ಸೈನಿಕ ಶಾಲೆಗಳು, ರಾಷ್ಟ್ರೀಯ ಮಿಲಿಟರಿ ಶಾಲೆಗಳು ಮತ್ತು ಆರ್‌ಐಎಂಸಿ ನಿರ್ದೇಶಕ ಕೆ. ವಿ. ಅಜಿತ್ ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಗೆ ಸೋಮವಾರ ಭೇಟಿ ನೀಡಿದ್ದರು. ಶಾಲೆಯ ಅಶ್ವದಳ ಅಜಿತ್ ಅವರನ್ನು ಸ್ವಾಗತಿಸಿತು. ನಂತರ ಶಾಲೆಯ ಆವರಣದಲ್ಲಿರುವ ಯುದ್ದ ವೀರರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿದರು. ಶಾಲೆಯ ಪರೇಡ್ ಮೈದಾನದಲ್ಲಿ ಗೌರವ ವಂದನೆ ಅರ್ಪಿಸಲಾಯಿತು. ನಂತರ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ಕೆ. ವಿ. ಅಜಿತ್ ಯುಪಿಎಸ್‌ಸಿ, ಎನ್‌ಡಿಎ ಪರೀಕ್ಷೆಗಳು, ಬೋರ್ಡ್ ಪರೀಕ್ಷಾ ಫಲಿತಾಂಶಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಸಾಧಿಸಿದ ಅಭೂತಪೂರ್ವ ಯಶಸ್ಸನ್ನು ಶ್ಲಾಘಿಸಿದರು. ಇದರೊಂದಿಗೆ ವಿದ್ಯಾರ್ಥಿಗಳು ಸಂಸ್ಥೆಯ ಮೂಲ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಮತ್ತು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಶ್ರಮಿಸಬೇಕು. ಕೊಡಗು ಸೈನಿಕ ಶಾಲೆಯ ವಿದ್ಯಾರ್ಥಿಗಳು ಉನ್ನತ ಗುರಿಗಳನ್ನು ತಲುಪುವಲ್ಲಿ ಯಾವುದೇ ಅವಕಾಶವನ್ನು ವ್ಯರ್ಥ ಮಾಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು.