ಕೊಡಗು ಜಿಲ್ಲೆಯಲ್ಲಿ ತೀವ್ರವಾಗಿರುವ ಕಾಡಾನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಹಾಗೂ ಅರಣ್ಯ ಇಲಾಖೆ ವಿಫಲವಾಗಿವೆ ಎಂದು ಆರೋಪಿಸಿ ಸ್ಥಳೀಯ ಮುಖಂಡರು ಆ.31ರಂದು ಸಿದ್ದಾಪುರ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಬಂದ್‌ಗೆ ಕರೆ ನೀಡಿದರು.
ಸಿದ್ದಾಪುರದಲ್ಲಿ ಹಮ್ಮಿಕೊಂಡಿದ್ದ ಸರ್ವಪಕ್ಷ ಸಭೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಕಾಡಾನೆ ಹಾವಳಿಯಿಂದ ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗಿದ್ದು, ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.
ಸುಜಯ್ ಬೋಪಯ್ಯ ಮಾತನಾಡಿ, ಕೊಡಗಿನ ವಿವಿಧ ಭಾಗಗಳ ತೋಟಗಳಲ್ಲಿ ಸುಮಾರು 200ರಿಂದ 250 ಕಾಡಾನೆಗಳು ಬೀಡುಬಿಟ್ಟಿವೆ. ಜನರ ಜೀವ ರಕ್ಷಣೆಗೆ ರಾಜಕೀಯ ರಹಿತ ಹೋರಾಟ ಅಗತ್ಯವಿದ್ದು, ಆನೆಗಳನ್ನು ಕಾಡಿಗೆ ಮರಳಿಸಿ, ಮತ್ತೆ ನಾಡಿಗೆ ಬಾರದಂತೆ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾಬು ಮಾತನಾಡಿ, ವಿಧಾನಸಭೆ ಹಾಗೂ ಸಂಸತ್ತಿನ ಒಳಗೆ ಮತ್ತು ಹೊರಗೆ ಜನಪ್ರತಿನಿಧಿಗಳು ಧ್ವನಿ ಎತ್ತಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಆನೆ ಓಡಿಸುವ ಕಾರ್ಯಾಚರಣೆಗೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶಾಶ್ವತ ಪರಿಹಾರ ರೂಪಿಸುವವರೆಗೆ ಹೋರಾಟ ಮುಂದುವರಿಸಬೇಕು ಎಂದರು.
ಚೇನಂಡ ಪೂಣಚ್ಚ ಮಾತನಾಡಿ, ಸಿದ್ದಾಪುರ, ನೆಲ್ಯಹುದಿಕೇರಿ, ಮಾಲ್ದಾರೆ ಹಾಗೂ ಇಂಜಲಗೆರೆ ಭಾಗಗಳಲ್ಲಿ ಉಪ ಅರಣ್ಯ ಕಚೇರಿ ಸ್ಥಾಪಿಸಿ, ಸ್ಥಳೀಯವಾಗಿ ತ್ವರಿತ ಕಾರ್ಯಾಚರಣೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಕಾಡಿಗೆ ಮರಳಿಸುವುದು, ವೈಜ್ಞಾನಿಕ ತಡೆ ಕ್ರಮ ಕೈಗೊಳ್ಳುವುದು ಹಾಗೂ ರೈತರು, ಕಾರ್ಮಿಕರ ಜೀವ ಮತ್ತು ಬೆಳೆ ರಕ್ಷಿಸುವಂತೆ ಒತ್ತಾಯಿಸಿ ಆಗಸ್ಟ್ 31ರಂದು ಸಿದ್ದಾಪುರ, ನೆಲ್ಯಹುದಿಕೇರಿ, ಮಾಲ್ದಾರೆ, ಪಾಲಿಬೆಟ್ಟ, ಅಮ್ಮತ್ತಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬಂದ್ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ರೈತರು, ಕಾರ್ಮಿಕರು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಬಂದ್ ಬೆಂಬಲಿಸುವಂತೆ ಮನವಿ ಮಾಡಲಾಯಿತು.