ಶನಿವಾರಸಂತೆ: ಸ್ಥಳೀಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಆಟೋ ನಿಲ್ದಾಣಕ್ಕೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿ, ಕ್ಷೇತ್ರದ ಗ್ರಾಮೀಣ ಸೇರಿದಂತೆ ಎಲ್ಲ ಪ್ರದೇಶದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗುತ್ತಿದೆ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳು ಕ್ಷೇತ್ರದಲ್ಲಿ ಆಗುತ್ತಿದೆ. ಶನಿವಾರಸಂತೆಯಲ್ಲಿ ಅನೇಕ ವರ್ಷದ ಬೇಡಿಕೆಯಾಗಿದ್ದ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಇನ್ನಷ್ಟು ಅಭಿವೃದ್ಧಿಪಡಿಸುವ ಯೋಜನೆ ಇದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಷ್ಟ ಎನ್ನುವ ವಿರೋಧಿಗಳಿಗೆ ಕ್ಷೇತ್ರ ಅಭಿವೃದ್ಧಿ ಪಡಿಸುವ ಮೂಲಕ ಉತ್ತರ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಶನಿವಾರಸಂತೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಆದಿತ್ಯಗೌಡ, ಆಟೋ ಚಾಲಕರ ಸಂಘದ ಅಧ್ಯಕ್ಷ ರವಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಜನಾರ್ದನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಕೆ.ಚಂದ್ರು, ಶಿವಾನಂದ, ಅರ್ಚಕ ಸುಹಾಸ್ ಭಟ್ ಇತರರು ಇದ್ದರು.