕರ್ಯ ಒದಗಿಸಲು ಗ್ರಾಪಂ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಬೆಂಕಿಗೆ ಆಹುತಿಯಾಗಿತ್ತು
ಪರಿಸ್ಥಿತಿ ಹೀಗಿರುವಾಗ ಬೇಸಿಗೆ ಮುನ್ನವೇ ಅರಣ್ಯ ಪ್ರದೇಶಗಳು ಒಣಗ ತೊಡಗಿವೆ. ಕಳೆದ ವರ್ಷ ಬೇಸಿಗೆ ವೇಳೆ ಬೆಂಕಿ ಅವಘಡ ಸಂಭವಿಸಿ ತಾಲೂಕಿನ ಕೆಲವು ಕಡೆಗಳಲ್ಲಿ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಜತೆಗೆ ಕಾಡು ಪ್ರಾಣಿಗಳು ನೀರನ್ನು ಅರಸಿ ಗ್ರಾಮ ಸಮೀಪದ ಹಳ್ಳಕೊಳ್ಳಗಳಿಗೆ ಆಗಮಿಸಿದ್ದವು. ಹಾಗಾಗಿ ಬೇಸಿಗೆ ಬಂತೆಂದರೆ ಅರಣ್ಯ, ವನ್ಯಜೀವಿಗಳನ್ನು ಬೆಂಕಿ ಅವಘಡದಿಂದ ಕಾಪಾಡುವುದು ಹಾಗೂ ಕಾಡು ಪ್ರಾಣಿಗಳಿಗೆ ಕುಡಿವ ನೀರು ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಅರಣ್ಯ ಇಲಾಖೆಗೆ ಸವಾಲಿನ ಕೆಲವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕಿದೆ.
ವಿಶೇಷ ನಿಗಾ ವಹಿಸಿ: ತಾಲೂಕಿನಲ್ಲಿ ಕಳೆದ ವರ್ಷ ಬಿಆರ್‌ಟಿ ವಲಯದ ಗುಂಡಾಲ್ ಅರಣ್ಯ ಪ್ರದೇಶದ ವ್ಯಾಪ್ತಿ, ಮಲೆಮಹದೇಶ್ವರ ವನ್ಯಜೀವಿ ವಲಯದ ಹೂಗ್ಯಂ, ಕಾವೇರಿ ವನ್ಯಜೀವಿ ವಲಯದ ಶಾಗ್ಯ ಬೀಟ್ ಹಾಗೂ ಇನ್ನಿತರೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಸಸ್ಯ ಹಾಗೂ ಗಿಡಮರಗಳು ನಾಶವಾಗಿದ್ದವು. ಕೆಲವು ಕಡೆಗಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಗತ್ಯ ಮುತುರ್ವಜಿ ವಹಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ದಿನದಂದ ದಿನಕ್ಕೆ ಬಿಸಿಲಿನ ತಾಪ ಮಾನ ಹೆಚ್ಚಾಗುತ್ತಿದೆ. ಅರಣ್ಯ ಪ್ರದೇಶ ಬಿಸಿಲಿನ ಬೇಗೆಗೆ ಸಿಲುಕಿದೆ. ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳದಂತೆ ಅಗತ್ಯ ಕ್ರಮ ವಹಿಸಬೇಕಾದದ್ದು ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವೂ, ಅನಿವಾರ್ಯವೂ ಆಗಿದೆ. ಈ ದಿಸೆ ಯಲ್ಲಿ ಕಳೆದ ತಿಂಗಳು ಮ.ಬೆಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹಾಗೂ ಶಾಸಕ ಎಂ.ಆರ್ ಮಂಜುನಾಥ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪಾ ಸೂಚಿಸಿದ್ದಾರೆ. ಈ ಬಗ್ಗೆ ಡಿಸಿಎಫ್‌ಗಳಾದ ಮಲೆಮಹದೇಶ್ವರ ವನ್ಯಜೀವಿ ಧಾಮದ ಭಾಸ್ಕರ್ ಹಾಗೂ ಕಾವೇರಿ ವನ್ಯಜೀವಿ ಧಾಮದ ಸುರೇಂದ್ರ ಅವರೂ ಮುಂಜಾಗ್ರತಾ ಕ್ರಮವಹಿಸಿದ್ದಾರೆ.
*
ಜಾಗೃತಿ ಅವಶ್ಯಕ: ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮದ ಕಾಡಂಚು ಹಾಗೂ ಅರಣ್ಯ ಪ್ರದೇಶದೊಳಗೆ ಜನವಸತಿ ಪ್ರದೇಶಗಳಿವೆ. ಸೋಲಿಗರು ಸೇರಿದಂತೆ ಇನ್ನಿತರೆ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದರಲ್ಲಿ ಇವರ ಪಾತ್ರವೂ ಅತೀ ಮುಖ್ಯ. ಹಾಗಾಗಿ ಇಲ್ಲಿನ ಜನರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದಂತೆ ಜಾಗೃತಿ ಮೂಡಿಸುವುದು ಅಗ್ಯವಾಗಿದೆ. ಆದರೆ ಕೆಲವರು ವೈಷಮ್ಯದಿಂದ ಹಾಗೂ ಇನ್ನಿತರೆ ಕಾರಣಗಳಿಂದ ಕಾಡಿಗೆ ಬೆಂಕಿ ಹಾಕುವುದನ್ನು ರೂಡಿಸಿಕೊಂಡಿದ್ದಾರೆ. ಕಳೆದ ವರ್ಷ ಅರಣ್ಯಕ್ಕೆ ಬೆಂಕಿ ಹಾಕಿದ್ದವರನ್ನು ಇಲಾಖೆಯ ಅಧಿಕಾರಿಗಳು ಬಂಧಿಸಿದ್ದರು. ಆದ್ದರಿಂದ ಈ ಬಾರಿಯೂ ಈ ಬಗ್ಗೆ ಕಟ್ಟೆಚ್ಚರ ವಹಿಸಬೇಕಿದೆ.
