ವಿರಾಜಪೇಟೆ: ಮೀನುಗಾರಿಕೆ ಇಲಾಖೆಯಿಂದ ಮತ್ಸ್ಯಾಶ್ರಯ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲತ್ತುಗಳ ವಿತರಣೆ ಕಾರ್ಯಕ್ರಮವು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಗೃಹ ಕಚೇರಿಯಲ್ಲಿ ಶನಿವಾರ ನಡೆಯಿತು.
ಫಲಾನುಭವಿಗಳಿಗೆ ಮತ್ಸ್ಯಾಶ್ರಯ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣ, ಮೀನು ಹಿಡಿಯಲು ಬೇಕಾಗುವಂತಹ ಎಲ್ಲ ಸೌಲಭ್ಯಗಳ ವಿತರಣೆ ಹಾಗೂ ಮೀನು ಸಾಕಾಣಿಕೆಗಾಗಿ ಮೀನಿನ ಮರಿಗಳನ್ನು ವಿತರಿಸಿದ ಬಳಿಕ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಸರ್ಕಾರ ಬಡಜನರ ಏಳಿಗೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮೀನು ಸಾಕಣೆ ಮೂಲಕ ಜೀವನೋಪಾಯವನ್ನು ಕಂಡುಕೊಂಡವರಿಗೆ ಗೃಹ ನಿರ್ಮಾಣಕ್ಕೆ ಸಹಾಯಧನ ಹಾಗೂ ಮೀನುಗಾರಿಕೆಗೆ ಬೇಕಾದಂತಹ ಎಲ್ಲ ಸವಲತ್ತುಗಳನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ಫಲಾನುಭವಿಗಳು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ಮನೆ ಸವಲತ್ತು ಪಡೆದ ಫಲಾನುಭವಿಗಳಿಗೆ ಆದೇಶ ಪತ್ರವನ್ನು ವಿತರಿಸಿದರು. ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪಕ್ಷದ ಮುಖಂಡರು, ಕಾರ್ಯಕರ್ತರು, ಅರ್ಹ ಫಲಾನುಭವಿಗಳು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.