ಕಲ್ಕಂದೂರಿನಲ್ಲಿ ಮಕ್ಕಳನ್ನು ಅಟ್ಟಿಸಿಕೊಂಡು ಬರುತ್ತವೆ ನಾಯಿಗಳು

ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಶೆಟ್ಟಳ್ಳಿ ಶಾಲೆಯಲ್ಲಿ ಆಯೋಜಿಸಿದ್ದ ಹಾನಗಲ್ ಗ್ರಾಮ ಪಂಚಾಯಿತಿ ಮಕ್ಕಳ ಗ್ರಾಮಸಭೆಗೆ ಪಂಚಾಯಿತಿ ಅಧ್ಯಕ್ಷ ಯಶಾಂತ್ ಕುಮಾರ್ ಉದ್ಘಾಟಿಸಿದರು. ರೇಣುಕಾ, ಸ್ಮಿತಾ, ಸುಕುಮಾರ್ ಇದ್ದರು.
ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಶೆಟ್ಟಳ್ಳಿ ಶಾಲೆಯಲ್ಲಿ ಆಯೋಜಿಸಿದ್ದ ಹಾನಗಲ್ ಗ್ರಾಮ ಪಂಚಾಯಿತಿ ಮಕ್ಕಳ ಗ್ರಾಮಸಭೆಗೆ ಪಂಚಾಯಿತಿ ಅಧ್ಯಕ್ಷ ಯಶಾಂತ್ ಕುಮಾರ್ ಉದ್ಘಾಟಿಸಿದರು. ರೇಣುಕಾ, ಸ್ಮಿತಾ, ಸುಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಗ್ರಾಮಸಭೆಯಲ್ಲಿ ಗಮನ ಸೆಳೆದ ವಿದ್ಯಾರ್ಥಿಗಳು
  • ಹಾನಗಲ್ಲು ಶಾಲೆಯ ಶೌಚಗೃಹ ದುರಸ್ತಿ ಮಾಡಿಕೊಡಲು ಮನವಿ
ಸೋಮವಾರಪೇಟೆ: ಹಾನಗಲ್ಲು ಶೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾನಗಲ್ಲು ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಯಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಕಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹಾನಗಲ್ಲು ಶೆಟ್ಟಳ್ಳಿ ಶಾಲೆ ವಿದ್ಯಾರ್ಥಿಗಳು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಹಾನಗಲ್ಲು ಶಾಲೆಯ ಶೌಚಗೃಹ ದುರಸ್ತಿ ಮಾಡಿಕೊಡಿ, ಕೈತೊಳೆಯಲು ಸಿಂಕ್ ಅಳವಡಿಸಿಬೇಕು. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಧ್ವನಿವರ್ಧಕ ಬೇಕು ಎಂದು ವಿದ್ಯಾರ್ಥಿಗಳಾದ ಪ್ರಥಮ್, ಭೂಮಿಕಾ, ಕಾರ್ತಿಕ್, ಜೇತಸ್, ಶೇಯಸ್ ಬೇಡಿಕೆಯಿಟ್ಟರು.
ಕಲ್ಕಂದೂರು ಶಾಲೆಗೆ ತೆರಳುವಾಗ ಹಾಗೂ ಮೈದಾನದಲ್ಲಿ ಆಟವಾಡುವಾಗ ಬೀದಿನಾಯಿಗಳ ಕಾಟ ಹೆಚ್ಚಾಗಿದೆ. ಕೆಲವೊಮ್ಮೆ ಮಕ್ಕಳನ್ನು ಅಟ್ಟಿಸಿಕೊಂಡು ಬರುತ್ತವೆ. ಶಾಲೆಗೆ ತೆರಳಲು ಭಯವಾಗುತ್ತದೆ ಎಂದು ವಿದ್ಯಾರ್ಥಿನಿ ಪೂರ್ವಿ ಹೇಳಿದರು. ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿಗೆ ಪರದಾಡಬೇಕಿದೆ. ವಾಟರ್ ಫಿಲ್ಟರ್ ಕೊಡಿಸಿ ಎಂದು ಭುವನ್ ಮನವಿ ಮಾಡಿದರು.
