ಜೀವನದಲ್ಲಿ ಸುಸ್ಥಿರ ಆರಂಭಕ್ಕೆ ಸ್ತನ್ಯಪಾನ ಅನಿವಾರ್ಯ

ಅರಿವು ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು. ಪ್ರಸನ್ನ ಕುಮಾರ್, ಸವಿತಾ ಕೀರ್ತನ್, ನಿತಿನ್ ಇತರರಿದ್ದರು.
ಅರಿವು ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು. ಪ್ರಸನ್ನ ಕುಮಾರ್, ಸವಿತಾ ಕೀರ್ತನ್, ನಿತಿನ್ ಇತರರಿದ್ದರು.
Published on

ಮಡಿಕೇರಿ: ಪ್ರತಿ ವರ್ಷ ಆ.೧ರಿಂದ ೭ರವರೆಗೆ ವಿಶ್ವಾದ್ಯಂತ ಈ ಸಪ್ತಾಹ ಆಚರಿಸಲಾಗುತ್ತಿದ್ದು, ಸ್ತನ್ಯಪಾನದ ಕುರಿತು ಜನಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಸನ್ನ ಕುಮಾರ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಜಾದ್ ನಗರ, ಗದ್ದಿಗೆ, ಕುಂಬಳಗೇರಿ ಹಾಗೂ ಉಕ್ಕುಡ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ವರ್ಷದ ಘೋಷವಾಕ್ಯದ ಉದ್ದೇಶವೆಂದರೆ ಸ್ತನ್ಯಪಾನ ಪ್ರಚಾರದಲ್ಲಿ ಆಗಿರುವ ಪ್ರಗತಿಯನ್ನು ಮೌಲ್ಯಮಾಪನ ಮಾಡುವುದಾಗಿದೆ. ಅಪೌಷ್ಟಿಕತೆ ನಿವಾರಣೆ ಹಾಗೂ ಆಹಾರ ಭದ್ರತೆಯಲ್ಲಿ ಸ್ತನ್ಯಪಾನದ ಪಾತ್ರವನ್ನು ಬಲಪಡಿಸಲಾಗುವುದು. ತಾಯಂದಿರಿಗೆ ನೆರವಾಗುವ ಆರೋಗ್ಯ ಕಾರ್ಯಕ್ರಮಗಳು ಹಾಗೂ ನೀತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಕೌನ್ಸಿಲರ್ ಮನ್ಸೂರ್ ಮಾತನಾಡಿ, ಅಂಗನವಾಡಿಗಳ ಮೂಲಕ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಫಲಾನುಭವಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇಂತಹ ಅರಿವು ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ ಆರೋಗ್ಯ ಮತ್ತು ಪೌಷ್ಟಿಕತೆ ಕುರಿತ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಮಗು ಜನಿಸಿದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸುವುದು ಅತ್ಯಗತ್ಯ. ಮೊದಲ ಆರು ತಿಂಗಳು ಕೇವಲ ತಾಯಿಯ ಹಾಲನ್ನೇ ನೀಡಬೇಕು. ನಂತರ ೨ ವರ್ಷದವರೆಗೆ ವಯೋಸೂಕ್ತ ಪೂರಕ ಆಹಾರದೊಂದಿಗೆ ಸ್ತನ್ಯಪಾನ ಮುಂದುವರಿಸಬೇಕು ಎಂದು ತಿಳಿಸಿದರು.
ಸ್ತನ್ಯಪಾನದಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ತಾಯಂದಿರಲ್ಲಿ ಸ್ತನ ಹಾಗೂ ಗರ್ಭಾಶಯದ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ. ಉದ್ಯೋಗಿ ಮಹಿಳೆಯರಿಗೆ ಸೂಕ್ತ ರಜೆ ಮತ್ತು ಸ್ತನ್ಯಪಾನಕ್ಕೆ ಅನುಕೂಲಕರ ಸೌಲಭ್ಯ ಬೇಕು ಎಂದು ಹೇಳಿದ ಅವರು, ಗರ್ಭಿಣಿಯರು ನಿತ್ಯ ಆಹಾರದಲ್ಲಿ ಸೊಪ್ಪು, ಸ್ಥಳೀಯ ಹಣ್ಣುಗಳನ್ನು ಬಳಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು. ಪೋಷಣ್ ಜಿಲ್ಲಾ ಸಂಯೋಜಕ ನಿತಿನ್, ಆಜಾದ್ ನಗರ ಅಂಗನವಾಡಿ ಸಹಾಯಕಿ ಪ್ರೇಮಾ, ಕಾರ್ಯಕರ್ತೆ ಪಾರಿಜಾತ್, ಗದ್ದಿಗೆ ಕಾರ್ಯಕರ್ತೆ ಅನ್ನತ್ ಬೇಬಿ, ಉಕ್ಕುಡ ಸಹಾಯಕಿ ಸ್ನೇಹ ಹಾಗೂ ಗರ್ಭಿಣಿಯರು, ಬಾಣಂತಿಯರು, ಅಂಗನವಾಡಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net