ಪ್ರಾಣಿಗಳ ನೀರಿಗೆ ಸಮಸ್ಯೆಯಾಗದಿರಲಿ:
ಇನ್ನು ಈ ಬಾರಿ ಸಮರ್ಪಕ ಮಳೆಯಾಗದ ಹಿನ್ನಲೆಯಲ್ಲಿ ಅರಣ್ಯ ಪ್ರದೇಶದಲ್ಲಿನ ಹಳ್ಳಕೊಳ್ಳಗಳು ಹಾಗೂ ಕೆರೆಗಳು ಬತ್ತಿ ಹೋಗಿವೆ. ಇಲಾಖೆಯ ವತಿಯಿಂದ ಅರಣ್ಯ ಪ್ರದೇಶದ ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಸೋಲಾರ್ ಪಂಪ್‌ಸೆಟ್ ಮೂಲಕ ನೀರು ತುಂಬಿಸುವುದರ ಮೂಲಕ ಕಾಡು ಪ್ರಾಣಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಆದರೂ ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆಯಿಂದ ವನ್ಯಜೀವಿಗಳು ಗ್ರಾಮ ಸಮೀಪದ ಕೆರೆ, ಕಟ್ಟೆಗಳ ಬಳಿ ಆಗಮಿಸುತ್ತವೆ. ಆದ್ದರಿಂದ ಈ ಬಗ್ಗೆ ಕ್ರಮವಹಿಸಿ ವನ್ಯಜೀವಿಗಳಿಗೆ ನೀರಿನ ಸಮಸ್ಯೆ ತಲೆದೂರದಂತೆ ಕ್ರಮ ವಹಿಸಬೇಕಿದೆ.
ಅಗ್ನಿಶಾಮಕ ಠಾಣೆಗೆ ಪತ್ರ :
ಮಲೆಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಈಗಾಗಲೇ 241 ಕಿ.ಮೀ ಬೆಂಕಿ ರೇಖೆಯನ್ನು ನಿರ್ಮಿಸಲಾಗಿದೆ. 29 ಕಡೆಗಳಲ್ಲಿ ಶಿಬಿರ ತೆರೆಯಲಾಗಿದೆ. ಸಿಬ್ಬಂದಿಗೆ ಅಗ್ನಿಶಾಮಕ ಠಾಣೆಯಿಂದ ಬೆಂಕಿ ನಂದಿಸುವ ಬಗ್ಗೆ ತರಬೇತಿ ನೀಡಲಾಗಿದೆ. ಬೆಂಕಿ ಅವಘಡ ಸಂಭವಿಸಿದ ವೇಳೆ ಸಹಕಾರ ನೀಡುವಂತೆ ಇಲಾಖೆಯ ಅಧಿಕಾರಿಗಳು ಅಗ್ನಿಶಾಮಕ ಠಾಣೆಗೆ ಪತ್ರ ಬರೆದಿದ್ದಾರೆ. ಬೆಂಕಿ ನಂದಿಸುವ ಉಪಕರಣಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ ಆನ್‌ಲೈನ್ ಮೂಲಕ ಬೆಂಕಿ ಉಂಟಾದ ಸ್ಥಳದ ಬಗ್ಗೆ ಮಾಹಿತಿ ತಿಳಿದು ಬರಲಿದ್ದು, ಎತ್ತರದ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ನಿಗಾ ವಹಿಸಲಾಗಿದೆ. ಇನ್ನು ಅರಣ್ಯ ಪ್ರದೇಶದಲ್ಲಿ ನೀರಿನ ತೊಟ್ಟಿಗಳಿಗೆ ಸೋಲಾರ್ ಪಂಪ್‌ಸೆಟ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ತೀವ್ರ ಕೊರತೆ ಇರುವ 3 ಕಡೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಇಲಾಖೆಯ ಅಧಿಕಾರಿಗಳು ಕ್ರಮವಹಿಸಿದ್ದಾರೆ. ಹಾಗೆಯೇ ಕಾವೇರಿ ವನ್ಯಜೀವಿ ಧಾಮದಲ್ಲೂ ಸಹ ಈ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಬೆಂಕಿ ಅವಘಡ ಸಂಭವಿಸದಂತೆ ಹಾಗೂ ವನ್ಯಜೀವಿಗಳಿಗೆ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಮುತುರ್ವಜಿ ವಹಿಸಿದ್ದಾರೆ.
ಬೇಸಿಗೆ ವೇಳೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದಂತೆ ಬೆಂಕಿ ರೇಖೆಯನ್ನು ನಿರ್ಮಿಸಲಾಗಿದೆ. ಸಿಬ್ಬಂದಿ ತರಬೇತಿ ನೀಡಲಾಗಿದೆ. ಕಾಡಿಗೆ ಬೆಂಕಿ ಬೀಳದಂತೆ ನಿಗಾ ವಹಿಸಲಾಗಿದೆ. ಕಾಡು ಪ್ರಾಣಿಗಳಿಗೆ ನೀರಿನ ಸಮಸ್ಯೆಯಾಗದಂತೆ ತೊಟ್ಟಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಲಾಗಿದೆ.
> ಭಾಸ್ಕರ್
ಡಿಸಿಎಫ್ ಮಲೆಮಹದೇಶ್ವರ ವನ್ಯಜೀವಿ ವಿಭಾಗ, ಕೊಳ್ಳೇಗಾಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net