ಜಿಲ್ಲಾ ಮಟ್ಟದ ಮೇಲ್ವೀಚಾರಣಾ ಸಮಿತಿ ಸಭೆ

 ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಮಟ್ಟದ ಮೇಲ್ವೀಚಾರಣಾ ಸಮಿತಿ ಸಭೆ
ಮಡಿಕೇರಿ: ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಮಾನವ ಅಭಿವೃದ್ಧಿ ವರದಿ-೨೦೨೫ ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-೨೦೩೧ರ ವರದಿಗಳನ್ನು ಸಿದ್ಧಪಡಿಸುವ ಸಂಬಂಧ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಸೋಮವಾರ ಸುಧೀರ್ಘ ಚರ್ಚೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಮಾತನಾಡಿ, ಯೋಜನಾ ಇಲಾಖೆಯ ನಿರ್ದೇಶನದಂತೆ ಈ ಬಾರಿ ಜಿಲ್ಲಾ ಯೋಜನಾ ಸಮಿತಿ ವತಿಯಿಂದ ಪ್ರಮುಖವಾಗಿ ಡಿಎಚ್‌ಡಿಆರ್-೨೦೨೫ ಹಾಗೂ ಐಎಸ್‌ಡಿಡಿಪಿ-೨೦೩೧ ರ ವರದಿಗಳನ್ನು ಸಿದ್ದಪಡಿಸಲು ಕ್ರಮವಹಿಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಗಾರ ಹಮ್ಮಿಕೊಂಡು ನಿಖರ ಹಾಗೂ ನಿರ್ದಿ?್ಟವಾದ ದತ್ತಾಂಶಗಳನ್ನು ಒದಗಿಸುವ ಕುರಿತು ತರಬೇತಿ ನೀಡಲಾಗಿದೆ ಎಂದರು.
ಈ ವರದಿಗಳ ತಯಾರಿಕೆಗೆ ಸರ್ಕಾರದ ಆದೇಶದಂತೆ ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರಾದ ನವೀತ್ ತಿಮ್ಮಯ್ಯ ಅವರ ತಂಡ ಹಾಗೂ ಮೈಸೂರಿನ ಗ್ರಾಮ್ ಸಂಸ್ಥೆಗಳನ್ನು ತಾಂತ್ರಿಕ ಬೆಂಬಲ ಸಂಸ್ಥೆಗಳಾಗಿ ಆಯ್ಕೆ ಮಾಡಲಾಗಿದೆ. ಈ ಸಂಸ್ಥೆಯವರು ಸಹ ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಿರುತ್ತಾರೆ. ಮುಂದುವರೆದು ದತ್ತಾಂಶಗಳನ್ನು ಸಮರ್ಪಕವಾಗಿ ಒದಗಿಸುವ ಕುರಿತು ಈಗಾಗಲೇ ಹಲವಾರು ಬಾರಿ ಜಿಲ್ಲಾ ಮಟ್ಟದ ವಲಯವಾರು ಉಪ ಸಮಿತಿ ಸಭೆ ನಡೆಸಿ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಮಾನವ ಅಭಿವೃದ್ದಿ ವರದಿ-೨೦೨೫ ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ೨೦೩೧ ವರದಿಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ೨೩೨ ಸೂಚಕಗಳನ್ನು ನಿಗದಿಪಡಿಸಲಾಗಿದ್ದು, ನಿಗದಿಪಡಿಸಲಾದ ಸೂಚಕಗಳಿಗೆ ಸಂಬಂಧಿಸಿದ ದತ್ತಾಂಶವನ್ನು ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಒದಗಿಸಿರುತ್ತಾರೆ. ಈ ಮಾಹಿತಿಯನ್ನು ದತ್ತಾಂಶವಾರು ಪರಿಶೀಲಿಸಲಾಗಿದೆ ಎಂದು ತಾಂತ್ರಿಕ ಬೆಂಬಲ ಸಂಸ್ಥೆಗಳ ಸಹ ಸಂಯೋಜಕರಾದ ಮಲ್ಲಿಕಾರ್ಜುನ ಸ್ವಾಮಿ, ಗ್ರಾಮ್ ಸಂಸ್ಥೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ನವೀತ ತಿಮ್ಮಯ್ಯ, ಸಭೆಯಲ್ಲಿ ವಿವರಿಸಿ ಈ ದತ್ತಾಂಶಗಳಿಗೆ ಸಭೆಯ ಅನುಮೋದನೆ ಕೋರಿದರು.
ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮರ್ಪಕ ದತ್ತಾಂಶಗಳನ್ನು ಒದಗಿಸಬೇಕು. ಜಿಲ್ಲೆಯ ನೈಜ ಚಿತ್ರಣವನ್ನು ಒಳಗೊಂಡಂತೆ ವರದಿಗಳನ್ನು ಸಿದ್ದಪಡಿಸಬೇಕು. ಕೊಡಗು ಜಿಲ್ಲೆಯಲ್ಲಿ ಕಂಡುಬರುವ ವಿವಿಧ ಸಮಸ್ಯೆಗಳು ಹಾಗೂ ಸವಾಲುಗಳು ಹಾಗೂ ಪರಿಹಾರೋಪಾಯಗಳನ್ನು ಒಳಗೊಂಡಂತೆ ವಾಸ್ತವಿಕ ವರದಿಯನ್ನು ಸಿದ್ದಪಡಿಸುವಂತೆ ತಾಂತ್ರಿಕ ಬೆಂಬಲ ಸಂಸ್ಥೆಗಳ ಸಂಯೋಜಕರಿಗೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ.ಮುಖ್ಯ ಯೋಜನಾಧಿಕಾರಿ ಅಬ್ದುಲ್ ನಭಿ, ಟಿ.ಎನ್. ಯೋಜನಾ ನಿರ್ದೇಶಕರಾದ ಜೀವನ್ ಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರಾದ ಶಾಂತಗೌಡ ಗುಣಕಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಗಂಗಾಧರ ನಾಯ್ಕ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ನಗರಸಭೆ ಪೌರಾಯುಕ್ತರು ಸಭೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net