

ನಾಪೋಕ್ಲು: ಮಡಿಕೇರಿ ತಾಲೂಕಿನ ಐತಿಹಾಸಿಕ ಕಡಿಯತ್ತೂರು ಶ್ರೀಭಗವತಿ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮದ ಪ್ರಕಾಶ್ ರೈ ಹಾಗೂ ಉಷಾ ರೈ ದಂಪತಿ 12.78 ಲಕ್ಷ ರೂ. ದೇಣಿಗೆ ನೀಡಿ, ಅಭಿವೃದ್ಧಿ ಕಾಮಗಾರಿಗೆ ಸಹಕರಿಸಿದ್ದಾರೆ.
ಸುಮಾರು 400 ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ಚಾವಣಿ, ಅಂಗಳ ಹಾಗೂ ಸಭಾಂಗಣದ ವಿವಿಧ ಜೀರ್ಣೋದ್ಧಾರ ಕಾಮಗಾರಿ ಬಾಕಿ ಉಳಿದಿದ್ದವು. ಈ ಹಿನ್ನೆಲೆಯಲ್ಲಿ ಸಂಪೂರ್ಣ ವೆಚ್ಚ ಭರಿಸಿ, ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ.
ಗ್ರಾಮಸ್ಥರ ಒಗ್ಗಟ್ಟು: ಎರಡು ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲರೂ ಒಗ್ಗೂಡಿ ದೇವಾಲಯದ ತೀರ್ಥ ಮಂಟಪವನ್ನು ಮರು ನಿರ್ಮಿಸಿದ್ದರು. ಈ ಹಿಂದೆ 1990ರಲ್ಲಿಯೂ ವಿಶೇಷ ಸಮಿತಿ ರಚಿಸಿಕೊಂಡು ಭಗವತಿ ದೇವಾಲಯದ ಜೀರ್ಣೋದ್ಧಾರ ನಡೆಸಲಾಗಿತ್ತು. ಗ್ರಾಮದ ಧಾರ್ಮಿಕ ಕೇಂದ್ರಗಳ ಪುನರುತ್ಥಾನಕ್ಕೆ ಕಡಿಯತ್ತೂರಿನಲ್ಲಿ ಸದಾ ಜನಬೆಂಬಲ ಸಿಕ್ಕಿದೆ. ಶ್ರೀ ಶಾಸ್ತಾವಿನ ದೇವಾಲಯವನ್ನು ಊರವರ ಸಹಕಾರದಿಂದ ಹಾಗೂ ವಿಷ್ಣುಮೂರ್ತಿ ದೇವಾಲಯವನ್ನು ಪೂರೆಯನ ಸತೀಶ್ ಅವರ ನೆರವಿನಿಂದ ಜೀರ್ಣೋದ್ಧಾರ ಮಾಡಲಾಗಿದೆ ಎಂದು ದೇವಾಲಯದ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.