ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಪಣತೊಡುವುದಾಗಿ ವಿದ್ಯಾರ್ಥಿಗಳು, ಶಿಕ್ಷಕರು ಸಂಕಲ್ಪ ಮಾಡಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಡಿಕೇರಿಗೆ ಆಗಮಿಸಿದ ಡ್ರಗ್ಸ್ ಮುಕ್ತ ಅಭಿಯಾನ
ಮಡಿಕೇರಿ: ಪರಿವರ್ತನಾ ಟ್ರಸ್ಟ್ ನೇತೃತ್ವದಲ್ಲಿ ಆರಂಭಗೊಂಡ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಮಡಿಕೇರಿಗೆ ಆಗಮಿಸಿತು.
ನಗರದ ಜೂನಿಯರ್ ಕಾಲೇಜಿನಲ್ಲಿ ಡ್ರಗ್ಸ್ ಸೇವನೆಯಿಂದ ಉಂಟಾಗುವ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಕಾಲೇಜು, ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳು, ವಿವಿಧ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು. ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಕಿರು ನಾಟಕದ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ಗಾಂಜಾ ಸೇವನೆ ಮಾಡುವವರು ಮಾನಸಿಕ ಸ್ಥಿಮಿತ ಕಳೆದುಕೊಂಡು ಜೀವನ ಹಾಳುಮಾಡಿಕೊಳ್ಳುವುದು, ಕುಡಿತದ ಚಟದಿಂದ ಕುಟುಂಬ ನಾಶವಾಗುವುದು, ತಂಬಾಕು ಸೇವನೆಯಿಂದ ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್ ಉಂಟಾಗಿ ಬದುಕೇ ಸರ್ವನಾಶವಾಗುವುದನ್ನು ನಾಟಕದ ಮೂಲಕ ಮನಮುಟ್ಟುವಂತೆ ಪ್ರಸ್ತುತಪಡಿಸಿದರು. ಇಂತಹ ಚಟಕ್ಕೆ ಒಳಗಾದವರಿಗೆ ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರೂಮ್ ನಂ.೧೧ರ ಮನೋವೈದ್ಯಕೀಯ ವಿಭಾಗದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬಹುದೆಂದು ವೈದ್ಯರು ತಿಳಿಸಿದರು.
ಪರಿವರ್ತನಾ ಟ್ರಸ್ಟ್‌ನ ಪ್ರಮುಖರಾದ ಸಂದೇಶ್ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ೪೫ ದಿನಗಳ ಕಾಲ ನಡೆಯಲಿದೆ. ಮಡಿಕೇರಿಯಿಂದ ಸಂಪಾಜೆ, ಪೆರಾಜೆ, ಅರಂತೋಡು ಮೂಲಕ ಸುಳ್ಯಕ್ಕೆ ರಥಯಾತ್ರೆ ಸಾಗಲಿದೆ. ಜ.೧೯ರಂದು ಬೆಂಗಳೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದು ಪರಿವರ್ತನಾ ಟ್ರಸ್ಟ್‌ನ ಪ್ರಮುಖರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಪಣತೊಡುವುದಾಗಿ ವಿದ್ಯಾರ್ಥಿಗಳು, ಶಿಕ್ಷಕರು ಸಂಕಲ್ಪ ಮಾಡಿದರು. ಪರಿವರ್ತನಾ ಟ್ರಸ್ಟ್‌ನ ಅಜಿತ್ ಕುಕ್ಕೆರ, ಮಹೇಶ್, ಧನಂಜಯ, ಕುಮಾರ್, ಬಾಲಕೃಷ್ಣ ರೈ, ಚಂದ್ರಶೇಖರ್ ಭವನ್, ಸತೀಶ್ ಮತ್ತಿತರರು ಇದ್ದರು.