ಕೆಲವರು ಸಂಜೆ ಶಾಲೆ ಗೇಟ್‌ನ ಬೀಗ ಒಡೆದು ಶಾಲಾ ಆವರಣ ಪ್ರವೇಶಿಸಿ ಕಟ್ಟಡಕ್ಕೆ ಹಾನಿ ಮಾಡುತ್ತಿದ್ದಾರೆ. ಒಂದು ಸಿಸಿ ಕ್ಯಾಮರಾ ಅಳವಡಿಸಿಕೊಡಿ ಎಂದು ಕೇಳಿದ. ಯಡೂರು ಶಾಲೆ ಸುತ್ತ ಭದ್ರವಾದ ಬೇಲಿ ನಿರ್ಮಿಸಬೇಕು. ಗೇಟ್ ನಿರ್ಮಿಸಿಕೊಡಬೇಕೆಂದು ವಿದ್ಯಾರ್ಥಿ ಹವ್ಯಾಸ್, ಶ್ರಾವ್ಯಾ ಬೇಡಿಕೆಯಿಟ್ಟರು.
ಮಕ್ಕಳ ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ನಾವು ಪ್ರತಿಷ್ಠಾನ ಸಂಸ್ಥೆ ಕಾರ್ಯಕಾರಿ ನಿರ್ದೇಶಕರಾದ ಸುಮನ ಮ್ಯಾಥ್ಯು ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ನಾವೆಲ್ಲರೂ ಕೈಜೋಡಿಸಬೇಕಾದ ಅಗತ್ಯ ಇದೆ. ತಾಯಿ ಹಾಲು ಸಿಗದೆ ಯಾವುದೇ ಮಗು ಮೃತಪಡಬಾರದು. ಪೌಷ್ಟಿಕ ಆಹಾರದ ಕೊರತೆಯಿಂದ ಯಾವುದೇ ತಾಯಿ ಪ್ರಾಣ ಕಳೆದುಕೊಳ್ಳಬಾರದು ಎಂಬ ಮಹತ್ವದ ಉದ್ದೇಶದಿಂದ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಪೋಷಣೆಯೇ ದೇಶದ ಭವಿಷ್ಯವನ್ನು ರೂಪಿಸುತ್ತದೆ ಎಂಬ ನಂಬಿಕೆಯಿಂದ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಸಮಗ್ರ ಅಭಿವೃದ್ಧಿ ಮೂಲಕವೇ ದೇಶದ ಅಭಿವೃದ್ಧಿ ಸಾಧ್ಯ. ಈ ಕಾರ್ಯದಲ್ಲಿ ಸರ್ಕಾರದ ಜತೆಗೆ ಸಮಾಜವೂ ಕೈಜೋಡಿಸಬೇಕು. ಪ್ರತಿಯೊಬ್ಬರೂ ಪ್ರತಿಫಲಾಪೇಕ್ಷೆ ಇಲ್ಲದೆ, ಸೇವಾ ಮನೋಭಾವದಿಂದ ಮಕ್ಕಳ ಹಿತಕ್ಕಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಸಾವಿತ್ರವ್ವ ಅವರು ಇಲಾಖೆಯಿಂದ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯಿತಿ ಪಿಡಿಒ ಸ್ಮಿತಾ ಮಾತನಾಡಿ, ಕಳೆದ ಸಾಲಿನಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಕೇಳಿದ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಪಂಚಾಯಿತಿಗೆ ಬರುವ ಅನುದಾನದಲ್ಲಿ ಒಂದಷ್ಟು ಭಾಗವನ್ನು ಶಾಲೆಗಳಿಗೆ ಸೌಲಭ್ಯ ಒದಗಿಸಲು ವಿನಿಯೋಗಿಸಲಾಗುವುದು ಎಂದು ತಿಳಿಸಿದರು.
ಪಂಚಾಯಿತಿ ಅಧ್ಯಕ್ಷ ಯಶಾಂತ್ ಕುಮಾರ್ ಮಕ್ಕಳ ಗ್ರಾಮ ಸಭೆ ಉದ್ಘಾಟಿಸಿದರು. ವಿದ್ಯಾರ್ಥಿನಿ ಎಚ್.ಇ.ಇಂಚರಾ ಸಭೆ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷೆ ರೇಣುಕಾ, ಎಸ್‌ಡಿಎಂಸಿ ಉಪಾಧ್ಯಕ್ಷೆ ಮೋಹಿನಿ, ಸಿಆರ್‌ಪಿ ಚಂದ್ರಕಲಾ, ಮುಖ್ಯಶಿಕ್ಷಕರಾದ ಸುಕುಮಾರ್, ಎಲ್.ಎಂ.ಪ್ರೇಮಾ, ದಾನಿಗಳಾದ ಪದ್ಮನಾಭಾ, ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಮತ್ತು ಪಂಚಾಯಿತಿ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net